ಕರ್ನಾಟಕದ 4 ಏರ್‌ಪೋರ್ಟ್ ಹೆಸರು ಮರುನಾಮಕರಣ ಕೇಂದ್ರಕ್ಕೆ ಸಂಸದ ಜಗದೀಶ್ ಶೆಟ್ಟರ್ ಮನವಿ
ನವದೆಹಲಿ: ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಬೆಂಗಳೂರಿನ ಹೈಸ್ಪೀಡ್ ರೈಲಿನಿಂದ ಬೆಂಗಳೂರು ಹಾಗೂ ಕರ್ನಾಟಕಕ್ಕೆ ಪ್ರಯೋಜನವಿಲ್ಲ ಎನ್ನುವ ಚರ್ಚೆಯ ನಡುವೆಯೇ ಕೇಂದ್ರ ಸರ್ಕಾರವು ಕೆಲವೊಂದು ನಿರ್ದಿಷ್ಟ ಬದಲಾವಣೆಗೆ ಮುಂದಾಗುತ್ತಿದೆ ಎನ್ನಲಾಗಿದೆ. ಇದೀಗ ಬೆಳಗಾವಿಗೆ ಸಂಬಂಧಿಸಿದಂತೆಯೂ ಅಪ್ಡೇಟ್ಸ್ ಬರುತ್ತಿದೆ. ಇದರೊಂದಿಗೆ ಕರ್ನಾಟಕದ 4 ಪ್ರಮುಖ ಏರ್‌ಪೋರ್ಟ್‌ಗಳ ಹೆಸರು ಮರುನಾಮಕರಣದ ಬಗ್ಗೆಯೂ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ.
ಕೇಂದ್ರ ವಿಮಾನಯಾನ ಸಚಿವರಾದ ಕೆ. ರಾಮಮೋಹನ ನಾಯ್ಡು ಅವರನ್ನು ಭೇಟಿಯಾಗಿ, ಬೆಳಗಾವಿ ವಿಮಾನ ನಿಲ್ದಾಣದಿಂದ ದೇಶದ ವಿವಿಧ ಹಾಗೂ ಪ್ರಮುಖ ನಗರಗಳಿಗೆ ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯ ವತಿಯಿಂದ ವಿಮಾನಯಾನ ಸೇವೆಯನ್ನು ಒದಗಿಸುವ ಬಗ್ಗೆ ಚರ್ಚಿಸಿ, ಮನವಿ ಸಲ್ಲಿಸಲಾಯಿತು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಏರ್‌ಪೋರ್ಟಗಳ ಹೆಸರು ಮರುನಾಮಕರಣದ ಬಗ್ಗೆಯೂ ಚರ್ಚೆ ನಡೆದಿದೆ.

ಬೆಳಗಾವಿ ನಗರವು ಎಲ್ಲ ರಂಗದಲ್ಲಿ, ವಿಶೇಷವಾಗಿ ಉದ್ಯಮೀಕರಣ ಕ್ಷೇತ್ರದಲ್ಲಿ ಬಹುವೇಗವಾಗಿ ಬೆಳೆಯುತ್ತಿರುವ ನಗರ. ಬೆಳಗಾವಿ ವಿಮಾನ ನಿಲ್ದಾಣವು ಕೇಂದ್ರ ಸರ್ಕಾರದ ಉಡಾನ್ ಯೋಜನೆಯಲ್ಲಿ ಆಯ್ಕೆಯಾಗಿ, ಆ ನಂತರದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅನೇಕ ನಗರಗಳಿಗೆ ಈ ಮೊದಲು ಒದಗಿಸಲಾಗುತ್ತಿದ್ದ ವಿಮಾನಯಾನ ಸೇವೆಯನ್ನು ಸಂಬಂಧಿತ ಸಂಸ್ಥೆಗಳು ರದ್ದುಪಡಿಸಿದ್ದು, ಇದರಿಂದಾಗಿ ಉದ್ಯಮದಾರರಿಗೆ ಹಾಗೂ ಇಲ್ಲಿನ ನಿವಾಸಿಗಳಿಗೆ ಸಾಕಷ್ಟು ತೊಂದರೆಯಾಗಿದೆ.
ಈ ನಿಟ್ಟಿನಲ್ಲಿ ಪ್ರಮುಖ ನಗರಗಳಾದ ಮುಂಬೈ, ಚೆನ್ನೈ, ಸೂರತ್, ಪುಣೆ ಹೀಗೆ ಹಲವು ನಗರಗಳಿಗೆ ಇಂಡಿಗೋ ಮತ್ತು ಏರ್ ಇಂಡಿಯಾ ಸಂಸ್ಥೆಯಿಂದ ಈ ಮಾರ್ಗದಲ್ಲಿ ವಿಮಾನಯಾನ ಸೇವೆಯನ್ನು ಒದಗಿಸುವ ಬಗ್ಗೆ ಆಯಾ ಸಂಸ್ಥೆಗಳಿಗೆ ಅಗತ್ಯ ನಿರ್ದೇಶನ ನೀಡುವಂತೆ ಕೋರಲಾಯಿತು ಎಂದು ಅವರು ಹೇಳಿದ್ದಾರೆ.
ಈ ವಿಮಾನ ನಿಲ್ದಾಣಗಳ ಹೆಸರು ಮರುನಾಮಕರಣ
ಅದೆ ರೀತಿಯಾಗಿ 1) ಬೆಳಗಾವಿ, 2) ಹುಬ್ಬಳ್ಳಿ, 3) ಶಿವಮೊಗ್ಗ ಹಾಗೂ 4) ವಿಜಯಪುರ, ವಿಮಾನ ನಿಲ್ದಾಣಗಳನ್ನು ಅನುಕ್ರಮವಾಗಿ 1)ಕಿತ್ತೂರ ರಾಣಿ ಚನ್ನಮ್ಮ ಏರ್‌ಪೋರ್ಟ, 2)ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಏರ್‌ಪೋರ್ಟ, 3) ರಾಷ್ಟ್ರಕವಿ ಡಾ: ಕೆ.ವಿ ಪುಟ್ಟಪ್ಪ (ಕುವೆಂಪು) ಏರ್‌ಪೋರ್ಟ ಹಾಗೂ 4) ಜಗಜ್ಯೋತಿ ಬಸವೇಶ್ವರ ಏರ್‌ಪೋರ್ಟ ಎಂದು ಮರುನಾಮಕರಣ ಮಾಡುವ ಕುರಿತಾದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದಿಂದ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗಿದ್ದು, ಶೀಘ್ರ ಅನುಮೋದನೆ ನೀಡುವಂತೆ ನೋಡಿಕೊಳ್ಳುವಂತೆಯೂ ಸಹ ವಿಮಾನಯಾನ ಸಚಿವರಲ್ಲಿ ಮನವಿ ಮಾಡಿದ್ದೇನೆ.
ಪ್ರಸ್ತಾಪಿತ ವಿಷಯವಾಗಿ ಆದಷ್ಟು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ವಿಮಾನಯಾನ ಸಚಿವರಾದ ಕೆ. ರಾಮಮೋಹನ್ ನಾಯ್ಡು ಅವರು ಭರವಸೆಯನ್ನು ನೀಡಿದ್ದಾರೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾದ ಜಗದೀಶ್ ಶೆಟ್ಟರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.












Click it and Unblock the Notifications