ಅಂತೂ ಇಂತೂ ರಾಹುಲ್ ಗಾಂಧಿ ಮದುವೆ ಆಗ್ತಿದ್ದಾರಾ? ರಾಹುಲ್ ಗಾಂಧಿ ಗಡ್ಡಕ್ಕೆ ಸಿಗುತ್ತಾ ಮುಕ್ತಿ?
ಪಾಟ್ನಾ: ದೇಶದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಯಾರಂದ್ರೆ ಅದು ರಾಹುಲ್ ಗಾಂಧಿ ಅಂತಾ ಕಾಮಿಡಿ ಮಾಡ್ತಾರೆ ಜನ. ಈಗ ವಿರೋಧ ಪಕ್ಷಗಳ ಸಭೆಯಲ್ಲೂ ರಾಹುಲ್ ಗಾಂಧಿ ಮದುವೆ ವಿಚಾರ ಪ್ರಸ್ತಾಪ ಮಾಡಲಾಗಿದೆ. ಹಾಗಾದ್ರೆ ರಾಹುಲ್ ಗಾಂಧಿ ಮದುವೆ ಪಕ್ಕಾ ಆಗೋಯ್ತಾ? ರಾಹುಲ್ ಮದುವೆಯ ಬಗ್ಗೆ ಲಾಲು ಪ್ರಸಾದ್ ಯಾದವ್ ಹೇಳಿದ್ದೇನು? ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಗೆ ಸೋಲಿನ ರುಚಿ ತೋರಿಸಬೇಕು ಅನ್ನೋದೆ ವಿಪಕ್ಷಗಳ ಗುರಿ. ಈ ಕಾರಣಕ್ಕೆ ಹಲವು ತಿಂಗಳ ಪರಿಶ್ರಮದ ನಂತರ ಇಂದು ಬಿಹಾರ ರಾಜಧಾನಿಯಲ್ಲಿ ವಿಪಕ್ಷ ನಾಯಕರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಭಾಗವಹಿಸಿದ್ದರು. ಬಿಹಾರ ಸಿಎಂ ನಿತೀಶ್ ಕುಮಾರ್ ಸರ್ಕಾರಿ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಹುಲ್ ಭಾಗವಹಿಸಿದ್ದರು. ನಂತರ ಸುದ್ದಿಗಾರರ ಜೊತೆ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಮದುವೆ ವಿಚಾರವನ್ನೂ ಲಾಲು ಪ್ರಸಾದ್ ಯಾದವ್ ಪ್ರಸ್ತಾಪ ಮಾಡಿದ್ದಾರೆ (Rahul Gandhi Marriage).

ರಾಹುಲ್ ಗಾಂಧಿ ಮದುವೆ ಯಾವಾಗ?
ಮೊದಲಿಗೆ ರಾಹುಲ್ ಗಾಂಧಿ ಅವರ ಗಡ್ಡದ ವಿಚಾರ ಮಾತನಾಡಿದ ಲಾಲು ಯಾದವ್, ಆ ನಂತರ ರಾಹುಲ್‌ಗೆ ನಗುನಗುತ್ತಾ ಸಲಹೆ ಒಂದನ್ನ ನೀಡಿದರು. ನಾನು ಹೇಳೋದನ್ನ ಈಗ ಕೇಳಿ, ಈ ಹಿಂದೆ ರಾಹುಲ್ ಗಾಂಧಿ ನನ್ನ ಮಾತು ಕೇಳುತ್ತಿರಲಿಲ್ಲ. ನನ್ನ ಮಾತನ್ನು ಕೇಳಿದ್ದರೆ ರಾಹುಲ್ ಗಾಂಧಿಗೆ ಇಷ್ಟೊತ್ತಿಗೆ ಮದುವೆ ಆಗಿರುತ್ತಿತ್ತು. ಆದ್ರೆ ಇನ್ನೂ ಕಾಲ ಮಿಂಚಿಲ್ಲ ಬಿಡಿ ಎಂದು ಲಾಲು ಪ್ರಸಾದ್ ಯಾದವ್ ಹಾಸ್ಯ ಚಟಾಕಿ ಹಾರಿಸಿದರು. ಆಗ ಅಲ್ಲಿದ್ದ ಮಾಧ್ಯಮ ಸಿಬ್ಬಂದಿ ಹಾಗೂ ಸುದ್ದಿಗಾರರಿಗೆ ನಗು ತಡೆಯಲು ಆಗಲಿಲ್ಲ. ಮತ್ತೆ ಮಾತು ಮುಂದವರಿಸಿ ಶೀಘ್ರದಲ್ಲೇ ಮದುವೆಯಾಗಿ ಎಂದು ರಾಹುಲ್ ಗಾಂಧಿಗೆ ಸಲಹೆ ನೀಡಿದರು ಲಾಲು ಯಾದವ್.
ಅಮ್ಮನ ಮಾತು ಕೇಳಲ್ವಾ ರಾಹುಲ್ ಗಾಂಧಿ?
ಈ ಸಂದರ್ಭದಲ್ಲಿ ಲಾಲು ಪ್ರಸಾದ್ ಯಾದವ್ ಮತ್ತೊಂದು ಕಂಪ್ಲೆಂಟ್ ಕೂಡ ಹೇಳಿದರು. ನಿಮ್ಮ ತಾಯಿ ಹಲವಾರು ಬಾರಿ ನಿಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಮದುವೆ ಬಗ್ಗೆ ಮನಸ್ಸು ಮಾಡಿ ಎಂದು ಲಾಲು ಪ್ರಸಾದ್ ಯಾದವ್ ಸಲಹೆ ನೀಡಿದರು. ಅದಕ್ಕೆ ರಾಹುಲ್ ಗಾಂಧಿ ಉತ್ತರ ಕೂಡ ಹಾಸ್ಯ ಚಟಾಕಿ ಹಾರಿಸುವಂತೆ ಇತ್ತು. ಲಾಲು ಪ್ರಸಾದ್ ಯಾದವ್ ಮದುವೆ ಆಗಿ ಎಂದು ಸಲಹೆ ನೀಡಿದರೆ, ರಾಹುಲ್ ಗಾಂಧಿ 'ನೀವು ಹೇಳಿದ ಮೇಲೆ ಆಗೇ ಆಗುತ್ತದೆ ಬಿಡಿ' ಎಂದರು. ಆಗ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕೂಡ ನಕ್ಕರು. ನಿತೀಶ್ ಕುಮಾರ್ ಅವರಿಗೂ ನಗು ತಡೆಯಲು ಆಗಲಿಲ್ಲ.
VIDEO | "Rahul Gandhi didn't follow my suggestion earlier. He should have married before. But still it's not too late," RJD supremo Lalu Prasad Yadav quips at Rahul Gandhi after opposition meeting held in Patna.#OppositionMeeting pic.twitter.com/o22ICLTujM
— Press Trust of India (@PTI_News) June 23, 2023
ರಾಹುಲ್ ಗಾಂಧಿ ಗಡ್ಡದ ಪ್ರಸ್ತಾಪ!
ದೇಶಾದ್ಯಂತ ಭಾರತ್ ಜೋಡೋ ಯಾತ್ರೆಯ ಮೂಲಕ ಸಂಚರಿಸಿದ್ದ ರಾಹುಲ್ ಗಾಂಧಿಯ ಹೋರಾಟದ ಬಗ್ಗೆ ಲಾಲು ಪ್ರಸಾದ್ ಯಾದವ್ ಮಾತನಾಡಿದರು. ಇದ್ರಿಂದ ಒಳ್ಳೆಯ ಕೆಲಸ ಆಗಿದೆ, ನೀವು ಭಾರತ್ ಜೋಡೋ ಮಾಡಿದ ನಂತರ ಗಡ್ಡ ಕೂಡ ಉದ್ದವಾಗಿ ಬೆಳೆದಿದೆ. ಈಗ ಆ ಗಡ್ಡಕ್ಕೆ ಸಮಯ ಬಂದಿದೆ, ಈಗಲಾದರೂ ಗಡ್ಡ ತೆಗೆಯಿರಿ. ಮದುವೆಗೆ ಸಿದ್ಧರಾಗಿ ಎಂದು ತಮಾಷೆ ಮಾಡಿದರು. ಅಲ್ಲದೆ ನಿತೀಶ್ ಕುಮಾರ್ ಅವರಿಗೂ ಗಡ್ಡಕ್ಕೆ ಕತ್ತರಿ ಹಾಕಿ ಎಂದು ಲಾಲು ಪ್ರಸಾದ್ ಯಾದವ್ ನಗುನಗುತ್ತಲೇ ಸಲಹೆ ನೀಡಿದರು.

2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಿಹಾರ ರಾಜಧಾನಿ ಪಾಟ್ನಾದಲ್ಲಿ ವಿಪಕ್ಷಗಳ ಸಭೆ ನಡೆಯಿತು. ಕಾಂಗ್ರೆಸ್, ಆಮ್ ಆದ್ಮಿ, ಎನ್‌ಸಿಪಿ ಸೇರಿದಂತೆ 16 ಪಕ್ಷಗಳು ಈ ಪ್ರಮುಖ ಸಭೆಯಲ್ಲಿ ಪಾಲ್ಗೊಂಡಿದ್ದವು. ಸಭೆಯಲ್ಲಿ 2024ರ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಮುನ್ನಡೆಯಲು ಶಪಥ ಮಾಡಲಾಗಿದೆ. ಒಗ್ಗಟ್ಟಿನ ಮೂಲಕ ಬಿಜೆಪಿ ಮಣಿಸಲು ವಿಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ. ಆದರೆ ಗಂಭೀರ ಚರ್ಚೆ ನಡುವೆ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಮಾತು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತ್ತು. ರಾಹುಲ್ ಗಾಂಧಿ ಕೂಡ ಲಾಲು ಯಾದವ್ ಮಾತಿಗೆ ನಾಚಿದರು. ಈ ಮೂಲಕ ಮತ್ತೆ ರಾಹುಲ್ ಗಾಂಧಿ ಮದುವೆ ವಿಚಾರ ಮುನ್ನೆಲೆಗೆ ಬಂದಂತಾಗಿದೆ.












Click it and Unblock the Notifications