ಕೆಆರ್‌ಎಸ್ ಜಲಾಶಯದ ಮಟ್ಟ 100 ಅಡಿ ದಾಟದಿದ್ದರೂ ನಮಗೆ ನೀರು ಬೇಕೆಂದು ಡಿಎಂಕೆ ಸುಪ್ರೀಂಗೆ ಅರ್ಜಿ
KRS: ಮೈಸೂರು, ಬೆಂಗಳೂರು ಹಾಗೂ ಮಂಡ್ಯ ಜಿಲ್ಲೆಗಳ ಜೀವನಾಡಿಯಾದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಇಷ್ಟೊತ್ತಿಗಾಗಲೇ ಭರ್ತಿಯಾಗುವ ಹಂತಕ್ಕೆ ಬರಬೇಕಿತ್ತು. ಆದರೆ ಈ ಬಾರಿ ಮುಂಗಾರು ಕೈಕೊಟ್ಟ ಕಾರಣ ಇನ್ನೂ 100 ಅಡಿ ಕೂಡ ದಾಟಿಲ್ಲ. ಆದರೆ ಈ ನಡುವೆಯೇ ತಮಿಳುನಾಡು ಸರ್ಕಾರ ಮಾತ್ರ ನಮಗೆ ಕಾವೇರಿ ನೀರು ಬೇಕೇ ಬೇಕು ಎಂದು ಹಠ ಹಿಡಿದಿದೆ. ಇದೀಗ ಡಿಎಂಕೆ ಪಕ್ಷ ಸಹ ಇದೇ ಹಾದಿ ಹಿಡಿದಿದ್ದು, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದೆ.
ಕರ್ನಾಟಕವು ತಮಿಳುನಾಡಿಗೆ ತಕ್ಷಣವೇ ಕಾವೇರಿ ನೀರನ್ನು ಹರಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಡಿಎಂಕೆ ಪಕ್ಷವು ಸುಪ್ರೀಂ ಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಕೆ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ ಈ ಅರ್ಜಿಯಲ್ಲಿ ಏನೆಲ್ಲಾ ಇದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಕರ್ನಾಟಕ ಸರ್ಕಾರವು ಕಾವೇರಿ ಪ್ರಾಧಿಕಾರದ ಆದೇಶಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿರುವ ಡಿಎಂಕೆ, ಸುಪ್ರೀಂ ಕೋರ್ಟ್‌ನ ಈ ಹಿಂದಿನ ತೀರ್ಪನ್ನು ಅನುಷ್ಠಾನಗೊಳಿಸಬೇಕು ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಹೊರಡಿಸಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಈ ಅರ್ಜಿಯಲ್ಲಿ ಮನವಿ ಮಾಡಿದೆ.
ದೇಶಾದ್ಯಂತ ಮುಂಗಾರು ಅಸಮತೋಲನ
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂಗಾರಿನ ಮೊದಲ ಎರಡು ತಿಂಗಳುಗಳಲ್ಲಿ ದೇಶಾದ್ಯಂತ ಒಟ್ಟಾರೆಯಾಗಿ ಶೇಕಡ 13ರಷ್ಟು ಮಳೆ ಕೊರತೆ ದಾಖಲಾಗಿದೆ. ಇನ್ನು ಹಂಗಾಮಿನ ದ್ವಿತೀಯಾರ್ಧದಲ್ಲೂ ದೀರ್ಘಕಾಲೀನ ಸರಾಸರಿಯ ಶೇಕಡ 94ರಷ್ಟು ಮಾತ್ರವೇ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಇದು ಈಗಾಗಲೇ ನೀರಾವರಿ ಹಾಗೂ ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ತೀವ್ರ ಆತಂಕವನ್ನು ತಂದೊಡ್ಡಿದೆ.
ಇದೀಗ ರಾಜ್ಯದ ಮಲೆನಾಡು, ಕರಾವಳಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮುಂಗಾರು ಚುರುಕು ಪಡೆದಿದೆ. ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಜಲಾಶಯಗಳಿಗೆ ಹರಿದುಬರುವ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಆಗಿದೆ. ಕೆಲವೆಡೆ ಮಾತ್ರ ಸಾಧಾರಣ ಮಳೆಯಾಗುತ್ತಿದೆ.
ಕಬಿನಿ ಜಲಾಶಯದ ಒಳಹರಿವು ಹೆಚ್ಚಳ
ಅಲ್ಲದೆ ನೆರೆ ರಾಜ್ಯ ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಪ್ರಸ್ತುತ ಜಲಾಶಯಕ್ಕೆ 10,000 ಕ್ಯುಸೆಕ್ ನೀರು ಹರಿದುಬರುತ್ತಿದ್ದು, 2,284 ಅಡಿ ಗರಿಷ್ಠ ಸಾಮರ್ಥ್ಯದ ನದಿ ನೀರಿನ ಮಟ್ಟ ಈಗ 2,278.38 ಅಡಿಗೆ ತಲುಪಿದೆ. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ 500 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
13,000 ಕ್ಯುಸೆಕ್ ಹೊರಹರಿವು
ಕೊಡಗಿನಲ್ಲಿ ಮಳೆ ಚುರುಕು ಪಡೆದ ಹಿನ್ನೆಲೆ ಹಾರಂಗಿ ಜಲಾಶಯದಿಂದ ಸುಮಾರು 13,000 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದೇ ವೇಳೆ ಮಂಡ್ಯದ ಕೆಆರ್‌ಎಸ್ ಜಲಾಶಯಕ್ಕೂ ಒಳಹರಿವು ಹೆಚ್ಚಾಗಿದ್ದು, ಪ್ರಸ್ತುತ 10,504 ಕ್ಯುಸೆಕ್ ನೀರು ಜಲಾಶಯವನ್ನು ಸೇರುತ್ತಿದೆ.
ಉಕ್ಕಿ ಹರಿಯುತ್ತಿರುವ ಕುಮಾರಧಾರ ನದಿ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದ್ದು, ಸ್ನಾನಘಟ್ಟ ಹಾಗೂ ಜಳಕದ ಕಟ್ಟೆಗಳು ನೀರಿನಲ್ಲಿ ಮುಳುಗಿವೆ. ಶೃಂಗೇರಿ ಪರಿಸರದಲ್ಲೂ ಸತತ ಮಳೆಯಾಗುತ್ತಿದ್ದು, ತುಂಗಾ ನದಿಯ ಪ್ರವಾಹಕ್ಕೆ ಶೃಂಗೇರಿಯ ಪ್ರಸಿದ್ಧ ಕಪ್ಪೆಶಂಕರ ದೇವಾಲಯ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇನ್ನೂ ಕೆಲವು ಭಾಗಗಳಲ್ಲಿ ಭಾರಿ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಹಿತದೃಷ್ಟಿಯಿಂದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.


Click it and Unblock the Notifications
