Exit Poll 2024: Poll Dairy ಫಲಿತಾಂಶ, ಮಹಾರಾಷ್ಟ್ರದಲ್ಲಿ ಯಾರಿಗೆ ಗೆಲುವು?
ಮುಂಬೈ, ನವೆಂಬರ್ 20: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ 2024ರ ಮತದಾನ ಮುಕ್ತಾಯಗೊಂಡಿದೆ. 288 ಸೀಟುಗಳಿಗೆ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಮತದಾನದ ಬಳಿಕ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗುತ್ತಿವೆ. ರಾಜ್ಯದ ಚುನಾವಣಾ ಫಲಿತಾಂಶ ನವೆಂಬರ್ 23ರ ಶನಿವಾರ ಘೋಷಣೆಯಾಗಲಿದೆ. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145 ಸೀಟುಗಳು.
Poll Dairy ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ 2024ರ ಚುನಾವಣೋತ್ತರ ಸಮೀಕ್ಷೆ ನಡೆಸಿದೆ. ರಾಜ್ಯದ ಚುನಾವಣಾ ಕಣದಲ್ಲಿ 4,136 ಅಭ್ಯರ್ಥಿಗಳಿದ್ದಾರೆ. ಇವರಲ್ಲಿ 3771 ಪುರುಷ ಅಭ್ಯರ್ಥಿಗಳು, ಮಹಿಳಾ ಅಭ್ಯರ್ಥಿಗಳು 363, ಇತರ ಅಭ್ಯರ್ಥಿಗಳು 2.

ಯಾರಿಗೆ ಎಷ್ಟು ಸೀಟು?: Poll Dairy ಫಲಿತಾಂಶದ ಪ್ರಕಾರ ಮಹಾರಾಷ್ಟ್ರ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ 122-186 ಸೀಟು, ಎಂವಿಎ ಮೈತ್ರಿಕೂಟ 69-121 ಸೀಟು, ಇತರರು 12-29 ಸೀಟುಗಳಲ್ಲಿ ಜಯಗಳಿಸಲಿದ್ದಾರೆ.
Poll Dairy ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ಹಾಲಿ ರಾಜ್ಯದ ಆಡಳಿತ ಮೈತ್ರಿಕೂಟವಾದ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಮತ್ತೆ ಅಧಿಕಾರವನ್ನು ಪಡೆಯಲಿದೆ. ಮಹಾವಿಕಾಸ್ ಅಘಾಡಿ ಮೈತ್ರಿಕೂಟ (ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್)) ನೇತೃತ್ವದ ಪಕ್ಷಗಳ ಮೈತ್ರಿಕೂಟಕ್ಕೆ ಹಿನ್ನಡೆಯಾಗಲಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ 149, ಶಿವಸೇನೆ (ಏಕನಾಥ್ ಶಿಂಧೆ ಬಣ) 81,, ಎನ್‌ಸಿಪಿ (ಅಜಿತ್ ಪವಾರ್ ಬಣ) 59 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕಾಂಗ್ರೆಸ್ 101, ಶಿವಸೇನೆ (ಉದ್ಧವ್ ಠಾಕ್ರೆ ಬಣ) 95, ಎನ್‌ಸಿಪಿ (ಶರದ್ ಪವಾರ್) 86 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಎಸ್‌ಪಿಯ 237, ಎಐಎಂಐಎಂ 17, 2086 ಪಕ್ಷೇತರ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
2019ರಲ್ಲಿ ಬಿಜೆಪಿ 105, ಶಿವಸೇನೆ 56, ಕಾಂಗ್ರೆಸ್ 44, ಎನ್‌ಸಿಪಿ 54 ಮತ್ತು ಇತರರು 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿ-ಶಿವಸೇನೆ ಮೈತ್ರಿಮಾಡಿಕೊಂಡು, ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿದ್ದವು. ಆದರೆ 2024ರ ಚುನಾವಣೆಯಲ್ಲಿ ಎನ್‌ಸಿಪಿ ಮತ್ತು ಶಿವಸೇನೆ ಪಕ್ಷಗಳು ಎರಡು ಬಣಗಳಾಗಿವೆ.
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಬಗ್ಗೆ ಬರುತ್ತಿರುವ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಮಹಾಯತಿ ಮೈತ್ರಿಕೂಟಕ್ಕೆ ಜಯ ಎಂದು ಹೇಳುತ್ತಿವೆ. ಆದ್ದರಿಂದ ಬಿಜೆಪಿ ನಾಯಕರಲ್ಲಿ ಉತ್ಸಾಹ ಹೆಚ್ಚುತ್ತಿದೆ. ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದ ಈ ಬಾರಿಯ ಚುನಾವಣೆ ಶಿವಸೇನೆ V/S ಶಿವಸೇನೆ, ಎನ್‌ಸಿಪಿ V/S ಎನ್‌ಸಿಪಿ ನಡುವಿನ ಪೈಪೋಟಿಗೆ ಸಾಕ್ಷಿಯಾಗಿದೆ. ಎರಡೂ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಜನರ ಮುಂದೆ ಹೋಗಿವೆ. ಶಿವಸೇನೆ (ಏಕನಾಥ್ ಶಿಂಧೆ ಬಣ) ಮತ್ತು ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಮತ್ತು ಎನ್‌ಸಿಪಿ (ಶರದ್ ಪವಾರ್) ಬಣ ಎದುರಾಳಿಗಳು. ಯಾರಿಗೆ ಎಷ್ಟು ಸ್ಥಾನ ಸಿಗಲಿದೆ? ಎಂಬುದು ಕುತೂಹಲವಾಗಿದೆ.












Click it and Unblock the Notifications