Maharashtra Election Results: ಸೋಮವಾರ ಹೊಸ CM ಘೋಷಣೆ, ದೇವೇಂದ್ರ ಫಡ್ನವಿಸ್ ಹೇಳಿದ್ದೇನು?
ಮುಂಬೈ, ನವೆಂಬರ್ 23: ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆ 2024 ಫಲಿತಾಂಶವು ಶನಿವಾರ ಪ್ರಕಟವಾಗುವ ಮೂಲಕ ಕುತೂಹಲಕ್ಕೆ ತೆರೆ ಬಿದ್ದಿದೆ. ಜನರಿಂದ ಬಿಜೆಪಿ (ಎನ್‌ಡಿಎ) ನೇತೃತ್ವದ 'ಮಹಾಯುತಿ'ಗೆ ನಿರೀಕ್ಷೆಗೂ ಮೀರಿದ ಬಹುಮತ ಲಭಿಸಿದೆ. ಸದ್ಯ ಈ ಮೈತ್ರಿಕೂಟದಲ್ಲಿ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ನಿರ್ಧಾರವಾಗಬೇಕಿದೆ. ಈ ಸಂಬಂಧ ಮಹತ್ವದ ಸುದ್ದಿಗೋಷ್ಠಿ ನಡೆಯಲಿದೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ದೇವೇಂದ್ರ ಫಡ್ನವಿಸ್ ಅವರು, ಮುಂದಿನ ಮುಖ್ಯಮಂತ್ರಿ ಯಾರು? ಯಾವಾಗ ನಿರ್ಧಾರವಾಗಲಿದೆ ಎಂದು ತಿಳಿಸಿದ್ದಾರೆ. ನಮ್ಮ ನಿರೀಕ್ಷೆ ಮೀರಿ ಬಹುಮತ ಲಭಿಸಿದ್ದಕ್ಕೆ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಇಂದು ಸಂಜೆ ಮೂರು ಪಕ್ಷದ ನಾಯಕರು ಕುಳಿತು ಈ ಬಗ್ಗೆ ಚರ್ಚಿಸಲಿದ್ದೇವೆ ಎಂದರು.

ಪಕ್ಷದ ವರಿಷ್ಠರು ಸೇರಿದಂತೆ ಸಭೆ ನಡೆಸಿ ಮುಂದಿನ ಸಿಎಂ ಯಾರಾದರೆ ಒಳಿತು ಎಂಬ ನಿರ್ಧಾರಕ್ಕೆ ಬರಲಿದ್ದೇವೆ. ನಾನು ನಾಗಪುರ ಕಚೇರಿಗೆ ತೆರಳಲಿದ್ದೇನೆ. ಭಾನುವಾರ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸೋಮವಾರ ನವೆಂಬರ್ 25ರಂದು ಮಹಾರಾಷ್ಟ್ರ ಸಿಎಂ ಯಾರಾಗಲಿದ್ದಾರೆ ಎಂಬ ಮಾಹಿತಿ ಬಹುಶಃ ಘೋಷಣೆ ಆಗಬಹುದು ಎಂದು ಅವರು ತಿಳಿಸಿದ್ದಾರೆ. ಅವರ ಮಾತಿನಂತೆ ನಡೆದಲ್ಲಿ, ಮುಂದಿನ ವಾರವೇ ಮಹಾರಾಷದ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗಿ, ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಲಿದ್ದಾರೆ.
ಪ್ರಮುಖ ಕ್ಷೇತ್ರಗಳಲ್ಲಿ ಮಹಾಯುತಿಗೆ ಜಯ
ಮಹಾರಾಷ್ಟ್ರದಲ್ಲಿ ಒಟ್ಟು 288 ಕ್ಷೇತ್ರಗಳ ಪೈಕಿ ಬಿಜೆಪಿಯು ಬಹುಮತದ ಗಡಿ ದಾಟಿದೆ. 217 ಸೀಟುಗಳನ್ನು ಬಿಜೆಪಿ ನೇತೃತ್ವದದ ಮಹಾಯುತಿ ಪಡೆದು ಬೃಹತ್ ಪಕ್ಷವಾಗಿ ಹೊರ ಹೊಮ್ಮಿದೆ. 54 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದೆ, ಇತರ ಪಕ್ಷಗಳು ಬರೋಬ್ಬರಿ 17 ಸ್ಥಾನಗಳನ್ನು ಗೆದ್ದುಕೊಂಡಿವೆ.
ಮುಂಬೈ ವ್ಯಾಪ್ತಿಯ ಒಟ್ಟು 36 ಕ್ಷೇತ್ರಗಳಲ್ಲಿ ಬರೋಬ್ಬರಿ 22 ಸೀಟುಗಳು ಮಹಾಯುತಿ ಮೈತ್ರಿಕೂಟದ ಪಾಲಾಗಿವೆ. 10 ರಲ್ಲಿ ಎಂವಿಎ ಮತ್ತು ಇತರರು 1 ಕ್ಷೇತ್ರ ಪಡೆದುಕೊಂಡಿದ್ದಾರೆ. ಪಶ್ಚಿಮ ಮಹಾರಾಷ್ಟ್ರದ 58 ಸ್ಥಾನಗಳಲ್ಲಿ ಮಹಾಯುತಿಗೆ 34, ಸೀಟುಗಳು ಬಂದರೆ, ಕಾಂಗ್ರೆಸ್ ಮಹಾ ವಿಕಾಸ್ ಅಘಾಡಿ ಬರೀ 4 ಸೀಟು ಗೆದ್ದಿದೆ.
ಜಾರ್ಖಂಡ್ ನಲ್ಲಿ ಕಾಂಗ್ರೆಸ್-ಜೆಎಂಎಂ ಕೂಟ ಪ್ರಬಲ ಪಕ್ಷ
ಇನ್ನು ಜಾರ್ಖಂಡ್ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಇದೇ ವೇಳೆ ಪ್ರಕಟಗೊಂಡಿದೆ. ಇಲ್ಲಿ ಒಟ್ಟು 81 ಕ್ಷೇತ್ರಗಳಲ್ಲಿ 51 ಸೀಟುಗಳನ್ನು ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿ ಕೂಟವು ಪಡೆದುಕೊಂಡು ಪ್ರಬಲ ಪಕ್ಷವಾಗಿ ಹೊರ ಹೊಮ್ಮಿದೆ. ಇಲ್ಲಿ ಮುಂದಿನ ವಾರ ಹೊಸ ಸರ್ಕಾರ ರಚನೆ ಆಗುವ ನಿರೀಕ್ಷೆ ಇದೆ. ಈ ಮೈತ್ರಿಕೂಟದಲ್ಲೂ ಸಹ ಹೊಸ ಸಿಎಂ ಯಾರಾಗಬೇಕು ಎಂದು ನಿರ್ಧರಿಸಬೇಕಿದೆ.
ರಾಜ್ಯದಲ್ಲಿ ಎನ್‌ಡಿಗೆ 29 ಸೀಟುಗಳು ಬಂದರೆ, ಇತರ ಪಕ್ಷಗಳಿಗೆ ಒಂದು ಕ್ಷೇತ್ರ ಸಿಕ್ಕಿದೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಅಧಿಕಾರ ಗದ್ದುಗೆ ಹಿಡಿದ ಖುಷಿಯಲ್ಲಿ. ಸಿಎಂ ಆಯ್ಕೆ ಕುರಿತು ಶೀಘ್ರವೇ ಮಾಹಿತಿ ಪ್ರಕಟಗೊಳ್ಳಲಿದೆ.












Click it and Unblock the Notifications