ಕೋಮು ದ್ವೇಷ ಬಿತ್ತುವವರೇ ಒಮ್ಮೆ ಇತ್ತ ನೋಡಿ: ಮುಸ್ಲಿಮರು ಹೆಣೆದ ಕೂದಲಿಲ್ಲದೆ ಬಂಗಾಳದಲ್ಲಿ ದುರ್ಗಾಪೂಜೆಯೇ ಅಪೂರ್ಣ

ಪಶ್ಚಿಮ ಬಂಗಾಳದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ ಕಡಿಮೆ, ಅಲ್ಲಿ ನುಸುಳುಕೋರರ ಹಾವಳಿ ಹೆಚ್ಚು, ಅವರನ್ನ ಓಡಿಸಲು ವಿಶೇಷ ಮತ ಪರಿಷ್ಕರಣೆ (ಎಸ್‌ಐಆರ್‌) ಮಾಡಲಾಗುತ್ತಿದೆ ಎಂಬೆಲ್ಲಾ ಮಾತುಗಳನ್ನ ನಾವು ಆಗಾಗ ಕೇಳುತ್ತಿರುತ್ತೇವೆ. ರಾಜಕೀಯವಾಗಿ ಮತ್ತು ಸೋಶಿಯಲ್‌ ಮಿಡಿಯಾದಲ್ಲಿ ಇಂತಹ ಸುದ್ದಿಗಳು ಸದಾ ಹರಿದಾಡುತ್ತಿರುತ್ತವೆ. ಆದರೆ ವಾಸ್ತವದಲ್ಲಿ ಅಲ್ಲಿನವರ ಬದುಕು ತುಂಬ ಭಿನ್ನವಾಗಿದೆ.

ಹೌದು, ಪಶ್ಚಿಮ ಬಂಗಾಳದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಸಾಮರಸ್ಯ ಎಷ್ಟರಮಟ್ಟಿಗಿದೆ ಎಂದರೆ, ನವರಾತ್ರಿ ಉತ್ಸವದಲ್ಲಿ ಕೂರಿಸುವ ದುರ್ಗಾ ಮಾತೆಯ ಮೂರ್ತಿಗೆ ಮುಸ್ಲಿಂ ಸಮುದಾಯದವರು ತಯಾರಿಸುವ ಕೂದಲೇ ಬೇಕು ಎಂಬ ವಿಶಿಷ್ಟ ಸಂಪ್ರದಾಯವೊಂದು ಶತಮಾನಗಳಿಂದ ಜೀವಂತವಾಗಿದೆ. ಇದು ಭಾರತದ ನಿಜವಾದ ಸೌಹಾರ್ದತೆಯ ಪ್ರತೀಕ ಅಲ್ಲವೇ?.

Muslim Artisans In Bengal Make Hair For Maa Durga Idols A Century-Old Tale Of Communal Harmony

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಬಂಗಾಳದ ಪ್ರತಿ ಮೂಲೆ ಮೂಲೆಗಳಲ್ಲಿ ನಿಲ್ಲಿಸುವ ಮಾತೆ ದುರ್ಗೆಯ ಸುಂದರವಾದ ಮೂರ್ತಿಗಳು ಜಗತ್ಪ್ರಸಿದ್ಧ. ಆದರೆ, ಈ ಸುಂದರವಾದ ದುರ್ಗಾ ಮೂರ್ತಿಗಳಿಗೆ ಅದ್ಭುತವಾಗಿ ಕಾಣುವ ಕೃತಕ ಕೂದಲು ಅಥವಾ ಈ ವಿಗ್ ತಯಾರಿಸುವವರು ಹೌರಾ ಜಿಲ್ಲೆಯ ಪರ್ಬತಿಪುರ ಎಂಬ ಸಣ್ಣ ಗ್ರಾಮದ ಮುಸ್ಲಿಂ ಕುಶಲಕರ್ಮಿಗಳ ಕೈಚಳಕ.

ಶತಮಾನಗಳಿಂದ ನಡೆದುಬಂದಿರುವ ಸಂಪ್ರದಾಯ

ಪರ್ಬತಿಪುರ ಗ್ರಾಮದಲ್ಲಿರುವ ಮುಸ್ಲಿಂ ಕುಟುಂಬಗಳು ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಈ ವಿಶಿಷ್ಟವಾದ ಕರಕುಶಲ ಕಲೆಯನ್ನ ಅಡೆತಡೆಯಿಲ್ಲದೆ ಮುಂದುವರೆಸಿಕೊಂಡು ಬಂದಿವೆ. ತಲೆಮಾರುಗಳಿಂದ ಬಂದ ಈ ವೃತ್ತಿಯನ್ನ ಅವರು ಕೇವಲ ಒಂದು ಕೆಲಸವಾಗಿ ನೋಡದೆ, ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡುತ್ತಿದ್ದಾರೆ.

ಪ್ರತಿ ವರ್ಷ ಬರುವ ನವರಾತ್ರಿ ಮತ್ತು ದುರ್ಗಾ ಪೂಜೆಯ ಸಮಯದಲ್ಲಿ ದುರ್ಗಾ ದೇವಿಯ ಮೂರ್ತಿಯ ಅಲಂಕಾರಕ್ಕೆ ಈ ಮುಸ್ಲಿಂ ಕುಶಲಕರ್ಮಿಗಳು ತಯಾರಿಸಿದ ಕೂದಲು ತುಂಬ ಮುಖ್ಯ. ಈ ಕೂದಲುಗಳಿಲ್ಲದೆ ಪಂಡಾಲ್‌ಗಳಲ್ಲಿ ವಿರಾಜಮಾನಳಾಗುವ ದುರ್ಗಾ ದೇವಿಯ ಮೂರ್ತಿಯ ಅಲಂಕಾರ ಸಂಪೂರ್ಣವಾಗುವುದಿಲ್ಲ.

ಸೆಣಬಿನಿಂದ ದುರ್ಗಾ ಮೂರ್ತಿಗೆ ಕೂದಲು ತಯಾರಿಕೆ

ಮಾತೆ ದುರ್ಗೆಗಾಗಿ ಈ ಕೃತಕ ಕೂದಲನ್ನ ತಯಾರಿಸುವ ಪ್ರಕ್ರಿಯೆ ಅತ್ಯಂತ ಸೂಕ್ಷ್ಮ ಹಾಗೂ ಅಪಾರ ಶ್ರಮದಾಯಕವಾಗಿದೆ. ಕಚ್ಚಾ ಸೆಣಬನ್ನು ತಂದು, ಅದನ್ನ ಸರಿಯಾದ ಹದದಲ್ಲಿ ಕುದಿಸಿ, ನೈಸರ್ಗಿಕ ಬಣ್ಣ ಹಾಕಿ ಅತ್ಯಂತ ಜಾಗರೂಕತೆಯಿಂದ ಸಂಸ್ಕರಿಸಲಾಗುತ್ತದೆ.

ಅಂತಿಮವಾಗಿ ಈ ಸೆಣಬು ಮಾತೆ ದುರ್ಗೆಯ ವಿಶಿಷ್ಟವಾದ, ಕಪ್ಪು ಬಣ್ಣದ ಹಾಗೂ ಆಕರ್ಷಕವಾದ ಕೃತಕ ಕೂದಲಾಗಿ ಮಾರ್ಪಡುತ್ತದೆ. ಈ ಕುಶಲಕರ್ಮಿಗಳಿಗೆ ಇದು ಕೇವಲ ಉದ್ಯೋಗವಲ್ಲ, ಬದಲಾಗಿ ಇದೊಂದು ಪವಿತ್ರವಾದ ಕಲೆ ಮತ್ತು ಜವಾಬ್ದಾರಿ. ಅವರು ನೀಡುವ ಈ ಅಂತಿಮ ಸ್ಪರ್ಶದಿಂದಲೇ ಲಕ್ಷಾಂತರ ಭಕ್ತರು ಆರಾಧಿಸುವ ಮಣ್ಣಿನ ದುರ್ಗಾ ಮೂರ್ತಿಗೆ ನಿಜವಾದ ಜೀವ ಕಳೆ ಬರುತ್ತದೆ.

ಕೃಷಿಯ ಜೊತೆಗೆ ಕರಕುಶಲ ಕಲೆಗೆ ಒತ್ತು

ಇಲ್ಲಿ ನೀವು ಗಮನಿಸಿಬೇಕಾದ ಸಂಗತಿಯೆಂದರೆ, ಈ ಮುಸ್ಲಿಂ ಕುಶಲಕರ್ಮಿಗಳು ವರ್ಷದ ಬಹುಪಾಲು ಸಮಯವನ್ನ ಕೃಷಿ ಚಟುವಟಿಕೆಗಳಲ್ಲಿ ಕಳೆಯುತ್ತಾರೆ. ವ್ಯವಸಾಯವೇ ಅವರ ಮುಖ್ಯ ಜೀವನೋಪಾಯ. ಆದರೆ, ವರ್ಷದ ಹಬ್ಬದ ಸೀಸನ್ ಶುರುವಾಗುತ್ತಿದ್ದಂತೆ, ತಮ್ಮ ದೈನಂದಿನ ಕೃಷಿ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ಈ ಶತಮಾನದಷ್ಟು ಹಳೆಯದಾದ ಕರಕುಶಲ ಕಲೆಗೆ ಮರಳುತ್ತಾರೆ.

ತಮ್ಮ ಮುತ್ತಾತ, ತಾತಂದಿರು ಕಲಿಸಿಕೊಟ್ಟ ಈ ಕಲೆಯನ್ನ ಅದೇ ಪ್ರೀತಿ, ಕಾಳಜಿ ಮತ್ತು ಶ್ರದ್ಧೆಯಿಂದ ಇಂದಿನ ಯುವ ಪೀಳಿಗೆಯೂ ಮುಂದುವರಿಸುತ್ತಿದೆ.

ಭಾರತದ ನಿಜವಾದ ಸೌಂದರ್ಯ ಮತ್ತು ಕೋಮು ಸೌಹಾರ್ದತೆ ಕೇವಲ ರಾಜಕಾರಣಿಗಳ ಭಾಷಣಗಳಲ್ಲಿ, ವೇದಿಕೆಗಳಲ್ಲಿ ಅಥವಾ ಮಕ್ಕಳ ಪುಸ್ತಕದ ಪುಟಗಳಲ್ಲಿ ಕಂಡುಬರುವುದಿಲ್ಲ. ಬದಲಾಗಿ, ತಲೆಮಾರುಗಳಿಂದ ಪರಸ್ಪರರ ಸಂಪ್ರದಾಯಗಳನ್ನ ಗೌರವಿಸುತ್ತಾ, ಅವುಗಳನ್ನು ಒಟ್ಟಾಗಿ ಆಚರಿಸುತ್ತಾ, ಪ್ರೀತಿಯಿಂದ ಬೆಸೆಯುವ ಇಂತಹ ಅನಾಮಿಕ ಕುಶಲಕರ್ಮಿಗಳ ಕೈಗಳಲ್ಲಿ ಜೀವಂತವಾಗಿ ಅಡಗಿದೆ.

ಪಶ್ಚಿಮ ಬಂಗಾಳದ ಪರ್ಬತಿಪುರ ಗ್ರಾಮದ ಈ ಮುಸ್ಲಿಂ ಕುಟುಂಬಗಳ ಕಥೆಯು ಇಂದಿನ ಸಮಾಜಕ್ಕೆ, ಇಡೀ ದೇಶಕ್ಕೆ ಅನ್ಯೋನ್ಯತೆ ಮತ್ತು ಸೌಹಾರ್ದತೆಯ ಬಹುದೊಡ್ಡ ಪಾಠವನ್ನ ಹೇಳಿಕೊಡುತ್ತದೆ. ಧರ್ಮ, ಜಾತಿಗಳನ್ನ ಮೀರಿ ಬೆಳೆದ ಇವರ ಈ ಕಲೆಗೆ ಎಲ್ಲರ ಮೆಚ್ಚುಗೆ ಸೂಚಿಸಲೇಬೇಕು ಅಲ್ಲವೇ?.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+