Noel Tata: ಟಾಟಾ ಟ್ರಸ್ಟ್‌ನ ನೂತನ ಉತ್ತರಾಧಿಕಾರಿ ನೊಯೆಲ್ ಟಾಟಾ ಯಾರು? ಇಲ್ಲಿದ ಮಾಹಿತಿ
Noel Tata: ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ (86) ಅವರು ಅವರು ನಿಧನರಾದ ಬೆನ್ನಲ್ಲೆ ಟಾಟಾ ಟ್ರಸ್ಟ್ ಅಧ್ಯಕ್ಷರಾಗಿ 67 ವರ್ಷದ ನೊಯೆಲ್ ಟಾಟಾರನ್ನು ನೇಮಕ ಮಾಡಲಾಗಿದೆ. ಹಾಗಾದರೆ ಇವರ ಹಿನ್ನೆಲೆ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಮುಂಬೈನಲ್ಲಿ ಶುಕ್ರವಾರ (ಅಕ್ಟೋಬರ್ 11) ಆಡಳಿತ ಮಂಡಳಿ ಸಭೆ ನಡೆದಿದ್ದು, ಈ ವೇಳೆ ಟಾಟಾ ಟ್ರಸ್ಟ್‌ಗೆ ನೊಯೆಲ್ ಟಾಟಾರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಘೋಷಣೆ ಮಾಡಲಾಗಿದೆ. ಈ ಮೂಲಕ ರತನ್ ಟಾಟಾ ಅವರ ಸ್ಥಾನಕ್ಕೆ ನೊಯೆಲ್ ಬಂದಿದ್ದಾರೆ.

ನೊಯೆಲ್ ಟಾಟಾ ಅವರು ರತನ್ ಟಾಟಾ ಅವರ ಮಲ ಸಹೋದರರಾಗಿದ್ದಾರೆ. ಇಬ್ಬರ ತಂದೆ ಒಬ್ಬರೆ, ಆದರೆ ತಾಯಿ ಬೇರೆ ಬೇರೆ. ರತನ್ ಟಾಟಾ ಹುಟ್ಟಿದ ಮೇಲೆ ಸೂನಿ ಟಾಟಾ ಅವರಿಂದ ವಿಚ್ಛೇದನ ಪಡೆದಿದ್ದ ನವಲ್ ಟಾಟಾ, ನಂತರ ಸಿಮೋನೆ ಟಾಟಾ ಅವರನ್ನು ವಿವಾಹ ಆಗಿದ್ದರು. ಅವರಿಗೆ ನೊಯೆಲ್ ಟಾಟಾ ಜನಿಸಿದ್ದರು.
ನೊಯೆಲ್ ಟಾಟಾ ಯಾರು ಗೊತ್ತಾ.?: ನೊಯೆಲ್ ಟಾಟಾ ಅವರು ಟಾಟಾ ಸ್ಟೀಲ್ ಕಂಪನಿ ಹಾಗೂ ವಾಚ್ ಕಂಪನಿ ಟೈಟಾನ್‌ನ ಉಪಾಧ್ಯಕ್ಷರಾಗಿದ್ದಾರೆ, ಟ್ರೆಂಟ್‌ನ ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ವೋಲ್ಟಾಸ್‌ನ ಆಡಳಿತ ಮಂಡಳಿಯಲ್ಲೂ ಇದ್ದಾರೆ. ಅವರ ಮಕ್ಕಳಾದ ಮಾಯಾ, ನೆವಿಲ್ಲೆ, ಲೇಯ್ ಸಹ ಹಲವು ಕಂಪನಿಗಳ ಆಡಳಿತ ಮಂಡಳಿಯಲ್ಲಿದ್ದಾರೆ.
ನೊಯೆಲ್ ಟಾಟಾ ಅವರ ತಾಯಿ ಫ್ರೆಂಚ್-ಸ್ವಿಸ್ ಕ್ಯಾಥೋಲಿಕ್ ಆಗಿರುವ ಸಿಮೋನೆ ಟಾಟಾ ಅವರು ವೋಲ್ಟಾಸ್, ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಹಾಗೂ ಟಾಟಾ ಇಂಟರ್‌ನ್ಯಾಷನಲ್‌ನ ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ಟ್ರೆಂಟ್ ಅಧ್ಯಕ್ಷರೂ ಕೂಡ ಆಗಿದ್ದರು. 2014ರಿಂದ ನೊಯೆಲ್ ಟಾಟಾ ಇದರ ಅಧ್ಯಕ್ಷರಾಗಿದ್ದಾರೆ.
ಬ್ರಿಟನ್‌ನ ಸಸೆಕ್ಸ್ ವಿವಿಯಲ್ಲಿ ಅಧ್ಯಯನ ನಡೆಸಿರುವ ನೊಯೆಲ್ ಟಾಟಾ, ಇನ್‌ಸೀಟ್‌ನಿಂದ ಇಂಟರ್‌ನ್ಯಾಷನಲ್ ಎಕ್ಸಿಕ್ಯೂಟಿವ್ ಪ್ರೋಗ್ರಾಂ ಪೂರ್ಣಗೊಳಿಸಿದ್ದಾರೆ. ಹೊಸ ನೇಮಕಕ್ಕೂ ಮುನ್ನ ನೊಯೆಲ್ ಟಾಟಾ ಅವರು ಟಾಟಾ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಎಂಡಿ ಆಗಿದ್ದರು. ಇದು ಟಾಟಾ ಸಮೂಹದ ಟ್ರೇಡಿಂಗ್ ಮತ್ತು ಡಿಸ್ಟ್ರಿಬ್ಯೂಷನ್ ಘಟಕವಾಗಿದೆ.
2010ರಲ್ಲಿ ಕೇವಲ 500 ಮಿಲಿಯನ್ ಡಾಲರ್ ಇದ್ದ ಇದರ ವಹಿವಾಟು, 2021ರಲ್ಲಿ 3 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಈ ಮೂಲಕ ಅವರು ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸಿದ್ದರು. ಟಾಟಾದ ಚಿಲ್ಲರೆ ಮಾರಾಟ ವಿಭಾಗ ಟ್ರೆಂಟ್ ಎಂಡಿ ಆಗಿ 1998ರಲ್ಲಿ ಕೇವಲ ಒಂದು ಮಳಿಗೆ ಹೊಂದಿದ್ದ ವಿಭಾಗವನ್ನು ಇಂದು ದೇಶಾದ್ಯಂತ 700ಕ್ಕೂ ಹೆಚ್ಚು ಮಳಿಗೆ ಇರುವ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. 2014ರಿಂದ ಇದರ ಅಧ್ಯಕ್ಷರಾಗಿದ್ದಾರೆ. ಅಲ್ಲಿಂದ ಇಲ್ಲಿವರೆಗೆ ಕಂಪನಿ ಷೇರುಗಳು ಶೇಕಡ 6,000ಕ್ಕಿಂತ ಹೆಚ್ಚು ಏರಿಕೆಯಾಗಿವೆ.
ಟಾಟಾ ಟ್ರಸ್ಟ್ ಎಲ್ಲಾ ಟ್ರಸ್ಟ್‌ಗಳ ಪ್ರಧಾನ ಕಚೇರಿ ಇದ್ದಂತೆ. ಇದು ಟಾಟಾದ ಎಲ್ಲಾ 14 ಟ್ರಸ್ಟ್‌ಗಳ ಕಾರ್ಯಗಳನ್ನು ನಿರ್ವಹಿಸುತ್ತದೆ. ಟಾಟಾ ಕಂಪನಿಗಳ ಮಾಲೀಕ ಸಂಸ್ಥೆ ಟಾಟಾ ಸನ್ಸ್‌ನಲ್ಲಿ ಬಹುಮುಖ್ಯವಾಗಿ ಎರಡು ಟ್ರಸ್ಟ್‌ಗಳು ಹೆಚ್ಚಿನ ಪಾಲನ್ನು ಹೊಂದಿವೆ. ಒಂದು ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಹಾಗೂ ಸರ್ ರತನ್ ಟಾಟಾ ಟ್ರಸ್ಟ್ ಇವೆರಡು ಒಟ್ಟು ಶೇಕಡ 50ಕ್ಕಿಂತ ಹೆಚ್ಚಿನ ಷೇರನ್ನು ಹೊಂದಿವೆ.
ಒಟ್ಟಾರೆ ಟಾಟಾ ಟ್ರಸ್ಟ್ ಶೇಕಡ 66ಕ್ಕಿಂತ ಹೆಚ್ಚಿನ ಷೇರನ್ನು ಟಾಟಾ ಸನ್ಸ್‌ನಲ್ಲಿ ಹೊಂದಿದೆ. ಟ್ರಸ್ಟ್‌ನಲ್ಲಿ ಸದ್ಯ ವೇಣು ಶ್ರೀನಿವಾಸನ್, ವಿಜಯ್ ಸಿಂಗ್ ಹಾಗೂ ಮೆಗ್ಲಿ ಮಿಸ್ತ್ರಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ. ರತನ್ ಟಾಟಾ ಅವರ ಕಿರಿಯ ಸಹೋದರ ಜಿಮ್ಮಿ ಟಾಟಾ ಕುಟುಂಬದ ಯಾವ ವ್ಯವಹಾರದಲ್ಲೂ ಇಲ್ಲ. ಅವರು ದಕ್ಷಿಣ ಮುಂಬೈನ ಕೊಲಾಬಾದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಎರಡು ಬೆಡ್ ರೂಂನ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದಾರೆ.
1937ರಲ್ಲಿ ಪಾರ್ಸಿ ಸಮುದಾಯದಲ್ಲಿ ಜನಿಸಿದ ರತನ್ ಟಾಟಾ ಅವರನ್ನು ಅವರ ಅಜ್ಜಿ ಸಾಕಿ ಸಲುಹಿದ್ದರು. ಅವರಿಗೆ 10 ವರ್ಷ ಇದ್ದಾಗಲೇ ಅವರ ತಂದೆ ನವಲ್ ಟಾಟಾ ಹಾಗೂ ಸೂನಿ ಟಾಟಾ ಅವರು ವಿಚ್ಛೇದನ ಪಡೆದು ಬೇರೆಯಾಗಿದ್ದರು. ಆಗ ನವಲ್ ಅವರು ಮತ್ತೊಂದು ವಿವಾಹ ಆಗಿದ್ದು, ಎರಡನೇ ಪತ್ನಿಯ ಪುತ್ರನನ್ನೇ ಇದೀಗ ಇಂದು (ಅಕ್ಟೋಬರ್ 11) ಟಾಟಾ ಟ್ರಸ್ಟ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.












Click it and Unblock the Notifications