ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2024 ಪ್ರಮುಖ ದಿನಾಂಕಗಳು
ಮುಂಬೈ, ನವೆಂಬರ್ 18: ಇದೇ ನವೆಂಬರ್ 26ಕ್ಕೆ ಮಹಾರಾಷ್ಟ್ರ ರಾಜ್ಯದ ವಿಧಾನಸಭೆಯ ಅವಧಿ ಕೊನೆಯಗೊಳ್ಳಲಿದೆ. ಅಷ್ಟರಲ್ಲಿ ಅಂದರೆ ಇದೇ ವಾರ ನವೆಂಬರ್ 20ರಂದು ಪ್ರಸಕ್ತ ಸಾಲಿನ 2024 ವಿಧಾನಸಭಾ ಚುನಾವಣೆ ನಡೆದಿರುತ್ತದೆ. ಹಾಗಾದರೆ, ಚುನಾವಣೆಯ ಸಂಕ್ಷಿಪ್ತ ಮಾಹಿತಿ, ಮಹತ್ವದ ದಿನಾಂಕ, ಅಭ್ಯರ್ಥಿಗಳು ಸೇರಿದಂತೆ ಎಲ್ಲದರ ಮಾಹಿತಿ ಇಲ್ಲಿದೆ.
ಮಹಾರಾಷ್ಟ್ರ ವಿಧಾನಸಭಾ ಎಲ್ಲ ಒಟ್ಟು 288 ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ಜರುಗಲಿದೆ. ಈ ಎಲ್ಲ ಸೀಟುಗಳ ಪೈಕಿ 234 ಸಾಮಾನ್ಯ ವರ್ಗದ ವ್ಯಪ್ತಿಗೆ ಬರುತ್ತದೆ. 29 ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಮತ್ತು 25 ಪರಿಶಿಷ್ಟ ಪಂಗಡಗಳ (ಎಸ್‌ಟಿ) ಕ್ಷೇತ್ರಗಳಾಗಿವೆ ಎಂದು ರಾಜ್ಯ ಚುನಾವಣೆ ಆಯೋಗದ ಅಪ್ಡೇಟ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚುನಾವಣೆ ಆಯೋಗ ಪ್ರಕಾರ ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಒಟ್ಟು 4,140 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಆಯೋಗಕ್ಕೆ ಬರೋಬ್ಬರಿ 7,078 ನಾಮಪತ್ರಗಳನ್ನು ಸಲ್ಲಿಸಲಾಗಿತ್ತು. ಇದರಲ್ಲಿ 2,938 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ಹೀಗಾಗಿ 4,140 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಇವರೆಲ್ಲ ರಾಜಕೀಯ ಭವಿಷ್ಯ ನವೆಂಬರ್ 23ರಂದು ಗೊತ್ತಾಗಲಿದೆ. ಕಾರಣ ಅಂದು ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಪಿಟಿಐ ವರದಿ ಮಾಡಿದೆ.
ಮಹಾರಾಷ್ಟ್ರ ಚುನಾವಣೆಯ ಸಂಕ್ಷಿಪ್ತ ವಿವರ
* ಚುನಾವಣೆಗೆ ಗೆಜೆಟ್ ಅಧಿಸೂಚನೆ ಬಿಡುಗಡೆ ಆಗಿದ್ದು: 22 ಅಕ್ಟೋಬರ್ 2024
* ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: 29 ಅಕ್ಟೋಬರ್ 2024
* ಚುನಾವಣಾಧಿಕಾರಿಗಳ ನಾಮಪತ್ರ ಪರಿಶೀಲನೆ ದಿನ: 30 ಅಕ್ಟೋಬರ್ 2024
* ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ: 4 ನವೆಂಬರ್ 2024
* ಮತದಾನದ ದಿನ: 20 ನವೆಂಬರ್ 2024
* ಮತ ಎಣಿಕೆ /ಫಲಿತಾಂಶ ಪ್ರಕಟ ದಿನಾಂಕ: 23 ನವೆಂಬರ್ 2024.
* ಮತದಾನ ಬಳಿಕ ಸಂಜೆ 6.30ರಂದು ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟಗೊಳ್ಳಲಿದೆ.
ಅತ್ಯಧಿಕ ಸ್ಥಾನಗಳಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು
ಈ ಭಾರಿಯ ಮಹಾರಾಷ್ಟ್ರ ಚುನಾವಣೆಯಲ್ಲಿ ರಾಜ್ಯ ಆಡಳಿತ ಪಕ್ಷ ಮಹಾಯುತಿ ಮತ್ತು ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮಹಾಯುತಿ ಮೈತ್ರಿಕೂಟದಲ್ಲಿ ಒಟ್ಟು ಕ್ಷೇತ್ರಗಳ ಪೈಕಿ ಬಿಜೆಪಿಯು ಅತೀ ಹೆಚ್ಚು ಸ್ಥಾನಗಳಲ್ಲಿ (148) ಸ್ಫರ್ಧಿಸಿ ಬೃಹತ್ ಪಕ್ಷವಾಗಿದೆ.
ಇದಕ್ಕೆ ವಿರುದ್ಧ ವಿಪಕ್ಷ ಕಾಂಗ್ರೆಸ್ 103 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಇನ್ನೂ ಸಿಎಂ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 80 ಸೀಟುಗಳಲ್ಲಿ ಕಣಕ್ಕಿಳಿದಿದೆ. ಅಜಿತ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳು 53 ಸ್ಥಾನಗಳಲ್ಲಿದ್ದಾರೆ.
ಮಹಾ ವಿಕಾಸ್ ಅಘಾಡಿಯಲ್ಲಿ ಕಾಂಗ್ರೆಸ್ ನಂತರ ಹೆಚ್ಚಿನ ಕ್ಷೇತ್ರಗಳಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) 89 ಅಭ್ಯರ್ಥಿಗಳನ್ನು ಸ್ಪಧೆಗೆ ಇಳಿಸಿದೆ. ಶರದ್ ಪವಾರ್ ಅವರ NCP (SP) ಅಭ್ಯರ್ಥಿಗಳು 87 ಕ್ಷೇತ್ರ ಹಾಗೂ ಉಳಿದ ಆರು ಕ್ಷೇತ್ರಗಳಲ್ಲಿ ಇತರ ಮಿತ್ರಪಕ್ಷಗಳಿಗೆ ಕೊಡಲಾಗಿದೆ.
ರಾಜ್ಯದ ಶತಾಯುಷಿಗಳ ಸಂಖ್ಯೆ 47,392
ಮಹಾರಾಷ್ಟ್ರದಲ್ಲಿ ಒಟ್ಟು 9.7 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಇದರಲ್ಲಿ ಒಟ್ಟು 9,70,25,119 ನೋಂದಾಯಿತ ಮತದಾರರು ಇದ್ದಾರೆ. ಪುರುಷರು 5,00,22,739, ಮಹಿಳೆಯರು 4,69,96,279 ಹಾಗೂ 6,101 ತೃತೀಯ ಲಿಂಗಿಗಳು ಇದ್ದಾರೆ. ಒಟ್ಟು ಮತದಾರರಲ್ಲಿ ನೂರು ವರ್ಷ ದಾಟಿದ ಶತಾಯುಷಿಗಳು 47,392 ರಷ್ಟಿದ್ದಾರೆ. 18-19 ವರ್ಷದೊಳಗಿನ 22,22,704 ಮತದಾರರು, 100 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು 109 ಹಿರಿಯರಿದ್ದಾರೆ ಎಂದು ಚುನಾವಣೆ ಆಯೋಗದ ಅಂಕಿ ಅಂಶಗಳು ಮಾಹಿತಿ ನೀಡಿವೆ.












Click it and Unblock the Notifications