ಬ್ಯಾಂಕುಗಳ ಮುಗಿಯದ ರಗಳೆ: ಮಿನಿಮಮ್ ಬ್ಯಾಲನ್ಸ್ ಇಲ್ಲಾಂದ್ರೆ ದಂಡ
ಏಪ್ರಿಲ್ ಒಂದರಿಂದ ಮಿನಿಮಮ್ ಬ್ಯಾಲನ್ಸ್ ಹೊಂದಿರದ ಗ್ರಾಹಕರ ಮೇಲೆ ದಂಡ ವಿಧಿಸಲು ಭಾರತೀಯ ಸ್ಟೇಟ್ ಬ್ಯಾಂಕ್ ನಿರ್ಧರಿಸಿದೆ.
ನವದೆಹಲಿ, ಮಾ 4: ನಗದು ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಬ್ಯಾಂಕುಗಳ ನಿರ್ಧಾರದ ಬೆನ್ನಲ್ಲೇ, ಸರಕಾರೀ ಸ್ವಾಮ್ಯದ ಏಷ್ಯಾದ ಅತ್ಯಂತ ದೊಡ್ಡ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸಹವರ್ತಿ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ (SB Account) ಹೊಂದಿರುವ ಗ್ರಾಹಕರು ಇನ್ನು ಮುಂದೆ ತಮ್ಮ ಖಾತೆಗಳಲ್ಲಿ ಮಿನಿಮಮ್ ಬ್ಯಾಲನ್ಸ್ ಹೊಂದಿರಲೇ ಬೇಕಾದ ಅನಿವಾರ್ಯತೆಗೆ ಬೀಳಲಿದ್ದಾರೆ. (ಏ.1ರಿಂದ ಎಸ್ ಬಿಐ ಜತೆ 5 ಸಹವರ್ತಿ ಬ್ಯಾಂಕುಗಳ ವಿಲೀನ)

ಮಿನಿಮಮ್ ಬ್ಯಾಲನ್ಸ್ ಹೊಂದಿರದ ಗ್ರಾಹಕರ ಮೇಲೆ ದಂಡ ವಿಧಿಸಲು ಬ್ಯಾಂಕ್ ನಿರ್ಧರಿಸಿದೆ. ಈ ಹೊಸ ಪದ್ದತಿ ಇದೇ ಬರುವ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ. ಮೆಟ್ರೋ, ನಗರ, ಪಟ್ಟಣ, ಗ್ರಾಮೀಣ ಪ್ರದೇಶಕ್ಕೆ ಅನುಗುಣವಾಗಿ ಕಡ್ಡಾಯವಾಗಿ ಎಷ್ಟು ಹಣ ಖಾತೆಯಲ್ಲಿ ಹೊಂದಿರಬೇಕೆಂದು ಬ್ಯಾಂಕ್ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಇದರನ್ವಯ, ಏಪ್ರಿಲ್ ಒಂದರಿಂದ ಮೆಟ್ರೋ ಸಿಟಿಗಳಲ್ಲಿ 5 ಸಾವಿರ, ನಗರ ಪ್ರದೇಶಗಳಲ್ಲಿ 3 ಸಾವಿರ, ಪಟ್ಟಣ ಪ್ರದೇಶಗಳಲ್ಲಿ 2 ಸಾವಿರ ಮತ್ತು ಗ್ರಾಮೀಣ ಪ್ರದೇಶದ ಖಾತೆದಾರರು ಕನಿಷ್ಠ 1 ಸಾವಿರ ರೂಪಾಯಿಗಳನ್ನು ಖಾತೆಯಲ್ಲಿ ಕಡ್ಡಾಯವಾಗಿ ಹೊಂದಿರಬೇಕೆಂದು ಎಸ್‍ಬಿಐ ತಿಳಿಸಿದೆ.
ಮಿನಿಮಮ್ ಬ್ಯಾಲನ್ಸ್ ಹೊಂದಿರದ ಖಾತೆಗಳಿಗೆ, ಕೊರತೆ ಇರುವ ಕನಿಷ್ಠ ಮೊತ್ತಕ್ಕೆ ಅನುಗುಣವಾಗಿ ದಂಡ ಪಾವತಿಸಬೇಕಾಗುತ್ತದೆ. ಮೆಟ್ರೋ ಸಿಟಿಗಳಲ್ಲಿ ಕನಿಷ್ಠ ಬಾಕಿಗಿಂತ ಶೇ.75 ರಷ್ಟು ಹಣ ಕೊರತೆ ಇದ್ದರೆ 100 ರೂ, ಶೇ.50 ರಿಂದ 75ರಷ್ಟು ಕೊರತೆ ಇದ್ದರೆ 75 ರೂ, ಶೇ. 50 ರಷ್ಟು ಕೊರತೆಯಿದ್ದರೆ 50 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಇಪ್ಪತ್ತರಿಂದ ಐವತ್ತು ರೂಪಾಯಿವರೆಗೆ ದಂಡ ಪಾವತಿಸಬೇಕಾಗುತ್ತದೆ. ದಂಡದ ಮೊತ್ತದ ಮೇಲೆ ಸೇವಾ ತೆರಿಗೆಯ ಹೊರೆಯೂ ಬೀಳಲಿದೆ.












Click it and Unblock the Notifications