ಲಾಲೂ ಪುತ್ರಿ ಮೀಸಾ ಮೇಲೆ ಎಫ್ ಐಆರ್
ಪಾಟ್ನಾ, ಏ.18: ಮಾಜಿ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮೀಸಾ ಭಾರ್ತಿ ಮೇಲೆ ಶುಕ್ರವಾರ ಎಫ್ಐಆರ್ ದಾಖಲಿಸಲಾಗಿದೆ ಎಂದು ಪಾಟ್ನ ಪೊಲೀಸರು ಹೇಳಿದ್ದಾರೆ.
ಸರ್ಕಾರಿ ಅಧಿಕಾರಿಗಳ ಕರ್ತವ್ಯ ಪಾಲನೆಗೆ ಅಡ್ಡಿಪಡಿಸಿದ ಆರೋಪವನ್ನು ಮೀಸಾ ಅವರ ಮೇಲೆ ಹೊರೆಸಲಾಗಿದೆ. 39 ವರ್ಷ ವಯಸ್ಸಿನ ರಾಷ್ಟ್ರೀಯ ಜನತಾ ದಳದ ನಾಯಕಿ ಮೀಸಾ ಅವರು ಗುರುವಾರ ನಡೆದ ಮತದಾನ ಸಂದರ್ಭದಲ್ಲಿ ಮತಗಟ್ಟೆಯಲ್ಲಿ ದೊಡ್ಡ ರಂಪಾಟ ನಡೆಸಿದ್ದರು.
ಅಧಿಕಾರಿಗಳನ್ನು ದೂಡಿದ್ದಲ್ಲದೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಜಜ್ಜಿ ಹಾಕಿದ್ದರು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಮೀಸಾ ಅವರ ಮೇಲೆ ದೂರು ದಾಖಲಿಸಿಕೊಂಡು ಕ್ರಮ ಜರುಗಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಿತ್ತು. ಅದರಂತೆ ಶುಕ್ರವಾರ ಮೀಸಾ ಅವರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಲಾಲೂ ಪ್ರಸಾದ್ ಯಾದವ್, ಇವಿಎಂ ಒಡೆದಿದ್ದು ನನ್ನ ಮಗಳಲ್ಲ. ನನ್ನ ಮಗಳ ಮೇಲಿನ ಕೋಪಕ್ಕೆ ರಿಟರ್ನಿಂಗ್ ಆಫೀಸರ್ ಈ ಕೃತ್ಯ ಎಸಗಿದ್ದಾರೆ. ಮತಗಟ್ಟೆಯಲ್ಲಿ ಅಕ್ರಮ ಮತದಾನ, ಮತ ಖರೀದಿ ಬಗ್ಗೆ ಸುಳಿವು ಸಿಕ್ಕಿದ್ದರಿಂದ ಅಭ್ಯರ್ಥಿಯಾಗಿ ನನ್ನ ಮಗಳು ಅಧಿಕಾರಿಗಳ ಬಳಿ ನ್ಯಾಯ ಕೇಳಲು ಹೋಗಿದ್ದಳು. ಆದರೆ, ನ್ಯಾಯ ಕೊಡಿಸುವ ಬದಲು ನನ್ನ ಮಗಳ ಮೇಲೆ ಆರೋಪ ಹೊರೆಸಲಾಗಿದೆ ಎಂದಿದ್ದಾರೆ.
ನಾವು ಕೂಡಾ ಆ ಮತಗಟ್ಟೆಯಲ್ಲಿದ್ದ ಚುನಾವಣಾ ಅಧಿಕಾರಿ, ಸಿಬ್ಬಂದಿಗಳ ಮೇಲೆ ದೂರು ದಾಖಲಿಸಿದ್ದೇವೆ ಎಂದು ಆರ್ ಜೆ ಡಿ ಮುಖ್ಯಸ್ಥ ಲಾಲೂ ಹೇಳಿದ್ದಾರೆ. ಆರ್ ಜೆ ಡಿ ವಕ್ತಾರ ಮನೋಜ್ ಝಾ ಮಾತನಾಡಿ, ಮತಗಟ್ಟೆ ಎದುರು ಮೀಸಾ ಪ್ರತಿಭಟಿಸಿದ್ದು ನಿಜ. ಆದರೆ, ಮತಯಂತ್ರ ಒಡೆದು ಹಾಕಿಲ್ಲ. ಮತಗಟ್ಟೆ ಮೇಲೆ ಎದುರಾಳಿ ಬಣದವರು ಪ್ರಭಾವ ಬೀರುತ್ತಿರುವ ಬಗ್ಗೆ ದೂರು ಸಲ್ಲಿಸಲು ಮೀಸಾ ತೆರಳಿದ್ದರು ಎಂದಿದ್ದಾರೆ.
ಪಾಟ್ನ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದಿರುವ ಮೀಸಾ ಭಾರ್ತಿ ಅವರ ಮೇಲೆ ಈಗ ಐಪಿಸಿ ಸೆಕ್ಷನ್ 188(ಸರ್ಕಾರಿ ಅಧಿಕಾರಿ ಕರ್ತವ್ಯ ಪಾಲನೆಗೆ ಅಡ್ಡಿಪಡಿಸಿದ ಆರೋಪ) 171 ಎಫ್ (ಚುನಾವಣೆ ಸಂದರ್ಭದಲ್ಲಿ ಪ್ರಭಾವ ಬೀರುವುದು)ಅನ್ವಯ ಕೇಸು ಎದುರಿಸಬೇಕಾಗಿದೆ.












Click it and Unblock the Notifications