TCS: ಟಾಟಾ ಸಂಸ್ಥೆಯಲ್ಲಿ ಕಚೇರಿಗೆ ಬನ್ನಿ ಅಂದಿದ್ದೇ ತಪ್ಪಾಯ್ತಾ? ಮಹಿಳೆಯರ ಸಾಲು ಸಾಲು ರಾಜೀನಾಮೆ!
ನವದೆಹಲಿ: ಭಾರತದಲ್ಲಿ ದೊಡ್ಡ ದೊಡ್ಡ ಉದ್ದಿಮೆಗಳನ್ನು ಬೆಳೆಸಿ, ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಟಾಟಾ ಸಂಸ್ಥೆ ಕೊಟ್ಟಿರುವ ಕೊಡುಗೆ ಮಹತ್ವದ್ದು. ಅದ್ರಲ್ಲೂ ಉದ್ಯೋಗಿಗಳ ವಿಚಾರದಲ್ಲಿ ಸಿಕ್ಕಾಪಟ್ಟೆ ಮುತುವರ್ಜಿ ವಹಿಸುತ್ತದೆ ಟಾಟಾ ಗ್ರೂಪ್. ಆದರೆ ಈಗ ದಿಢೀರ್ ಅಂತಾ ಟಾಟಾ ಸಂಸ್ಥೆಯ ಕಂಪನಿ ಒಂದರಲ್ಲಿ ರಾಜೀನಾಮೆ ಹಾವಳಿ ಶುರುವಾಗಿದೆ!
ಹೌದು ಭಾರತದ ಅತಿದೊಡ್ಡ ಐಟಿ ಸಂಸ್ಥೆ ಮತ್ತು 6 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಕೊಟ್ಟಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ಗೆ ಹೊಸ ತಲೆನೋವು ಎದುರಾಗಿದೆ. ವರ್ಕ್ ಫ್ರಂ ಹೋಂ ಸಾಕು, ಕಚೇರಿಗೆ ಬಂದು ಕೆಲಸ ಮಾಡಿ ಅಂದಿದ್ದೇ ತಪ್ಪಾಯ್ತಾ? ಅನ್ನೋ ಡೌಟ್ ಕಾಡುತ್ತಿದೆ. ಏಕೆಂದರೆ ಕಳೆದ 3 ವರ್ಷದಿಂದ ವರ್ಕ್ ಫ್ರಂ ಹೋಮ್‌ನಲ್ಲಿದ್ದ ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡಿ ಅಂತಾ ಆಜ್ಞೆ ಹೊರಡಿಸಿದ ಬೆನ್ನಲ್ಲೇ, ಮಾಸ್ ರೆಸಿಗ್ನೇಷನ್ ಅಂದ್ರೆ ಸಾಮೂಹಿಕ ರಾಜೀನಾಮೆ ಪರ್ವ ಶುರುವಾಗಿದೆಯಂತೆ. ಅದರಲ್ಲೂ ಮಹಿಳಾ ಉದ್ಯೋಗಿಗಳೇ ರಾಜೀನಾಮೆ ಕೊಡುವವರಲ್ಲಿ ಮುಂದೆ ಇದ್ದಾರೆ ಎನ್ನಲಾಗಿದೆ (TCS).

ಇಷ್ಟು ಜನ ರಾಜೀನಾಮೆ ಕೊಟ್ಟಿದ್ದೇಕೆ?
ಈ ಮೊದಲು ವರ್ಕ್ ಫ್ರಂ ಹೋಂ ಅನ್ನೋ ಕಾನ್ಸೆಪ್ಟ್ ಅಷ್ಟು ದೊಡ್ಡದಾಗಿ ಬೆಳೆದಿರಲಿಲ್ಲ. ಆದರೆ ಯಾವಾಗ ಜಗತ್ತಿನಾದ್ಯಂತ ಕೊರೊನಾ ಹೆಮ್ಮಾರಿ ವಕ್ಕರಿಸಿತೋ, ಅಲ್ಲಿಗೆ ಉದ್ಯೋಗ ವಲಯದಲ್ಲಿ ವರ್ಕ್ ಫ್ರಂ ಹೋಂ ಹೊಸ ಅಲೆ ಎಬ್ಬಿಸಿತ್ತು. ಎಷ್ಟೋ ಜನ ತಮ್ಮ ತಮ್ಮ ಊರು, ಮನೆಗಳಿಂದ ಕೆಲಸ ಮಾಡುತ್ತಿದ್ದರು. ಕೆಲವರು ವರ್ಕ್ ಫ್ರಂ ಹೋಂ ಜೊತೆಯಲ್ಲಿ ಕೃಷಿ ಚಟುವಟಿಕೆ ಕೂಡ ಮಾಡಿಕೊಂಡು ಹಾಯಾಗಿದ್ದರು. ಆದರೆ ಈಗ ಬಹುತೇಕ ಎಲ್ಲಾ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಾಪಸ್ ಕಚೇರಿಗೆ ಬನ್ನಿ, ಆಫಿಸ್‌ನಿಂದಲೇ ಕೆಲಸ ಮಾಡಿ ಅಂತಿವೆ. ಅದೇ ಈಗ ಸಂಚಲನಕ್ಕೆ ಕಾರಣವಾಗಿದೆ.
ಉದ್ಯೋಗಿಗಳಿಗೆ ಟಿಸಿಎಸ್ ಖಡಕ್ ಸೂಚನೆ
ಎಲ್ಲಾ ಸಂಸ್ಥೆಗಳು ನೀಡಿದಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services) ಕೂಡ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನೀಡಿತ್ತು. ಹೀಗೆ ಕಳೆದ 3 ವರ್ಷದಿಂದ ಟಿಸಿಎಸ್ ಸಂಸ್ಥೆಯ ಬಹುತೇಕ ಉದ್ಯೋಗಿಗಳು ವರ್ಕ್ ಫ್ರಂ ಹೋಂ ಮಾಡ್ತಾ ಇದ್ರು. ಆದ್ರೆ ಇತ್ತೀಚೆಗೆ ವರ್ಕ್ ಫ್ರಂ ಹೋಂ ಕುರಿತು ಟಿಸಿಎಸ್ ಆಡಳಿತ ಮಂಡಳಿ ಖಡಕ್ ಆದೇಶ ಹೊರಡಿಸಿತ್ತು. ಎಲ್ಲಾ ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡಿ ಎಂದು ನೋಟಿಸ್ ಜಾರಿ ಮಾಡಿತ್ತು. ಈ ಬೆನ್ನಲ್ಲೇ ಸಾಮೂಹಿಕ ರಾಜೀನಾಮೆ ನೀಡಲಾಗುತ್ತಿದೆ. ಆ ಪೈಕಿ ಮಹಿಳಾ ಉದ್ಯೋಗಿಗಳೇ ಹೆಚ್ಚಾಗಿ ರಿಸೈನ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ವರ್ಕ್ ಫ್ರಂ ಹೋಂ ನೀಡಿದ ಆರಂಭದಲ್ಲಿ ಕಂಪನಿಗಳಿಗೆ ಒಂದಷ್ಟು ಅಡೆತಡೆ ಎದುರಾಗಿ, ಸಮಸ್ಯೆ ಉಂಟಾಗಿತ್ತು. ಆದರೆ ನಂತರ ವರ್ಕ್ ಫ್ರಂ ಹೋಂ ಕೊಡುವುದು ಕಂಪನಿಗಳಿಗೂ ಲಾಭ ಮತ್ತು ಉದ್ಯೋಗಿಗಳಿಗೂ ಲಾಭ ಎನ್ನುವಂತಾಗಿದೆ. ಅದರಲ್ಲೂ ಉದ್ಯೋಗಿಗಳಿಗೆ ತಮ್ಮ ತಮ್ಮ ಊರಿನಿಂದ ಕೆಲಸ ಮಾಡುವ ಖುಷಿ ಇತ್ತು. ಆದರೂ ವರ್ಕ್ ಫ್ರಂ ಹೋಂ ಇದ್ದರೆ ಉದ್ಯೋಗಿಗಳ ನಿರ್ವಹಣೆ ಕಷ್ಟ ಎಂಬ ಆರೋಪ ಕೂಡ ಕೇಳಿಬಂದಿದೆ. ಅದ್ರಲ್ಲೂ ಸಾಕಷ್ಟು ಐಟಿ ಕಂಪನಿಗಳ ಸಿಇಒ ಮತ್ತು ಮ್ಯಾನೇಜ್‌ಮೆಂಟ್ ವರ್ಕ್ ಫ್ರಂ ಹೋಂ ಬೇಡ ಅಂದ್ರೆ ಬೇಡ ಅಂತಿವೆ!

ಇಕ್ಕಟ್ಟಿಗೆ ಸಿಲುಕಿದ ಟಿಸಿಎಸ್ ಆಡಳಿತ?
ಹೀಗೆ ದಿಢೀರ್ ಸಾಮೂಹಿಕ ರಾಜೀನಾಮೆ ನೀಡ್ತಿರುವ ಉದ್ಯೋಗಿಗಳನ್ನ ಕಂಡು ಟಿಸಿಎಸ್ ಆಡಳಿತ ಮಂಡಳಿ ಚಿಂತೆ ಮಾಡುವಂತಾಗಿದೆ. ಅದರಲ್ಲೂ ಹಲವು ವರ್ಷಗಳಿಂದ ಸಂಸ್ಥೆಗೆ ದುಡಿದಿದ್ದ ಉದ್ಯೋಗಿಗಳು, ಪ್ರಮುಖವಾಗಿ ಮಹಿಳಾ ಉದ್ಯೋಗಿಗಳು ದಿಢೀರ್ ರಾಜೀನಾಮೆ ಕೊಡುತ್ತಿರುವುದು ತಲೆನೋವಾಗಿದೆ. ಆಡಳಿತ ಮಂಡಳಿ ಈ ಬಗ್ಗೆ ಚಿಂತಿಸುವಂತಾಗಿದೆ. ಏಕೆಂದರೆ ಒಬ್ಬ ಉದ್ಯೋಗಿಯ ಜಾಗಕ್ಕೆ ಮತ್ತೊಬ್ಬ ಉದ್ಯೋಗಿ ಬಂದರೂ, ಪರಿಸ್ಥಿತಿಯನ್ನ ಮತ್ತೆ ಹಳಿಗೆ ತರಲು ಹಲವು ತಿಂಗಳು ಬೇಕು. ಇಷ್ಟೆಲ್ಲಾ ಆದರೂ ವರ್ಕ್ ಫ್ರಂ ಹೋಂ ಮುಂದುವರಿಸುವ ಸಾಧ್ಯತೆ ಇಲ್ಲ. ಇದೇ ಕಾರಣಕ್ಕೆ ಕಚೇರಿಗೆ ಬಂದು ಕೆಲಸ ಮಾಡಲು ಉದ್ಯೋಗಿಗಳಿಗೆ ಟಿಸಿಎಸ್ ಖಡಕ್ ಸೂಚನೆ ನೀಡಿದೆ.












Click it and Unblock the Notifications