ರಾಷ್ಟ್ರಪತಿ ಎಡಿಸಿ ಆಗಿ ಇತಿಹಾಸ ನಿರ್ಮಿಸಿದ ಮೊದಲ ಮಹಿಳಾ ಸೇನಾಧಿಕಾರಿ ಮೇಜರ್ ನವ್ಯಾ ಶೇಖಾವತ್!
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಧಿಕೃತ ಕಾರ್ಯಕ್ರಮಗಳಲ್ಲಿ ಅವರ ಪಕ್ಕದಲ್ಲೇ ನಿಂತು ಕರ್ತವ್ಯ ನಿರ್ವಹಿಸುವ ಒಬ್ಬ ಮಹಿಳಾ ಸೇನಾಧಿಕಾರಿ ಇತ್ತೀಚೆಗೆ ಹಲವರ ಗಮನ ಸೆಳೆಯುತ್ತಿದ್ದಾರೆ. ಸಮವಸ್ತ್ರದಲ್ಲಿ ಆತ್ಮವಿಶ್ವಾಸದಿಂದ ಕಾಣಿಸಿಕೊಳ್ಳುವ ಈ ಅಧಿಕಾರಿ ಮೇಜರ್ ನವ್ಯಾ ಶೇಖಾವತ್. ಭಾರತದ ರಾಷ್ಟ್ರಪತಿಯ ʼಎಯ್ಡ್-ಡಿ-ಕ್ಯಾಂಪ್ʼ (ADC) ಆಗಿ ನೇಮಕಗೊಂಡಿರುವ ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆಯುವ ಸರಕಾರಿ ಸಮಾರಂಭಗಳು, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು, ವಿದೇಶಿ ಗಣ್ಯರ ಸ್ವಾಗತ, ರಾಜತಾಂತ್ರಿಕ ಭೇಟಿಗಳು ಸೇರಿದಂತೆ ಹಲವು ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿಗೆ ನೆರವಾಗುವ ಜವಾಬ್ದಾರಿ ADCಯದ್ದು. ಇದು ಅತ್ಯಂತ ಗೌರವದ ಮತ್ತು ಶಿಸ್ತಿನ ಹುದ್ದೆ ಎಂದು ಪರಿಗಣಿಸಲಾಗುತ್ತದೆ.

ರಾಷ್ಟ್ರಪತಿಯ ಐವರು ADCಗಳಲ್ಲಿ ಒಬ್ಬರು
ಭಾರತದ ರಾಷ್ಟ್ರಪತಿಗೆ ಒಟ್ಟು ಐವರು ADCಗಳು ಇರುತ್ತಾರೆ. ಅವರಲ್ಲಿ ಮೂವರು ಭಾರತೀಯ ಸೇನೆಯಿಂದ, ಒಬ್ಬರು ನೌಕಾಪಡೆಯಿಂದ ಮತ್ತು ಮತ್ತೊಬ್ಬರು ವಾಯುಪಡೆಯಿಂದ ಆಯ್ಕೆಯಾಗುತ್ತಾರೆ.
ದಶಕಗಳ ಕಾಲ ಈ ಹುದ್ದೆಗಳು ಹೆಚ್ಚಾಗಿ ಪುರುಷ ಅಧಿಕಾರಿಗಳಿಗೇ ಸೀಮಿತವಾಗಿದ್ದವು. ಆದರೆ 2025ರಲ್ಲಿ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಯಶಸ್ವಿ ಸೊಲಂಕಿ ರಾಷ್ಟ್ರಪತಿಯ ಮೊದಲ ಮಹಿಳಾ ADC ಆಗಿ ನೇಮಕಗೊಂಡು ಇತಿಹಾಸ ನಿರ್ಮಿಸಿದ್ದರು. ಇದೀಗ ಭಾರತೀಯ ಸೇನೆಯಿಂದ ಮೇಜರ್ ನವ್ಯಾ ಶೇಖಾವತ್ ಈ ಹುದ್ದೆ ಅಲಂಕರಿಸಿರುವ ಮೊದಲ ಮಹಿಳೆ. ಇದರೊಂದಿಗೆ ರಾಷ್ಟ್ರಪತಿಯ ADC ತಂಡದಲ್ಲಿ ಸ್ಥಾನ ಪಡೆದ ಎರಡನೇ ಮಹಿಳಾ ಅಧಿಕಾರಿಯಾಗಿದ್ದಾರೆ.
ಮೇಜರ್ ನವ್ಯಾ ಶೇಖಾವತ್ ಅವರ ಸೇನಾ ಪಯಣ, ಸಾವಿರಾರು ಯುವಕರು ಬರೆಯುವ ʼಕಂಬೈನ್ಡ್ ಡಿಫೆನ್ಸ್ ಸರ್ವಿಸಸ್ (CDS)ʼ ಪರೀಕ್ಷೆಯಿಂದ ಆರಂಭವಾಯಿತು. ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸುವ ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅವರು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA) ಮಹಿಳೆಯರ ಶಾರ್ಟ್ ಸರ್ವಿಸ್ ಕಮಿಷನ್ (ನಾನ್-ಟೆಕ್ನಿಕಲ್) ಕೋರ್ಸ್‌ಗೆ ಆಯ್ಕೆಯಾದರು.
OTAಯ ತರಬೇತಿ ಸುಲಭವಾದದ್ದಲ್ಲ. ದೈಹಿಕ ಸಾಮರ್ಥ್ಯ, ಮಾನಸಿಕ ಸ್ಥೈರ್ಯ, ನಾಯಕತ್ವದ ಗುಣಗಳು ಮತ್ತು ಕಟ್ಟುನಿಟ್ಟಿನ ಶಿಸ್ತು-ಇವೆಲ್ಲವನ್ನೂ ಪರೀಕ್ಷಿಸುವ ತರಬೇತಿಯಿದು. ಈ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ನವ್ಯಾ ಶೇಖಾವತ್ ಭಾರತೀಯ ಸೇನೆಯ ಆರ್ಮಿ ಸರ್ವಿಸ್ ಕಾರ್ಪ್ಸ್ (ASC)ಗೆ ಅಧಿಕಾರಿಯಾಗಿ ಸೇರ್ಪಡೆಯಾದರು.
ಯುದ್ಧರಂಗದ ಹಿಂದೆ ಕೆಲಸ
ಆರ್ಮಿ ಸರ್ವಿಸ್ ಕಾರ್ಪ್ಸ್ ಎಂದರೆ ಯುದ್ಧರಂಗದಲ್ಲಿ ನೇರವಾಗಿ ಹೋರಾಡುವ ವಿಭಾಗವಲ್ಲ. ಆದರೆ ಸೇನೆಯ ಕಾರ್ಯಾಚರಣೆ ನಿರಂತರವಾಗಿ ನಡೆಯಲು ಅಗತ್ಯವಾದ ಎಲ್ಲ ವ್ಯವಸ್ಥೆಗಳ ಜವಾಬ್ದಾರಿ ಈ ವಿಭಾಗದ ಮೇಲಿದೆ.
ಸೈನಿಕರಿಗೆ ಆಹಾರ, ಇಂಧನ, ವಾಹನಗಳು, ಸಾರಿಗೆ ವ್ಯವಸ್ಥೆ, ಸಾಮಗ್ರಿಗಳ ಪೂರೈಕೆ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ನಿರ್ವಹಿಸುವುದು ASCಯ ಪ್ರಮುಖ ಕೆಲಸ. ಮುಂಚೂಣಿ ಪ್ರದೇಶದಲ್ಲಿರುವ ಸೈನಿಕರಿಗೆ ಅಗತ್ಯ ವಸ್ತುಗಳು ಸಮಯಕ್ಕೆ ತಲುಪುವಂತೆ ನೋಡಿಕೊಳ್ಳುವುದು ಈ ವಿಭಾಗದ ಪ್ರಮುಖ ಹೊಣೆಗಾರಿಕೆ.
CDS ಪರೀಕ್ಷೆ ಉತ್ತೀರ್ಣರಾಗಿ ಅಧಿಕಾರಿಯಾದ ಕೆಲವೇ ವರ್ಷಗಳಲ್ಲಿ ರಾಷ್ಟ್ರಪತಿಯ ADC ಹುದ್ದೆಗೆ ಆಯ್ಕೆಯಾಗಿರುವುದು ಮೇಜರ್ ನವ್ಯಾ ಶೇಖಾವತ್ ಅವರ ವೃತ್ತಿಜೀವನದ ಮಹತ್ವದ ಸಾಧನೆ. ಈ ಹುದ್ದೆಗೆ ಅಧಿಕಾರಿಯ ಸೇವಾ ದಾಖಲೆ, ಶಿಸ್ತು, ನಾಯಕತ್ವ, ವೃತ್ತಿಪರತೆ ಮತ್ತು ಅಧಿಕೃತ ಕಾರ್ಯಕ್ರಮಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಇತ್ತೀಚಿನ ತಿಂಗಳುಗಳಲ್ಲಿ ರಾಷ್ಟ್ರಪತಿ ಭವನದ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿರುವ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ. ಇದರಿಂದ ದೇಶದಾದ್ಯಂತ ಅನೇಕ ಯುವಜನತೆಯ ಗಮನ ಅವರತ್ತ ಸೆಳೆದಿದೆ.
ಮೂರು ದಶಕಗಳ ಬದಲಾವಣೆಯ ಫಲ
ಭಾರತೀಯ ಸೇನೆಯಲ್ಲಿ ಮಹಿಳೆಯರ ಪ್ರವೇಶ 1992ರಲ್ಲಿ ಶಾರ್ಟ್ ಸರ್ವಿಸ್ ಕಮಿಷನ್ ಮೂಲಕ ಆರಂಭವಾಯಿತು. ಆರಂಭದಲ್ಲಿ ಅವಕಾಶಗಳು ಸೀಮಿತವಾಗಿದ್ದರೂ, ಕಳೆದ ಮೂರು ದಶಕಗಳಲ್ಲಿ ಮಹಿಳಾ ಅಧಿಕಾರಿಗಳ ಪಾತ್ರ ನಿರಂತರವಾಗಿ ವಿಸ್ತರಿಸಿದೆ.
2020ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹಿಳಾ ಶಾರ್ಟ್ ಸರ್ವಿಸ್ ಕಮಿಷನ್ ಅಧಿಕಾರಿಗಳಿಗೂ ಪುರುಷ ಅಧಿಕಾರಿಗಳಂತೆಯೇ ಶಾಶ್ವತ ಕಮಿಷನ್ ಪರಿಗಣಿಸಬೇಕು ಎಂದು ಮಹತ್ವದ ತೀರ್ಪು ನೀಡಿತು. ಈ ತೀರ್ಪಿನ ನಂತರ ಮಹಿಳೆಯರಿಗೆ ಸೇನೆಯಲ್ಲಿ ದೀರ್ಘಾವಧಿಯ ವೃತ್ತಿಜೀವನದ ಅವಕಾಶಗಳು ಮತ್ತಷ್ಟು ವಿಸ್ತರಿಸಿದವು.
ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಅಧಿಕಾರಿಗಳು ಸೇನಾ ಘಟಕಗಳಿಗೆ ನೇತೃತ್ವ ನೀಡುವುದು, ಅಂತರರಾಷ್ಟ್ರೀಯ ಸೇನಾ ಅಭ್ಯಾಸಗಳಲ್ಲಿ ಭಾಗವಹಿಸುವುದು, ಪ್ರಮುಖ ಕಾರ್ಯಾಚರಣೆಗಳ ಬಗ್ಗೆ ದೇಶಕ್ಕೆ ಮಾಹಿತಿ ನೀಡುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. 2025ರಲ್ಲಿ ಆಪರೇಷನ್ ಸಿಂಧೂರ್ ಕುರಿತು ದೇಶವನ್ನುದ್ದೇಶಿಸಿ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಕೂಡ ಇದೇ ಬದಲಾವಣೆಯ ಒಂದು ಪ್ರಮುಖ ಮುಖವಾಗಿದ್ದರು.


Click it and Unblock the Notifications
