Breaking: ವಿರೋಧ ಪಕ್ಷದ ನಾಯಕ ರಾಹುಲ್ ಮೊದಲ ವಿದೇಶ ಪ್ರವಾಸ ಅಮೆರಿಕಕ್ಕೆ
ನವದೆಹಲಿ, ಆಗಸ್ಟ್ 31: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೆಪ್ಟೆಂಬರ್ ತಿಂಗಳಿನಲ್ಲಿ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಅವರು ವಿದೇಶ ಪ್ರವಾಸ ಕೈಗೊಂಡಿದ್ದು, ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಮೂರು ದಿನಗಳ ವಿದೇಶ ಪ್ರವಾಸದಲ್ಲಿ ಅವರು ವಿದ್ಯಾರ್ಥಿಗಳು, ಉದ್ಯಮಿಗಳ ಜೊತೆ ಸಂವಾದವನ್ನು ನಡೆಸಲಿದ್ದಾರೆ.
ಲೋಕಸಭೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೆಪ್ಟೆಂಬರ್ 8ರಿಂದ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕರಾದ ಬಳಿಕ ಮೊದಲ ಬಾರಿಗೆ ಅವರು ವಿದೇಶ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಟೆಕ್ಸಾಸ್ ಮತ್ತು ವಾಷಿಂಗ್ಟನ್ ಡಿಸಿಗೆ ಅವರು ಭೇಟಿ ನೀಡಲಿದ್ದಾರೆ.

ಸೆಪ್ಟೆಂಬರ್ 8, 9 ಮತ್ತು 10ರಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ತಿಳಿಸಿದೆ. ವಿರೋಧ ಪಕ್ಷದ ನಾಯಕರಾದ ಬಳಿಕ ಅವರನ್ನು ಭೇಟಿಯಾಗಬೇಕೆಂಬ ಮನವಿಗಳ ಹಿನ್ನಲೆಯಲ್ಲಿ ಈ ವಿದೇಶ ಪ್ರವಾಸವನ್ನು ರಾಹುಲ್ ಗಾಂಧಿ ಕೈಗೊಂಡಿದ್ದಾರೆ.
ರಾಹುಲ್ ಗಾಂಧಿ ಸೆಪ್ಟೆಂಬರ್ 8, 9ರಂದು ಡಾಲಸ್‌ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್ 9, 10ರಂದು ವಾಷಿಂಗ್ಟನ್ ಡಿಸಿಯಲ್ಲಿ ಹಲವಾರು ಸಂವಾದದಲ್ಲಿ ಪಾಲ್ಗೊಂಡು ಶಿಕ್ಷಣ ಕ್ಷೇತ್ರದ ತಜ್ಞರು, ಪತ್ರಕರ್ತರು, ವಿದ್ಯಾರ್ಥಿಗಳು, ಉದ್ಯಮಿಗಳು, ಅನಿವಾಸಿ ಭಾರತೀಯರ ಜೊತೆ ಮಾತುಕತೆ ನಡೆಸಲಿದ್ದಾರೆ.
"ರಾಹುಲ್ ಗಾಂಧಿಯವರು ಲೋಕಸಭೆ ವಿರೋಧ ಪಕ್ಷದ ನಾಯಕರಾದ ಬಳಿಕ 32 ದೇಶಗಳನ್ನು ಪ್ರತಿನಿಧಿಸುವ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಅನಿವಾಸಿ ಭಾರತೀಯರು, ಪತ್ರಕರ್ತರು, ಉದ್ಯಮಿಗಳ ಮನವಿಯಂತೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿದ್ದೆ. ಈಗ ಅವರ ಪ್ರವಾಸದ ದಿನಾಂಕ ನಿಗದಿಯಾಗಿದೆ" ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
ಡಾಲಸ್‌ನಲ್ಲಿ ರಾಹುಲ್ ಗಾಂಧಿ ವಿದ್ಯಾರ್ಥಿಗಳು, ಶಿಕ್ಷಣ ಕ್ಷೇತ್ರದ ತಜ್ಞರು, ಟೆಕ್ಸಾಸ್ ವಿಶ್ವವಿದ್ಯಾಲಯದ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೆಲವು ಉದ್ಯಮಿಗಳ ಜೊತೆಗಿನ ಔತಣ ಕೂಟದಲ್ಲಿ ಸಹ ಪಾಲ್ಗೊಳ್ಳಲಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ನ್ಯಾಷನಲ್ ಪ್ರೆಸ್ ಕ್ಲಬ್ ಮತ್ತು ಇತರರ ಜೊತೆ ರಾಹುಲ್ ಸಂವಾದ ನಡೆಸಲಿದ್ದಾರೆ.
ಸ್ಯಾಮ್ ಪಿತ್ರೋಡಾ ಮಾತನಾಡಿ, "ನಾವು (ಕಾಂಗ್ರೆಸ್) ಆಡಳಿತ ನಡೆಸುತ್ತಿರುವ ರಾಜ್ಯಗಳಾದ ಕರ್ನಾಟಕದ ಬೆಂಗಳೂರು, ಹೈದರಾಬಾದ್‌ನ ಜನರೊಂದಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಾವು ಮಹಾರಾಷ್ಟ್ರದಲ್ಲಿಯೂ ಗೆಲವು ಸಾಧಿಸಬಹುದು. ಮುಂಬೈ, ಪುಣೆ ಮತ್ತು ಗುರ್ಗಾಂವ್‌ನ ಜನರು ಸಂವಾದದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿದ್ದಾರೆ. ಇವುಗಳು ನಿಜವಾಗಿಯೂ ತಂತ್ರಜ್ಞಾನದ ಮೇಲೆ ಕೇಂದ್ರೀಕೃತವಾಗಿರುವ ವ್ಯಾಪಾರಿ ನಗರಗಳು. ವ್ಯಾಪಾರಿ ಮತ್ತು ತಂತ್ರಜ್ಞಾನ ಸಮುದಾಯವೂ ಸಂವಾದದ ಬಗ್ಗೆ ಆಸಕ್ತಿ ಹೊಂದಿದೆ" ಎಂದರು.
ರಾಹುಲ್ ಗಾಂಧಿ ಅಮೆರಿಕ ಭೇಟಿ ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನಲೆಯಲ್ಲಿಯೂ ಮಹತ್ವವನ್ನು ಪಡೆದಿದೆ. ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಮುಂಬರುವ ಚುನಾವಣೆಯಲ್ಲಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ. ಎದುರಾಳಿಯಾಗಿರುವುದು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್.












Click it and Unblock the Notifications