Maha Kumbh Mela 2025: ಪ್ರಯಾಗ್‌ರಾಜ್ ಮಹಾ ಕುಂಭಮೇಳಕ್ಕೆ ಕೆಎಂಎಫ್‌ನಿಂದ ಹಾಲು ಪೂರೈಕೆ
ಬೆಂಗಳೂರು ಜನವರಿ 14: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳಕ್ಕೆ ಸೋಮವಾರ (ಜನವರಿ 13) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಒಂದೇ ದಿನ ತ್ರಿವೇಣಿ ಸಂಗಮದಲ್ಲಿ 60 ಲಕ್ಷಕ್ಕೂ ಹೆಚ್ಚು ಜನ ಪವಿತ್ರಾ ಸ್ನಾನ ಮಾಡಿದ್ದಾರೆ. ಶಿವರಾತ್ರಿಯವರೆಗೂ ನಡೆಯಲಿರುವ ಈ ಮಹಾಕುಂಭ ಮೇಳದಲ್ಲಿ ಕೋಟ್ಯಾಂತರ ಜನ ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಕುಂಭಮೇಳದಲ್ಲಿ ಭಾಗವಹಿಸುವ ಭಕ್ತರಿಗೆ ಹಾಲು ಪೂರೈಸಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮುಂದಾಗಿದೆ.
ಹೌದು... ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಚಾಯ್ ಪಾಯಿಂಟ್ ಜೊತೆ ಪಾಲುದಾರಿಕೆ ಹೊಂದಿದೆ. ಇದರ ಮೂಲಕ ಕೆಎಂಎಫ್ 2025ರ ಮಹಾ ಕುಂಭಮೇಳಕ್ಕೆ ಭೇಟಿ ನೀಡುವವರು ಮತ್ತು ಭಕ್ತರಿಗೆ 20 ಲಕ್ಷ ಲೀಟರ್ ಹಾಲನ್ನು ಪೂರೈಸಲಿದೆ. ಇದಕ್ಕಾಗಿ ಚಾಯ್ ಪಾಯಿಂಟ್ ತಂಡದೊಂದಿಗೆ ಫೆಡರೇಶನ್ ಸಭೆ ನಡೆಸಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ತಿಳಿಸಿದ್ದಾರೆ.

ಜನವರಿ 13ರಿಂದ ಫೆಬ್ರವರಿ 26ರವರೆಗೆ ಮಹಾ ಕುಂಭಮೇಳ ನಡೆಯಲಿದೆ. ಪ್ರಯಾಗ್‌ರಾಜ್‌ನಲ್ಲಿ ಮೇಳ ನಡೆಯುತ್ತಿರುವ ಸ್ಥಳದಲ್ಲಿ ಇರುವ 10 ಚಾಯ್ ಪಾಯಿಂಟ್‌ಗಳ ಮೂಲಕ ಒಂದು ಕೋಟಿ ಟೀ ಕಪ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಚಾಯ್ ಪಾಯಿಂಟ್ ಹೊಂದಿದೆ. ಈ ಟೀ ಕಪ್‌ಗಳಲ್ಲಿ ಕೆಎಂಎಫ್್ನಿಂದ ನೀಡಲಾದ ಹಾಲಿನಿಂದಲೇ ತಯಾರಿಸಲಾದ ಚಾಯ್ ಮಾರಾಟ ಮಾಡಲಾಗುತ್ತದೆ. ಹೀಗೆ ಒಂದು ಕೋಟಿ ಟೀ ಕಪ್‌ಗಳನ್ನು ಮಾರಾಟ ಮಾಡುವ ಮೂಲಕ ಚಾಯ್ ಪಾಯಿಂಟ್ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇದಕ್ಕೆ ಕೆಎಂಎಫ್ ಕೈ ಜೋಡಿಸಿದೆ.
ಕರ್ನಾಟಕ ಹಾಲು ಒಕ್ಕೂಟ ಚಾಯ್ ಪಾಯಿಂಟ್‌ಗೆ ಗುಡ್‌ಲೈಫ್ ಟೆಟ್ರಾ ಪ್ಯಾಕ್ ಹಾಲನ್ನು ಪೂರೈಸಲಿದೆ. ಜೊತೆಗೆ ಬೆಂಗಳೂರಿನಲ್ಲಿರುವ ಚಾಯ್ ಪಾಯಿಂಟ್ ಕಂಪನಿಗೆ ಹಾಲು ಮತ್ತು ಇತರ ವಸ್ತುಗಳನ್ನು ಪೂರೈಸುತ್ತದೆ. ಇದನ್ನು ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ 10 ಚಾಯ್ ಪಾಯಿಂಟ್‌ಗಳ ಮೂಲಕ ಭಕ್ತರಿಗೆ ತಲುಪಿಸಲಾಗುತ್ತದೆ. ಈ ಬಗ್ಗೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ಹಾಗೂ ಚಾಯ್ ಪಾಯಿಂಟ್ ಸಂಸ್ಥಾಪಕ ಸಿಇಒ ಅಮುಲೀಕ್ ಸಿಂಗ್ ಬಿಜ್ರಾಲ್ ನಡುವೆ ಮಾತುಕತೆ ನಡೆದಿದ್ದು ಈ ಒಪ್ಪಂದಕ್ಕೆ ಸಹಿ ಕೂಡ ಹಾಕಲಾಗಿದೆ.
ಈ ಬಗ್ಗೆ ಮಾತನಾಡಿದ ಬಿ ಶಿವಸ್ವಾಮಿ ಅವರು, "ಧಾರ್ಮಿಕ ಮೇಳದಲ್ಲಿ ನಾವು ಹಾಲು ಪೂರೈಸಲು ಭಾಗವಹಿಸುತ್ತಿರುವುದು ಇದೇ ಮೊದಲು. ಚಾಯ್ ಪಾಯಿಂಟ್ ಮಾರಾಟವಾಗುವ ಪ್ರತಿಯೊಂದು ಕಪ್ ಚಹಾವನ್ನು ಕೆಎಂಎಫ್ ಹಾಲನ್ನು ಬಳಸಿ ತಯಾರಿಸುತ್ತಾರೆ. ಇದು ನಮ್ಮ ಬ್ರ್ಯಾಂಡ್ ನಿರ್ಮಾಣ ಕಾರ್ಯದಲ್ಲಿ ನಮಗೆ ಸಹಾಯ ಮಾಡುತ್ತದೆ ಮತ್ತು ಉತ್ತರ ಭಾರತದಲ್ಲಿ ಕರ್ನಾಟಕ ಹಾಲು ಒಕ್ಕೂಟದ ಉಪಸ್ಥಿತಿಯನ್ನು ಬಲಪಡಿಸುತ್ತದೆ. ಈ ಬಾರಿ ನಾವು ಚಹಾಕ್ಕಾಗಿ ಮಾತ್ರ ಹಾಲು ಪೂರೈಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಹಾಲು ಸರಬರಾಜು ಮಾಡಲಾಗುತ್ತದೆ" ಎಂದು ಅವರು ಹೇಳಿದರು.
ಚಹಾ ಮಾರಾಟ ಮಾಡುವುದರ ಜೊತೆಗೆ ಚಾಯ್ ಪಾಯಿಂಟ್ ಮಳಿಗೆಗಳು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಿಹಿತಿಂಡಿಗಳು, ಮಿಲ್ಕ್‌ಶೇಕ್‌ಗಳು ಮತ್ತು ಇತರ ವಸ್ತುಗಳನ್ನು ಒಳಗೊಂಡಂತೆ ವಿವಿಧ ನಂದಿನಿ ಉತ್ಪನ್ನಗಳನ್ನು ಸಹ ಮಾರಾಟ ಮಾಡುತ್ತವೆ.












Click it and Unblock the Notifications