Cyclone-Chennai Flood: 70-80 ವರ್ಷಗಳಲ್ಲಿಯೇ ಅತ್ಯಧಿಕ ಮಳೆಗೆ ಚೆನ್ನೈ ಸಾಕ್ಷಿ, ಪ್ರವಾಹ
ಚೆನ್ನೈ, ಡಿಸೆಂಬರ್ 04: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿ ಕೆಲವು ರಾಜ್ಯಗಳಲ್ಲಿ ಭಾರಿ ಮಳೆಗೆ ಕಾರಣವಾಗಿರುವ ಮೈಚಾಂಗ್ ಚಂಡಮಾರುತದಿಂದ (Michaung cyclone) ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಭಾರೀ ಮಳೆ ಸುರಿದು ತೀವ್ರ ಸ್ವರೂಪದ ಪ್ರವಾಹ ಉಂಟಾಗಿದೆ. ಅಲ್ಲದೇ ಈ ಮಹಾಮಳೆಯು ಸುಮಾರು ಎಂಟು ದಶಕಗಳಲ್ಲಿ ಕಂಡು ಕೇಳರಿಯದಂತೆ ಮಳೆ ಎಂದು ಸರ್ಕಾರವೇ ತಿಳಿಸಿದೆ.
ತಮಿಳುನಾಡು ಪೌರಾಡಳಿತ ಮತ್ತು ನೀರಿನ ಪೂರೈಕೆಯ ಹೊಣೆಗಾರಿಕೆಯ ಸಚಿವ ಕೆ.ಎನ್ ನೆಹರು ಅವರು ನೀಡಿರುವ ಮಾಹಿತಿ ಪ್ರಕಾರ ಕಳೆದ 70-80 ವರ್ಷಗಳಲ್ಲಿ ಚೆನ್ನೈ ಎದುರಿಸಿದ ಅತ್ಯಂತ ಗಣನೀಯ ಮಳೆ ಈ ಬಾರಿಯದ್ದು ಎಂದು ಅವರು ತಿಳಿಸಿದ್ದಾರೆ ಎಂದು TOI ವರದಿ ಮಾಡಿದೆ.

ಅಬ್ಬರಿಸುತ್ತಿರುವ ಚಂದ್ರಮಾರುತ ವಿರುದ್ಧ ನಾಗರಿಕರ ರಕ್ಷಣಗೆ ಅಧಿಕಾರಿಗಳು ಸರ್ವ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಇವೆಲ್ಲವು ಸಾಕಾಗುವಂತೆ ಕಾಣುತ್ತಿಲ್ಲ. ಏಕೆಂದರೆ ಮೈಚಾಂಗ್ ತೀವ್ರತೆ ಅಷ್ಟರ ಮಟ್ಟಿಗೆ ಇದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ತಗ್ಗು ಪ್ರದೇಶಗಳ ಜನರ ಸ್ಥಳಾಂತರ
ಸರ್ಕಾರದಿಂದ ಸುಮಾರು 3 ಲಕ್ಷ ಜನರಿಗೆ ಆಹಾರವನ್ನು ಪೂರೈಸುತ್ತಿದೆ. ಮಳೆಯಿಂದಾಗಿ ಜಲಾವೃತಗೊಂಡ ಪ್ರದೇಶಗಳಲ್ಲಿ ಜನರನ್ನು ಸ್ಥಳಾಂತರಿಸಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ದೋಣಿಗಳನ್ನು ಸ್ಥಳಗಳಿಗೆ ಕಳುಹಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಸುಮಾರು 5,000 ಕಾರ್ಮಿಕರನ್ನು ನಿಯೋಜಿಸಲಾಗಿದೆ ಎಂದರು.
ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನ ಹವಾಮಾನ ಅಧಿಕಾರಿ ಒಬ್ಬರು, ಕೋರ್ ಸಿಟಿ ಮತ್ತು ಜಲಾನಯನ ಪ್ರದೇಶಗಳಲ್ಲಿ ನಿರಂತರ ಮತ್ತು ಏಕಕಾಲದಲ್ಲಿ ಮಳೆ ಆಗುತ್ತಿದೆ. ಚಂಡಮಾರುತವು ಸಮುದ್ರದ ಸಮೀಪದಲ್ಲಿ ಇರುವುದರಿಂದ, ನದಿಗಳಿಂದ ನೀರು ಅಳಿವೆ ಬಿಂದುಗಳಲ್ಲಿ ಸುಲಭವಾಗಿ ಹಾದು ಹೋಗುವುದಿಲ್ಲ.

ನೀರು ಸರಾಗವಾಗಿ ಹರಿದು ಹೋಗದೇ ಸಮಸ್ಯೆ
ನೀರು ಸರಾಗವಾಗಿ ಹರಿದು ಹೋಗಿದ್ದಾಗ ಹಿಮ್ಮುಖ ಹರಿವು ಉಂಟಾಗುತ್ತದೆ. ನದಿ ನೀರು ಸುಸೂತ್ರವಾಗಿ ಸಮುದ್ರಕ್ಕೆ ಹರಿಯುವಂತಾದರೆ ಮಾತ್ರ ಮಳೆ ನೀರು ಚರಂಡಿ ಮೂಲಕ ಹರಿದು ಹೋಗುತ್ತದೆ. ಇದು ಆಗದಿದ್ದಾಗ ಈ ರೀತಿ ಪ್ರವಾಹ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಈ ಚಂಡಮಾರುತವು ನೆಲ್ಲೂರಿಗೆ ಸಮೀಪಿಸಿದಾಗ ದಕ್ಷಿಣ ಭಾಗದಿಂದ ಉತ್ತರಕ್ಕೆ ಚದುರಿಹೋಗಲಿವೆ. ಚೆಂಗಲ್‌ಪೇಟ್, ಚೆನ್ನೈ ಮತ್ತು ನಂತರ ತಿರುವಳ್ಳೂರಿನಲ್ಲಿ ಹಾದು ಹೋಗಲಿದೆ. ತದನಂತರ ಮಳೆ ಬೀಳುವಿಕೆ ಕಡಿಮೆ ಆಗುವ ಸಾಧ್ಯತೆ ಇದೆ ಎಂದರು.
ಸದ್ಯ ದಕ್ಷಿಣ ಭಾರತದ ಕೆಲವು ರಾಜ್ಯಗಳು ಚಂಡಮಾರುತಕ್ಕೆ ತುತ್ತಾಗುವ ಸಾಧ್ಯತೆಗಳು ಇವೆ. ಈ ಪೈಕಿ ಚೆನ್ನೈ-ತಮಿಳುನಾಡಿನ ಕರಾವಳಿ ಭಾಗದಲ್ಲಿ ಭಾರೀ ಮಳೆ ಮುಂದುವರಿದಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications