ತಾಯಿ-ಮಗಳನ್ನು ಅಪಹರಿಸಿ ನಾಲ್ಕು ದಿನ ಸತತ ಅತ್ಯಾಚಾರ ಮಾಡಿದ ದುಷ್ಟರು
ಸಂಭಲ್ (ಉತ್ತರ ಪ್ರದೇಶ) ಜೂನ್ 27: ಬರೇಲಿ ರೈಲ್ವೇ ಸ್ಟೇಶನ್ನಿನಿಂದ ಮಹಿಳೆ ಮತ್ತು ಆಕೆಯ ಮಕ್ಕಳನ್ನು ಅಪಹರಿಸಿ, ಮಹಿಳೆಯ ಮೇಲೆ ಸತತ ನಾಲ್ಕು ದಿನಗಳ ಕಾಲ ಇಬ್ಬರು ನೀಚರು ಅತ್ಯಾಚಾರ ಮಾಡಿದ ಘಟನೆ ಉತ್ತರ ಪ್ರದೇಶದ ಸಂಭಲ್ ನ ಗಿನ್ನೌರ್ ಎಂಬಲ್ಲಿ ನಡೆದಿದೆ.
ತನ್ನ ಇಬ್ಬರು ಮಕ್ಕಳೊಂದಿಗೆ ಪಾಣಿಪತ್ ಗೆ ಹೊರಟಿದ್ದ 40 ವರ್ಷದ ಮಹಿಳೆ ಮತ್ತು ಮಕ್ಕಳಿಗೆ ಬರೇಲಿಯ ರೈಲು ನಿಲ್ದಾಣದ ಬಳಿ ಮತ್ತು ಬರುವ ಔಷಧ ನೀಡಿ, ಮೂವರೂ ನಿದ್ದೆ ಹೋದ ಬಳಿಕ ಇಬ್ಬರು ದುಷ್ಟರು, ಅವರನ್ನು ಹತ್ತಿರದ ಹಳ್ಳಿಯೊಂದಕ್ಕೆ ಕರೆದೊಯ್ದಿದ್ದಾರೆ. ಅವರನ್ನು ನಾಲ್ಕು ದಿನ ಅಲ್ಲಿಯೇ ಕೂಡಿಟ್ಟುಕೊಂಡು ಮಹಿಳೆಯ ಮೇಲೆ ನಾಲ್ಕು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ.

ಆ ದುಷ್ಟರಿಂದ ನಾಲ್ಕು ದಿನದ ಬಳಿಕ ತಾಯಿ ಮತ್ತು 13 ವರ್ಷದ ಮಗ ತಪ್ಪಿಸಿಕೊಂಡು ಬಂದಿದ್ದು, 11 ವರ್ಷದ ಮಗಳು ನಾಪತ್ತೆಯಾಗಿದ್ದಾಳೆಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇಬ್ಬರು ಅಪರಿಚಿತರು ಈ ಕೃತ್ಯ ಎಸಗಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಹೇಳಿದ್ದು, ಇಲ್ಲಿನ ಚಾಂಡೌಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಒಂದು ವಾರದ ಹಿಂದಷ್ಟೇ ಹರ್ಯಾಣದಲ್ಲಿ ಚಲಿಸುವ ಕಾರಿನಲ್ಲೇ ಮಹಿಳೆಯೊಬ್ಬರ ಮೇಲೆ ಸತತ 8 ಗಂಟೆಗಳ ಕಾಲ ಅತ್ಯಾಚಾರ ನಡೆದ ಘಟನೆ ವರದಿಯಾಗಿತ್ತು. ಘಟನೆ ನಡೆದ ಎರಡು ದಿನದ ನಂತರ ಆರು ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications