Maharashtra Election 2024 Result: ಹೊಸ ದಾಖಲೆ ಬರೆದ ಮಹಾರಾಷ್ಟ್ರ ಚುನಾವಣೆ ಫಲಿತಾಂಶ
ಮುಂಬೈ, ನವೆಂಬರ್ 23: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಮತ ಎಣಿಕೆ ನಡೆಯುತ್ತಿದೆ. ಮಹಾಯತಿ ಮೈತ್ರಿಕೂಟ 229 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಮೂಲಕ ರಾಜ್ಯದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಈ ಬಾರಿಯ ಚುನಾವಣೆಯಲ್ಲಿ ಮತದಾನ ಪ್ರಮಾಣ, ಚುನಾವಣೆ ಫಲಿತಾಂಶ ಎರಡರಲ್ಲೂ ಹೊಸ ದಾಖಲೆಯಾಗಿದೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145.
ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಸದ್ಯ ರಾಜ್ಯದ ಆಡಳಿತ ಪಕ್ಷ. ಈ ಬಾರಿಯ ಚುನಾವಣೆಯಲ್ಲಿಯೂ ಮೈತ್ರಿಕೂಟ ಸರ್ಕಾರ ರಚನೆಯತ್ತ ಹೆಜ್ಜೆ ಹಾಕಿದೆ. ಈಗ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬ ಪ್ರಶ್ನೆ ಎದ್ದಿದೆ.

ಫಲಿತಾಂಶದಲ್ಲಿ ದಾಖಲೆ: ಮಹಾರಾಷ್ಟ್ರದ ರಾಜಕೀಯ ಇತಿಹಾಸದಲ್ಲಿ 2024ರ ಚುನಾವಣೆ ಫಲಿತಾಂಶ ಹೊಸ ದಾಖಲೆ ಮಾಡಿದೆ. 1972ರ ಬಳಿಕ ಯಾವುದೇ ಪಕ್ಷ/ ಯಾವುದೇ ಮೈತ್ರಿಕೂಟ ಅತಿ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಿದ ದಾಖಲೆ ಇದಾಗಿದೆ. 1972ರ ಚುನಾವಣೆಯಲ್ಲಿ ಶೇ 56.36ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ ಪಕ್ಷ 222 ಸೀಟುಗಳಲ್ಲಿ ಜಯಗಳಿಸಿತ್ತು.
ಮಾರ್ಚ್ 1972ರಲ್ಲಿ ಮಹಾರಾಷ್ಟ್ರ ರಾಜ್ಯದ 4ನೇ ವಿಧಾನಸಭೆಗೆ 270 ಸೀಟುಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 222 ಸೀಟುಗಳಲ್ಲಿ ಜಯಗಳಿಸಿತ್ತು. ಭಾರತೀಯ ಜನಸಂಘ ಕೇವಲ 7 ಸೀಟುಗಳಲ್ಲಿ ವಿಜಯಸಾಧಿಸಿತ್ತು.
ಕಾಂಗ್ರೆಸ್ ಪಕ್ಷ 222 ಸೀಟುಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಬಹುಮತ ಪಡೆದಿತ್ತು. ಮುಖ್ಯಮಂತ್ರಿ ವಸಂತರಾವ್ ನಾಯಕ್ ಮರು ಆಯ್ಕೆಯಾಗಿದ್ದರು. 2024ರ ಚುನಾವಣೆಯಲ್ಲಿ ಮಹಾಯತಿ ಮೈತ್ರಿಕೂಟ 229 ಸೀಟುಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದು, 1972ರ ದಾಖಲೆಯನ್ನು ಸರಿಗಟ್ಟಿದೆ.
ಮಧ್ಯಾಹ್ನ 3.30ರ ಮಾಹಿತಿಯಂತೆ ಬಿಜೆಪಿ 132, ಶಿವಸೇನೆ (ಏಕನಾಥ್ ಶಿಂಧೆ ಬಣ) 54, ಎನ್‌ಸಿಪಿ (ಅಜಿತ್ ಪವಾರ್ ಬಣ) 40 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಮೂರು ಪಕ್ಷಗಳು 'ಮಹಾಯುತಿ' ಮೈತ್ರಿಕೂಟದ ಭಾಗವಾಗಿವೆ.
ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಕಾಂಗ್ರೆಸ್ 18, ಶಿವಸೇನೆ (ಉದ್ಧವ್ ಠಾಕ್ರೆ ಬಣ) 20, ಎನ್‌ಸಿಪಿ (ಶರದ್ ಪವಾರ್) 12, ಎಸ್‌ಪಿ 2, ಇತರರು/ ಪಕ್ಷೇತರರು 10 ಸೀಟುಗಳಲ್ಲಿ ಮುನ್ನಡೆ ಪಡೆದಿದ್ದಾರೆ.
ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ ಬಿಜೆಪಿ 12, ಶಿವಸೇನೆ (ಏಕನಾಥ್ ಶಿಂಧೆ ಬಣ) 8, ಎನ್‌ಸಿಪಿ (ಅಜಿತ್ ಪವಾರ್ ಬಣ) 8, ಎನ್‌ಸಿಪಿ (ಶರದ್ ಪವಾರ್) 1 ಸೀಟುಗಳಲ್ಲಿ ಜಯಗಳಿಸಿವೆ.
ಮಹಾರಾಷ್ಟ್ರದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯ ಮತದಾನದಲ್ಲೂ ದಾಖಲೆಯಾಗಿತ್ತು. ಶೇ 65.1ರಷ್ಟು ಮತದಾನವಾಗಿತ್ತು. 1995ರಲ್ಲಿ ರಾಜ್ಯದಲ್ಲಿ ಶೇ 71.69ರಷ್ಟು ಮತದಾನವಾಗಿತ್ತು ಅದು ಬಿಟ್ಟರೆ ಈ ಬಾರಿಯೇ ಅಧಿಕ ಮತದಾನ ಪ್ರಮಾಣ ದಾಖಲಾಗಿತ್ತು.
ರಾಜ್ಯದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಶೇ 61.39ಕ್ಕೂ ಅಧಿಕ ಮತದಾನ ದಾಖಲಾಗಿತ್ತು. 2019ರ ವಿಧಾನಸಭೆ ಚುನಾವಣೆಯಲ್ಲಿ 61.4ರಷ್ಟು ಮತದಾನವಾಗಿತ್ತು. ಈ ಸಲ ಹೆಚ್ಚು ಮತದಾನವಾಗಿದ್ದು, ಬಿಜೆಪಿ ಮತ್ತು ಮೈತ್ರಿಕೂಟ ಪಕ್ಷಗಳಿಗೆ ಸಹಾಯಕವಾಗಿದೆ.












Click it and Unblock the Notifications