Maharashtra Election 2024 Result: ಸಂಭಾವ್ಯ ಸಿಎಂ ದೇವೇಂದ್ರ ಫಡ್ನವೀಸ್ ಗೆಲುವಿನ ಅಂತರ ಎಷ್ಟು?
ಮುಂಬೈ, ನವೆಂಬರ್ 23: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಮತ ಎಣಿಕೆ ನಡೆಯುತ್ತಿದೆ. ಮಹಾಯತಿ ಮೈತ್ರಿಕೂಟ 230 ಕ್ಷೇತ್ರದಲ್ಲಿ ಮುನ್ನಡೆಯನ್ನು ಪಡೆದಿದ್ದು, ರಾಜ್ಯದಲ್ಲಿ ಸರ್ಕಾರವನ್ನು ರಚನೆ ಮಾಡಲಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145. ಸದ್ಯ ಬಿಜೆಪಿ ಏಕಾಂಗಿಯಾಗಿ 133 ಸೀಟುಗಳಲ್ಲಿ ಮುನ್ನಡೆಯಲ್ಲಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನಾಗ್ಪುರ ನೈಋತ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. 4ನೇ ಬಾರಿಗೆ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಅವರು ವಿಧಾನಸಭೆ ಪ್ರವೇಶಿಸಿದ್ದಾರೆ. ಬಿಜೆಪಿ ಸಂಭಾವ್ಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಫಡ್ನವೀಸ್ ಹೆಸರು ಮುಂಚೂಣಿಯಲ್ಲಿದೆ. 2014-2019ರ ತನಕ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಎಷ್ಟು ಮತಗಳ ಗೆಲುವು?: ಮಹಾರಾಷ್ಟ್ರದ ಹಾಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಾಗ್ಪುರ ನೈಋತ್ಯ ಕ್ಷೇತ್ರದಲ್ಲಿ 1,29,401 ಮತಗಳನ್ನು ಪಡೆದು 39,710 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರ ಎದುರಾಳಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರಫುಲ್ಲ ಗುಡಧೆ 89,691 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಆರ್‌ಎಸ್‌ಎಸ್ ಮತ್ತು ಕೇಂದ್ರ ಬಿಜೆಪಿ ನಾಯಕರಾಗಿ ಆಪ್ತರಾಗಿರುವ ದೇವೇಂದ್ರ ಫಡ್ನವೀಸ್ ಮುಂದಿನ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತವಾಗಿದೆ. 1990ರ ದಶಕದ ಮಧ್ಯದಲ್ಲಿ ರಾಜಕೀಯ ಜೀವನ ಆರಂಭಿಸಿದ ಫಡ್ನವೀಸ್ ನಾಗ್ಪುರ ನೈಋತ್ಯ ಕ್ಷೇತ್ರದಲ್ಲಿ 4ನೇ ಬಾರಿಗೆ ಗೆಲುವು ದಾಖಲಿಸಿದ್ದಾರೆ.
27 ವರ್ಷವಿದ್ದಾಗ ಫಡ್ನವೀಸ್ 1997ರಲ್ಲಿ ನಾಗ್ಪುರದ ಅತ್ಯಂತ ಕಿರಿಯ ಮೇಯರ್ ಆಗಿ ಆಯ್ಕೆಗೊಂಡರು. ಎರಡು ವರ್ಷಗಳ ಬಳಿಕ ಅವರು ನಾಗ್ಪುರ ಪಶ್ಚಿಮ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. 2004ರಲ್ಲಿ ಸ್ಥಾನವನ್ನು ಉಳಿಸಿಕೊಂಡರು.
ಕ್ಷೇತ್ರ ಪುನರ್ ವಿಂಗಡನೆ ಬಳಿಕ ನಾಗ್ಪುರ ನೈಋತ್ಯ ಕ್ಷೇತ್ರ ರಚನೆಗೊಂಡಿತು. ಆಗ ದೇವೇಂದ್ರ ಫಡ್ನವೀಸ್ ಕ್ಷೇತ್ರವನ್ನು ಬದಲಾವಣೆ ಮಾಡಿ ಅಲ್ಲಿಗೆ ಸ್ಥಳಾಂತರಗೊಂಡರು. 2009ರ ಚುನಾವಣೆಯಲ್ಲಿ 27, 775 ಮತ, 2014ರಲ್ಲಿ 58,942 ಮತಗಳ ಅಂತರದಿಂದ ಗೆದ್ದರು. 2019ರ ಚುನಾವಣೆಯಲ್ಲಿ ಗೆಲುವಿನ ಅಂತರ 49,344 ಮತಗಳಿಗೆ ಏರಿಕೆಕಂಡಿತು. ಈ ಬಾರಿ 39,710 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಸಂಜೆ 7.16ರ ಮಾಹಿತಿಯಂತೆ ಮಹಾಯತಿ ಮೈತ್ರಿಕೂಟ 230 ಸೀಟುಗಳಲ್ಲಿ ಮುನ್ನಡೆಯಲ್ಲಿದೆ. ಎಂವಿಎ ಮೈತ್ರಿಕೂಟ 47 ಸೀಟುಗಳಲ್ಲಿ ಮುನ್ನಡೆಯಲ್ಲಿದೆ. ಬಿಜೆಪಿ 133, ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.
ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಕಾಂಗ್ರೆಸ್ 15, ಶಿವಸೇನೆ (ಉದ್ಧವ್ ಠಾಕ್ರೆ ಬಣ) 10, ಎನ್‌ಸಿಪಿ (ಶರದ್ ಪವಾರ್) 10, ಎಸ್‌ಪಿ 2, ಇತರರು/ ಪಕ್ಷೇತರರು 10 ಸೀಟುಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಫಲಿತಾಂಶದ ಸ್ಪಷ್ಟ ಚಿತ್ರಣ ರಾತ್ರಿ ದೊರೆಯುವ ನಿರೀಕ್ಷೆ ಇದೆ.
ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ ಬಿಜೆಪಿ 98, ಶಿವಸೇನೆ (ಏಕನಾಥ್ ಶಿಂಧೆ ಬಣ) 46, ಎನ್‌ಸಿಪಿ (ಅಜಿತ್ ಪವಾರ್ ಬಣ) 36, ಶಿವಸೇನೆ (ಉದ್ಧವ್ ಠಾಕ್ರೆ ಬಣ) 18, ಕಾಂಗ್ರೆಸ್ 10, ಎನ್‌ಸಿಪಿ (ಶರದ್ ಪವಾರ್) 10, ಸಮಾಜವಾದಿ ಪಕ್ಷ 2, ಜೆಎಸ್‌ಎಸ್ 2, ಆರ್‌ಎಸ್‌ಪಿಎಸ್ 1, ಆರ್‌ಎಸ್‌ವಿಎ 1, ಇಬ್ಬರು ಪಕ್ಷೇತರರು 2 ಸೀಟುಗಳಲ್ಲಿ ಜಯಗಳಿಸಿದ್ದಾರೆ.












Click it and Unblock the Notifications