LPG Price: ಎಲ್‌ಪಿಜಿ ಸಿಲಿಂಡರ್ ದರ ಸದ್ಯದಲ್ಲೇ ಭಾರೀ ಇಳಿಕೆ ಸಾಧ್ಯತೆ, ಕಾರಣ ಇಲ್ಲಿದೆ
ದೇಶದಾದ್ಯಂತ ಕೋಟ್ಯಂತರ ಮಹಿಳೆಯರು ಮನೆಯಲ್ಲಿ ಅಡುಗೆಗಾಗಿ ಎಲ್‌ಪಿಜಿ ಸಿಲಿಂಡರ್ ಬಳಸುತ್ತಿದ್ದಾರೆ. ಕೇಂದ್ರ ಸರ್ಕಾರವು ಈಗಾಗಲೇ ಸಬ್ಸಿಡಿ ಮೂಲಕ ಕಡಿಮೆ ದರಕ್ಕೆ ಎಲ್‌ಪಿಜಿ ಮನೆಬಾಗಿಲಿಗೆ ಪೂರೈಕೆ ಮಾಡುತ್ತಿದೆ. ಇದೀಗ ಎಲ್‌ಪಿಜಿ ಬಳಕೆದಾರರಿಗೆ ಮತ್ತೊಂದು ಸಿಹಿಸುದ್ದಿ ಹೊರಬಿದ್ದಿದೆ. ಸದ್ಯದಲ್ಲೇ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯು ಭಾರೀ ಇಳಿಕೆ ಕಾಣುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣವೇನು ಎನ್ನುವ ಮಾಹಿತಿ ಇಲ್ಲಿದೆ.
ಇತ್ತೀಚೆಗಷ್ಟೇ ಭಾರತ ಸರ್ಕಾರವು ಅಮೇರಿಕಾದಿಂದ ಎಲ್‌ಪಿಜಿ ಆಮದು ಮಾಡಿಕೊಳ್ಳಲು ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ನಿರ್ಧಾರವು ಐತಿಹಾಸಿಕ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ. ಕ್ರಮೇಣ ಎಲ್‌ಪಿಜಿ ಪೂರೈಕೆಗೆ ಯಾವುದೇ ಅಡಚಣೆ ಇಲ್ಲದ ಕಾರಣ ಸದ್ಯದಲ್ಲೇ ದರ ಕಡಿಮೆಯಾಗುವ ಸಾಧ್ಯತೆ ಇದೆ. ಭಾರತವು ಸಾಂಪ್ರದಾಯಿಕವಾಗಿ ತನ್ನ ಹೆಚ್ಚಿನ ಎಲ್‌ಪಿಜಿ ಆಮದುಗಳಿಗೆ ಮಧ್ಯಪ್ರಾಚ್ಯವನ್ನೇ ಅವಲಂಬಿಸಿದೆ. ಈ ಹೊಸ ಒಪ್ಪಂದವು ಈಗ ಭಾರತ-ಅಮೇರಿಕಾ ನಡುವಿನ ಸಂಬಂಧವನ್ನು ಮತ್ತೆ ಹಳಿಗೆ ತರಲು ಸಹಾಯ ಮಾಡುವ ನಿರೀಕ್ಷೆಯಲ್ಲಿದೆ.

ಈ ಒಪ್ಪಂದಿದಂದ ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿ) ಲಾಭ ಸೀಮಿತವಾಗಿರಬಹುದು. ಬೆಲೆ ವಿವರಗಳು ಕೂಡ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅಮೇರಿಕಾ ಎಲ್‌ಪಿಜಿ ಮಧ್ಯಪ್ರಾಚ್ಯ ಎಲ್‌ಪಿಜಿ ಬೆಲೆಗಳಿಗೆ ಹೋಲಿಸಿದರೆ ಸ್ವಲ್ಪ ರಿಯಾಯಿತಿಯಲ್ಲಿರಬಹುದು ಎಂದು ತಜ್ಞರು ಸುಳಿವು ನೀಡಿದ್ದಾರೆ. ಅಲ್ಲದೆ ಇದರಿಂದ ಇತ್ತೀಚಿನ ವರ್ಷಗಳಲ್ಲಿ ನಷ್ಟ ಎದುರಿಸುತ್ತಿರುವ ಸರ್ಕಾರಿ-ಚಾಲಿತ ಇಂಧನ ಚಿಲ್ಲರೆ ವ್ಯಾಪಾರಿಗಳಿಗೂ ರಿಲೀಫ್ ಸಿಗಲಿದೆ. ವರದಿಗಳ ಪ್ರಕಾರ ಈ ಹಿಂದೆ ಒಎಂಸಿಗಳು ಪ್ರತಿ ಸಿಲಿಂಡರ್‌ಗೆ ಸುಮಾರು ₹200 ರೂಪಾಯಿ ನಷ್ಟ ಅನುಭವಿಸುತ್ತಿದ್ದವು.
ಈಗ ಕಚ್ಚಾ ತೈಲ ಮತ್ತು ಎಲ್‌ಪಿಜಿ ಬೆಲೆಗಳನ್ನು ಸಡಿಲಿಸುವುದರಿಂದ ನಷ್ಟಗಳು ತೀವ್ರವಾಗಿ ಕಡಿಮೆಯಾಗಿವೆ. ಈಗ ಪ್ರತಿ ಸಿಲಿಂಡರ್‌ಗೆ ಕೇವಲ ₹30-40 ರೂಪಾಯಿ ಮಾತ್ರ ಕಳೆದುಕೊಳ್ಳುತ್ತವೆ. ಭಾರತದ ಒಟ್ಟು ಎಲ್‌ಪಿಜಿ ಆಮದಿನ ಕೇವಲ ಶೇ 10ರಷ್ಟು ಮಾತ್ರವೇ ಅಮೇರಿಕಾ ಪೂರೈಸಲಿದೆ. ಹೀಗಾಗಿ ಒಟ್ಟಾರೆ ಪರಿಣಾಮ ಕೂಡ ಸೀಮಿತ ಎನ್ನಲಾಗಿದೆ. ಹೀಗಾಗಿ ಎಲ್‌ಪಿಜಿ ಸಿಲಿಂಡರ್ ದರಗಳು ಮುಂದಿನ ತಿಂಗಳಿನಿಂದ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.
ಒಪ್ಪಂದದಿಂದ ಗ್ರಾಹಕರಿಗೆ ಅನುಕೂಲವೇ?
ಮನೆಯ ಅಡುಗೆಗೆ ಬಳಸುವ ಎಲ್‌ಪಿಜಿಯನ್ನೇ ಭಾರತವು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿದೆ. ಇದರಲ್ಲಿ ದೇಶೀಯ ಉತ್ಪಾದನೆ ಕೇವಲ ಶೇ 35ರಷ್ಟು ಮಾತ್ರ ಇದ್ದು, ಉಳಿದ ಶೇ 65ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಸದ್ಯ ಭಾರತವು ತನ್ನ ಎಲ್‌ಪಿಜಿ ಪೂರೈಕೆಗಾಗಿ ಪಶ್ಚಿಮ ಏಷ್ಯಾವನ್ನು ಹೆಚ್ಚಾಗಿ ಅವಲಂಬಿಸಿದೆ. ನಂತರದ ಸಾಲಿನಲ್ಲಿ ಅಮೇರಿಕಾ, ಕುವೈತ್ ಮತ್ತು ಸೌದಿ ಅರೇಬಿಯಾ ಇವೆ. ಈಗ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಅಮೆರಿಕದಿಂದ ಸುಮಾರು 2.2 ಮಿಲಿಯನ್ ಟನ್‌ಗಳಷ್ಟು ಎಲ್‌ಪಿಜಿ ಆಮದು ಮಾಡಿಕೊಳ್ಳಲು ಒಂದು ವರ್ಷದ ಒಪ್ಪಂದವನ್ನು ಮಾಡಿಕೊಂಡಿದೆ. ಇದರಿಂದ ಭಾರತೀಯ ಒಎಂಸಿಗಳಿಗೆ ಆರ್ಥಿಕವಾಗಿ ಲಾಭದಾಯಕ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಗ್ರಾಹಕರ ಮೇಲೂ ಹೆಚ್ಚಿನ ಹೊರೆ ಬೀಳುವುದಿಲ್ಲ. ಹೀಗಾಗಿ ದರ ಕಡಿಮೆಯಾಗಲಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಗ್ರಾಹಕರ ಮೇಲೂ ಹೆಚ್ಚಿನ ಹೊರೆ ಬೀಳುವುದಿಲ್ಲ. ಹೀಗಾಗಿ ದರ ಕಡಿಮೆಯಾಗಲಿದೆ ಎಂದು ವರದಿಯಾಗಿದೆ.












Click it and Unblock the Notifications