Maharashtra Assembly Election 2024: ಮಹಾರಾಷ್ಟ್ರ ಚುನಾವಣೆ, 15 ಸೀಟುಗಳು ಯಾರಿಗೆ?
ಮುಂಬೈ, ಅಕ್ಟೋಬರ್ 30: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ಕ್ಕೆ ನಾಮಪತ್ರ ಸಲ್ಲಿಕೆ ಮಾಡಲು ಅಕ್ಟೋಬರ್ 29 ಕೊನೆಯ ದಿನವಾಗಿತ್ತು. ಒಟ್ಟು 10,905 ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ, ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ವಿರೋಧ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಚುನಾವಣೆಯಲ್ಲಿ ಎದುರಾಳಿಗಳು.
ಮಹಾರಾಷ್ಟ್ರ ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರಗಳ ಪರಿಶೀಲನೆ ಅಕ್ಟೋಬರ್ 30ರಂದು ನಡೆಯಲಿದ್ದು, ನವೆಂಬರ್ 4 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

15 ಸೀಟುಗಳು ಇನ್ನೂ ಅತಂತ್ರ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪೂರ್ಣಗೊಂಡಿದ್ದರೂ ಸಹ ಇನ್ನೂ 15 ಸೀಟುಗಳ ಕುರಿತು ಗೊಂದಲ ಮುಂದುವರೆದಿದೆ. ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಇನ್ನೂ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ.
ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ವಿರೋಧ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ 11 ಕ್ಷೇತ್ರಗಳಿಗೆ ಅಧಿಕೃತವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಆದ್ದರಿಂದ 15 ಕ್ಷೇತ್ರಗಳ ಕುರಿತು ಯಾವುದೇ ಸ್ಪಷ್ಟವಾದ ಚಿತ್ರಣಗಳಿಲ್ಲ.
ಆದ್ದರಿಂದ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಪಕ್ಷೇತರ ಅಭ್ಯರ್ಥಿಗಳು ಮತ್ತು ಪಕ್ಷಗಳು ಘೋಷಣೆ ಮಾಡದ ಅಭ್ಯರ್ಥಿಗಳು ಗೆದ್ದರೆ ಚುನಾವಣಾ ಚಿತ್ರಣ ಬದಲಾಗಲಿದೆ. ಸರ್ಕಾರ ರಚನೆಯಲ್ಲಿ ಅವರ ಪಾತ್ರ ಪ್ರಮುಖವಾಗಲಿದೆ.
ಸದ್ಯದ ಮಾಹಿತಿ ಪ್ರಕಾರ ಬಿಜೆಪಿ 152 ಸೀಟುಗಳಿಗೆ, ಎನ್‌ಸಿಪಿ (ಅಜಿತ್ ಪವಾರ್) 52, ಶಿವಸೇನೆ (ಏಕನಾಥ ಶಿಂಧೆ) 80 ಸೀಟುಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಎಂವಿಎ ಮೈತ್ರಿಕೂಟದಲ್ಲಿ ಕಾಂಗ್ರೆಸ್ 103, ಶಿವಸೇನೆ (ಉದ್ಧವ್ ಠಾಕ್ರೆ ಬಣ) 89, ಎನ್‌ಸಿಪಿ (ಶರದ್ ಪವಾರ್) 87 ಸೀಟುಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಎಂವಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಬಗ್ಗೆ ಇದ್ದ ಗೊಂದಲ ನಾಮಪತ್ರ ಸಲ್ಲಿಕೆ ಕೊನೆಯ ದಿನದ ತನಕವೂ ಮುಂದುವರೆಯಿತು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಅಂತಿಮವಾಗಿ 7,995 ಅಭ್ಯರ್ಥಿಗಳು, 10,905 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ.
ಈ ಬಾರಿಯ ವಿಧಾನಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಚುನಾವಣಾ ಕಣಕ್ಕಿಳಿಯುವ ಕುರಿತು, ಸೀಟುಗಳ ಹಂಚಿಕೆಯ ವಿಚಾರದಲ್ಲಿ ಪಕ್ಷಗಳಿಗೆ ಸ್ಪಷ್ಟತೆ ಇರಲಿಲ್ಲ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರವೂ 9 ಸೀಟುಗಳ ಹಂಚಿಕೆ ಕುರಿತು ಮಾತುಕತೆಗಳು ನಡೆಯುತ್ತಿದ್ದವು.
ಮಹಾಯತಿ ಮತ್ತು ಎಂವಿಎ ಮೈತ್ರಿಕೂಟಗಳು ಕೆಲವು ಸೀಟುಗಳನ್ನು ಪಕ್ಷೇತರರು, ಇತರ ಪಕ್ಷಗಳಿಗೆ ಬಿಟ್ಟುಕೊಟ್ಟಿವೆ. ಎಂವಿಎ ಮೈತ್ರಿಕೂಟ 85-85-85 ಲೆಕ್ಕಾಚಾರದಂತೆ ಸೀಟುಗಳನ್ನು ಹಂಚಿಕೆ ಮಾಡಿಕೊಂಡಿವೆ. ಆದರೆ ಇದು ಅಂತಿಮ ಚೌಕಟ್ಟಿನಲ್ಲಿ ಇಲ್ಲ.












Click it and Unblock the Notifications