ಕೇರಳ: 26 ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಶಿಕ್ಷಕನ ಬಂಧನ
ತಿರುವನಂತಪುರಂ, ಜ. 15: ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಎಂದು ಶಾಲೆಗೆ ಕಳುಹಿಸುವ ಪೋಷಕರಿಗೆ ಶಿಕ್ಷಕರ ಮೇಲೆ ಅಪಾರ ನಂಬಿಕೆಯಿರುತ್ತದೆ. ತಮ್ಮ ಮಕ್ಕಳು ಶಾಲಾ ಆವರಣದಲ್ಲಿ ಸುರಕ್ಷಿತರು ಎಂಬ ಭಾವನೆಯಲ್ಲಿರುತ್ತಾರೆ. ಆದರೆ, ಈ ನಂಬಿಕೆಗೆ ಹಲವು ಬಾರಿ ಪೆಟ್ಟು ಬಿದ್ದ ಘಟನೆಗಳಿವೆ. ಇಂತಹದ್ದೇ ಪ್ರಕರಣ ಕೇರಳದಲ್ಲಿ ನಡೆದಿದೆ.
ಕೇರಳದ ಕಣ್ಣೂರು ಜಿಲ್ಲೆಯ ಅನುದಾನಿತ ಶಾಲೆಯ ಹಿರಿಯ ಶಿಕ್ಷಕರೊಬ್ಬರು 26 ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.
ಸುಮಾರು ಒಂದೂವರೆ ವರ್ಷಗಲಿಂದ ಅಮದರೆ, ನವೆಂಬರ್ 2021 ರಿಂದ 26 ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಅನುದಾನಿತ ಶಾಲೆಯ 52 ವರ್ಷದ ಶಿಕ್ಷಕನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಚೈಲ್ಡ್‌ಲೈನ್ ಅಧಿಕಾರಿಗಳ ನೀಡಿದ ದೂರುಗಳ ಆಧಾರದ ಮೇಲೆ ಜನವರಿ 12 ರಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಹಿರಿಯ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬರು ತಾನು ಎದುರಿಸಿದ ದೌರ್ಜನ್ಯವನ್ನು ಶಾಲೆಯ ಮತ್ತೊಬ್ಬ ಶಿಕ್ಷಕಿಯ ಬಳಿ ಹೇಳಿಕೊಂಡಿದ್ದಾರೆ. ಶಿಕ್ಷಕಿ ತಕ್ಷಣ ಚೈಲ್ಡ್‌ಲೈನ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ನಮಗೆ ಮಾಹಿತಿ ನೀಡಿದರು. ಜನವರಿ 11 ರಂದು ನಮಗೆ ದೂರು ನೀಡಲಾಯಿತು" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಾಲೆಯಲ್ಲಿ ಈ ಬಗ್ಗೆ ಕೌನ್ಸೆಲಿಂಗ್ ನಡೆಸಿದ ಬಳಿಕ, ಅನೇಕ ವಿದ್ಯಾರ್ಥಿಗಳು ಶಿಕ್ಷಕರು ತಮಗೂ ಕಿರುಕುಳ ನೀಡಿರುವುದನ್ನು ಬಹಿರಂಗಪಡಿಸಿದ್ದಾರೆ ಎಂದು ಜಿಲ್ಲಾ ಚೈಲ್ಡ್‌ಲೈನ್ ಅಧಿಕಾರಿಗಳು ಹೇಳಿದ್ದಾರೆ.
ಜನವರಿ 12ರಂದು ಐದು ಪ್ರಕರಣಗಳನ್ನು ದಾಖಲಿಸಿ ಬಂಧಿಸಿದ್ದೆವು, ಬಳಿಕ ಶನಿವಾರ 21 ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದ ನಂತರ ಶಾಲೆಯು ಪುನರಾರಂಭವಾದ 2021 ರ ನವೆಂಬರ್‌ನಿಂದ ಕಿರುಕುಳದ ಘಟನೆಗಳನ್ನು ವಿದ್ಯಾರ್ಥಿಗಳು ವಿವರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications