ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿ ವಜಾಗೊಳಿಸಲಿರುವ ಫೇಸ್‌ಬುಕ್ ಕಂಪನಿ
ನವದೆಹಲಿ, ನ.07: ಫೇಸ್‌ಬುಕ್, ಇನ್ಸ್ಟಾಗ್ರಾಮ್ ಹಾಗೂ ವಾಟ್ಸ್ಆ್ಯಪ್ ವೇದಿಕೆಗಳನ್ನು ನಿರ್ವಹಿಸುವ ಮೆಟಾ ಕಂಪನಿ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. ಟ್ವಿಟ್ಟರ್‌ನಿಂದ ಸಾವಿರಾರು ಉದ್ಯೋಗಿಗಳನ್ನು ವಜಾ ಗೊಳಿಸಿರುವ ಬೆನ್ನಲ್ಲೆ ಮೆಟಾ ಕಂಪನಿ ಕೂಡ ಈ ವಾರ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವ ವರದಿಗಳು ಬಂದಿವೆ.
ಈ ವಾರ ಮೆಟಾ ಕಂಪನಿ ಸಿಬ್ಬಂದಿಯನ್ನು ವಜಾಗೊಳಿಸಲಿದೆ ಎಂದು ಅಮೆರಿಕಾದ ವಾಲ್ ಸ್ಟ್ರೀಟ್ ಜರ್ನಲ್ ಮಾಧ್ಯಮವು ನವೆಂಬರ್ 6 ರಂದು ವರದಿ ಮಾಡಿದೆ.
ಮೆಟಾ ಕಂಪನಿಯ ನಿರ್ಧಾರವು ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದ್ದು, ನವೆಂಬರ್ 9 ರಂದು (ಬುಧವಾರದಂದು) ವಜಾಗೊಳಿಸುವ ಪ್ರಕಟಣೆಯನ್ನು ನಿರೀಕ್ಷಿಸಲಾಗಿದೆ ಎಂದು ವರದಿ ಮಾಡಿದೆ. ಇನ್ನು ವರದಿ ಕುರಿತು ಪ್ರತಿಕ್ರಿಯಿಸಲು ಮೆಟಾ ನಿರಾಕರಿಸಿದೆ.

ಸೆಪ್ಟೆಂಬರ್ 30 ರ ಹೊತ್ತಿಗೆ, ಮೆಟಾ ಕಂಪನಿಯಲ್ಲಿ ಪ್ರಪಂಚದಾದ್ಯಂತ ಸುಮಾರು 87,000 ಉದ್ಯೋಗಿಗಳನ್ನು ತನ್ನ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಾದ Facebook ಮತ್ತು Instagram ಮತ್ತು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಸೇರಿವೆ.
ಅಕ್ಟೋಬರ್‌ನಲ್ಲಿ ಫೇಸ್‌ಬುಕ್ ಒಡೆಯ ಮೆಟಾ ತ್ರೈಮಾಸಿಕ ಆದಾಯದಲ್ಲಿ ಕುಂಠಿತವಾಗುವ ಬಗ್ಗೆ ಮುನ್ಸೂಚನೆ ನೀಡಿತ್ತು. ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು 2023 ರ ಅಂತ್ಯದ ವೇಳೆಗೆ ಸಂಸ್ಥೆಯ ಸಿಬ್ಬಂದಿ ಹೆಚ್ಚಾಗುವುದಿಲ್ಲ ಬದಲಿಗೆ ಸ್ವಲ್ಪ ಕಡಿಮೆಯಾಗಬಹುದು ಎಂದು ಹೇಳಿದ್ದರು.
ನಿಧಾನಗತಿಯ ಜಾಗತಿಕ ಆರ್ಥಿಕ ಬೆಳವಣಿಗೆ, ಟಿಕ್‌ಟಾಕ್‌ನಿಂದ ಸ್ಪರ್ಧೆ, ಆಪಲ್‌ನ ಗೌಪ್ಯತೆ ಬದಲಾವಣೆಗಳು, ಮೆಟಾವರ್ಸ್‌ನಲ್ಲಿ ಭಾರಿ ಖರ್ಚು ಮತ್ತು ನಿಯಂತ್ರಣದ ನಿರಂತರ ಬೆದರಿಕೆಯನ್ನು ಮೆಟಾ ಎದುರಿಸುತ್ತಿದೆ.

ಮಾರ್ಕ್ ಜುಕರ್‌ಬರ್ಗ್ ಅವರು ಮೆಟಾವರ್ಸ್ ಹೂಡಿಕೆಗಳು ಫಲ ನೀಡಲು ಸುಮಾರು ಒಂದು ದಶಕ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಕಂಪನಿಯು ಜೂನ್‌ನಲ್ಲಿ ಕನಿಷ್ಠ 30% ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳುವ ಯೋಜನೆಯ್ನು ಕಡಿತಗೊಳಿಸಿತ್ತು.
ಮೈಕ್ರೋಸಾಫ್ಟ್ ಕಾರ್ಪ್, ಟ್ವಿಟರ್ ಇಂಕ್ ಮತ್ತು ಸ್ನ್ಯಾಪ್ ಇಂಕ್ ಸೇರಿದಂತೆ ಹಲವಾರು ಕಂಪನಿಗಳು ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚಿನ ಬಡ್ಡಿದರಗಳು, ಏರುತ್ತಿರುವ ಹಣದುಬ್ಬರ ಮತ್ತು ಯುರೋಪ್‌ನಲ್ಲಿನ ಇಂಧನ ಬಿಕ್ಕಟ್ಟಿನಿಂದಾಗಿ ಜಾಗತಿಕ ಆರ್ಥಿಕ ಬೆಳವಣಿಗೆ ನಿಧಾನವಾಗುತ್ತಿದ್ದಂತೆ ಉದ್ಯೋಗಗಳನ್ನು ಕಡಿತಗೊಳಿಸಿವೆ.











Click it and Unblock the Notifications