ಮೋದಿ ನಾಲ್ಕು ವರ್ಷದ ವಿದೇಶ ಪ್ರಯಾಣ ವೆಚ್ಚ 355 ಕೋಟಿ
ಬೆಂಗಳೂರು, ಜೂನ್ 28: ಪ್ರಧಾನಿ ನರೇಂದ್ರ ಮೋದಿ ಅವರ ನಾಲ್ಕು ವರ್ಷಗಳ ವಿದೇಶ ಪ್ರಯಾಣಕ್ಕೆ 355 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.
48 ತಿಂಗಳ ಅಧಿಕಾರಾವಧಿಯಲ್ಲಿ ಮೋದಿ ಅವರು 41 ಪ್ರವಾಸಗಳನ್ನು ಕೈಗೊಂಡಿದ್ದು, 52 ದೇಶಗಳಿಗೆ ಭೇಟಿ ನೀಡಿದ್ದಾರೆ. ಒಟ್ಟು 165 ದಿನಗಳನ್ನು ಅವರು ವಿದೇಶದಲ್ಲಿ ಕಳೆದಿದ್ದಾರೆ.
ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡದ್ ಎಂಬುವವರು ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ಈ ವಿವರಗಳು ದೊರೆತಿವೆ.

ಈ 41 ಪ್ರವಾಸಗಳ ಪೈಕಿ ಅತಿ ಹೆಚ್ಚು ವೆಚ್ಚವಾಗಿರುವುದು 2015ರ ಏಪ್ರಿಲ್ 9 ರಿಂದ 15ರ ಅವಧಿಯಲ್ಲಿ ಫ್ರಾನ್ಸ್, ಜರ್ಮನಿ ಮತ್ತು ಕೆನಡಾಗಳ ಒಂಬತ್ತು ದಿನಗಳ ಭೇಟಿಯ ವೇಳೆ.
ಈ ವೇಳೆ ಪ್ರವಾಸಕ್ಕೆ ಸುಮಾರು 31 ಕೋಟಿ ವೆಚ್ಚವಾಗಿದೆ. 2014ರ ಜೂನ್ 15-16ರಂದು ಭೂತಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ 2.45 ಕೋಟಿ ರೂ ಖರ್ಚಾಗಿದ್ದು, ಇದು ಅತಿ ಕಡಿಮೆ ಮೊತ್ತ ಎಂದು ಮಾಹಿತಿ ನೀಡಲಾಗಿದೆ.
ಆದರೆ, ಪ್ರಧಾನಿ ಅವರ ಆಂತರಿಕ ಪ್ರವಾಸದ ವೆಚ್ಚಗಳು ಮತ್ತು ಈ ಸಂದರ್ಭಗಳಲ್ಲಿ ಅವರಿಗೆ ನೀಡಿದ ಭದ್ರತೆಯ ವೆಚ್ಚಗಳ ಮಾಹಿತಿಯನ್ನು ಪ್ರಧಾನಿ ಕಾರ್ಯಾಲಯ ನೀಡಲು ನಿರಾಕರಿಸಿದೆ.












Click it and Unblock the Notifications