ಮಧ್ಯಪ್ರದೇಶ; ಕೋಟಿ ದಾಟಿದ ಬಿಜೆಪಿಯ 107 ಶಾಸಕರ ಆಸ್ತಿ!
ಭೋಪಾಲ್, ನವೆಂಬರ್ 10: ಕೇಂದ್ರ ಚುನಾವಣಾ ಆಯೋಗ 5 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಮಧ್ಯಪ್ರದೇಶ ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರಂದು ಚುನಾವಣೆ ನಡೆಯುತ್ತಿದೆ, ಡಿಸೆಂಬರ್ 3ರಂದು ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ.
ಎಡಿಆರ್ ಮತ್ತು ಮಧ್ಯ ಪ್ರದೇಶ ಎಲೆಕ್ಷನ್ ವಾಚ್ ರಾಜ್ಯದ 230 ಹಾಲಿ ಶಾಸಕರ ಆಸ್ತಿ ವಿವರಗಳನ್ನು ಸಂಗ್ರಹ ಮಾಡಿ ಅಂಕಿ ಅಂಶ ಬಿಡುಗಡೆ ಮಾಡಿದೆ. ಹಾಲಿ ಶಾಸಕರ ಪೈಕಿ 186 ಜನರು ಕೋಟ್ಯಧಿಪತಿಗಳು. ಆಡಳಿತ ಪಕ್ಷ ಬಿಜೆಪಿಯ 107 ಶಾಸಕರ ಆಸ್ತಿ ಕೋಟಿ ದಾಟಿದೆ.

ಶಾಸಕರ ಆಸ್ತಿ ವಿವರ; ಹಾಲಿ ಶಾಸಕರ ಆಸ್ತಿ ವಿವರ, ಕ್ರಿಮಿನಲ್ ಪ್ರಕರಣಗಳನ್ನು ಸಂಗ್ರಹ ಮಾಡಿ ಬಿಡುಗಡೆ ಮಾಡಲಾಗಿದೆ. ಹಾಲಿ ವಿಧಾನಸಭೆಯ ಶೇ 81ರಷ್ಟು ಶಾಸಕರು ಕೋಟ್ಯಧಿಪತಿಗಳು. 129 ಬಿಜೆಪಿ ಶಾಸಕರ ಪೈಕಿ 107 ಶಾಸಕರ ಆಸ್ತಿ ಒಂದು ಕೋಟಿಗೂ ಅಧಿಕ ಎಂದು ವರದಿ ಹೇಳಿದೆ. ಕಾಂಗ್ರೆಸ್‌ನ 97 ಶಾಸಕರ ಪೈಕಿ 76 ಶಾಸಕರು ಮತ್ತು 3 ಪಕ್ಷೇತರ ಶಾಸಕರ ಕೋಟಿಗೂ ಮೀರಿ ಆಸ್ತಿ ಹೊಂದಿದ್ದಾರೆ.
ಈ ವರದಿಯ ಪ್ರಕಾರ ಹಾಲಿ ಶಾಸಕರ ಸರಾಸರಿ ಆಸ್ತಿ ಮೌಲ್ಯ 10.76 ಕೋಟಿ ರೂ. ಆಗಿದೆ. ಮೊದಲ ಸ್ಥಾನದಲ್ಲಿ ಬಿಜೆಪಿಯ ಸಂಜಯ್ ಸತ್ಯೇಂದ್ರ ಇದ್ದು ಇವರ ಆಸ್ತಿ 226 ಕೋಟಿ ರೂ. ಆಗಿದೆ. 2ನೇ ಸ್ಥಾನದಲ್ಲಿ ಬಿಜೆಪಿಯ ಚೈತನ್ಯ ಕಾಶ್ಯಪ್ ಇದ್ದು, 204 ಕೋಟಿ ಆಸ್ತಿ ಹೊಂದಿದ್ದಾರೆ. 3ನೇ ಸ್ಥಾನದಲ್ಲಿ ಕಾಂಗ್ರೆಸ್‌ನ ಸಂಜಯ್ ಶುಕ್ಲಾ ಇದ್ದಾರೆ, ಒಟ್ಟು ಆಸ್ತಿ 139 ಕೋಟಿ ರೂ. ಆಗಿದೆ.
ಕಡಿಮೆ ಆಸ್ತಿ ಹೊಂದಿದ ಶಾಸಕರ ಪಟ್ಟಿಯಲ್ಲಿ ಮೂವರು ಬಿಜೆಪಿಯವರೇ ಇದ್ದಾರೆ. ರಾಮ್ ದಂಗೋಟಿ ಒಟ್ಟು ಆಸ್ತಿ 50,749 ರೂ.ಗಳು. 2ನೇ ಸ್ಥಾನದಲ್ಲಿ ಉಷಾ ಠಾಕೂರ್ ಇದ್ದು, ಒಟ್ಟು ಆಸ್ತಿ 7.35 ಲಕ್ಷ ಆಗಿದೆ. 3ನೇ ಸ್ಥಾನದಲ್ಲಿ ಶಾರದಾ ಇದ್ದು, 8 ಲಕ್ಷ ರೂ. ಆಸ್ತಿ ಹೊಂದಿದ್ದಾರೆ.
ಬಿಜೆಪಿ ಶಾಸಕರ ಸರಾಸರಿ ಆಸ್ತಿ ಮೌಲ್ಯ 9.89 ಕೋಟಿಯಾಗಿದೆ. ಕಾಂಗ್ರೆಸ್ ಶಾಸಕರ ಸರಾಸರಿ ಅಸ್ತಿ 11.89 ಕೋಟಿ. ಬಿಎಸ್‌ಪಿಯ ಒಬ್ಬರು ಶಾಸಕರ ಆಸ್ತಿ ಮೌಲ್ಯ 96.95 ಲಕ್ಷ ಆಗಿದೆ. ಮೂವರು ಪಕ್ಷೇತರ ಶಾಸಕರು ಸರಾಸರಿ 11.98 ಕೋಟಿ ಆಸ್ತಿ ಹೊಂದಿದ್ದಾರೆ.
38 ಶಾಸಕರು 1 ಕೋಟಿಗೂ ಅಧಿಕ ಸಾಲ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. 127 ಕೋಟಿ ಆಸ್ತಿ ಹೊಂದಿರುವ ಕಾಂಗ್ರೆಸ್ ಶಾಸಕ ನಿಲಯ್ ವಿನೋದ್ ದಾಗಾ 54 ಕೋಟಿ ಸಾಲ ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ.
ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಎದುರಾಳಿಗಳು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಶಿವರಾಜ್ ಸಿಂಗ್ ಚೌವ್ಹಾಣ್ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಉತ್ಸಾಹ ಹೊಂದಿದೆ, ಬಿರುಸಿನಿಂದ ಪ್ರಚಾರ ಕೈಗೊಂಡಿದೆ. ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಎದುರಾಳಿ.
ರಾಜ್ಯದ ಒಟ್ಟು ಮತದಾರರು 5,60,60,925. ಇವರಲ್ಲಿ ಪುರುಷರು 2,88,25,607. ಮಹಿಳೆಯರು 2,72,33,945 ಮತ್ತು ಇತರ ಮತದಾರರು 1,373. ನವೆಂಬರ್ 17ರಂದು ಚುನಾವಣೆ ನಡೆಯಲಿದೆ.












Click it and Unblock the Notifications