Maha Kumbh Mela 2025: ಪ್ರಯಾಗ್‌ರಾಜ್ ಮಹಾಕುಂಭ ಮೇಳಕ್ಕೆ ತೆರಳಿದ ಡಿಕೆ ಶಿವಕುಮಾರ್
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗಿಯಾಗಲು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಕುಟುಂಬ ಸಮೇತರಾಗಿ ತೆರಳಿದ್ದಾರೆ. ಈಗಾಗಲೇ ಡಿಕೆಶಿ ಪುತ್ರಿ ಐಶ್ವರ್ಯಾ ಅವರು ಪ್ರಯಾಗ್‌ರಾಜ್‌ಗೆ ತೆರಳಿ ಪವಿತ್ರ ಸ್ನಾನ ಮಾಡಿದ್ದರು. ಈಗ ಡಿ.ಕೆ.ಶಿವಕುಮಾರ್ ಅವರು ಪ್ರಯಾಗ್‌ರಾಜ್‌ಗೆ ತೆರಳಿದ್ದಾರೆ.
ಇಂದು ಮುಂಜಾನೆಯೇ ಅವರು ತಮ್ಮ ಕುಟುಂಬದೊಂದಿಗೆ ಪ್ರಯಾಗ್‌ರಾಜ್‌ನತ್ತ ಪ್ರಯಾಣ ಬೆಳೆಸಿದ್ದಾರೆ. ಇಂದು ಮತ್ತು ನಾಳೆ ಅವರು ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಪವಿತ್ರ ಸ್ನಾನ ಮಾಡಿ ಮತ್ತೆ ರಾಜ್ಯಕ್ಕೆ ಮರಳಲಿದ್ದಾರೆ. ಅಲ್ಲದೆ ಉತ್ತರಪ್ರದೇಶದ ರಾಜಕಾರಣಿಗಳೊಂದಿಗೆ ಡಿ.ಕೆ.ಶಿವಕುಮಾರ್ ಅವರು ಉತ್ತಮ ಸಂಪರ್ಕ ಹೊಂದಿರುವ ಹಿನ್ನೆಲೆ ಉತ್ತರ ಪ್ರದೇಶ ಸರ್ಕಾರ ಸಚಿವರು ಬೆಂಗಳೂರಿಗೆ ಬಂದು ಡಿಕೆಶಿ ಅವರನ್ನು ಮಹಾಕುಂಭ ಮೇಳಕ್ಕೆ ಆಹ್ವಾನಿಸಿದ್ದರು.

ಉತ್ತರ ಪ್ರದೇಶದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ವಿಕಲಚೇತನರ ಸಬಲೀಕರಣ ಸಚಿವರಾದ ನರೇಂದ್ರ ಹಾಗೂ ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಬೆಂಗಳೂರಿಗೆ ಬಂದು, ಡಿಕೆ ಶಿವಕುಮಾರ್ ಅವರನ್ನ ಗೃಹಕಚೇರಿಯಲ್ಲಿ ಭೇಟಿಯಾಗಿ ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾಕುಂಭ ಮೇಳಕ್ಕೆ ವಿಶೇಷ ಆಹ್ವಾನ ನೀಡಿದ್ದರು. ಅದರಂತೆ ಡಿಕೆ ಶಿವಕುಮಾರ್ ಅವರು ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದರು. ಹೀಗಾಗಿ ಇಂದು ಮುಂಜಾನೆಯೇ ಅವರು ಪ್ರಯಾಗ್‌ರಾಜ್‌ಗೆ ವಿಮಾನದಲ್ಲಿ ತೆರಳಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಅವರು ನಮ್ಮ ಧರ್ಮದ ನಂಬಿಕೆಯಿಂದ ಇಂದು ಮಹಾಕುಂಭ ಮೇಳಕ್ಕೆ ಹೋಗುತ್ತಿದ್ದೇನೆ ಎಂದಿದ್ದಾರೆ. ಕರ್ನಾಟಕದಲ್ಲಿಯೂ ಕುಂಭಮೇಳ ನಡೆಯುತ್ತಿದೆ. ಅದಕ್ಕೆ ನನಗೂ ಆಹ್ವಾನ ಬಂದಿದೆ. ಅಲ್ಲಿಗೂ ನಾನು ಭೇಟಿ ಕೊಡುತ್ತೇನೆ. ನಮ್ಮ ಕರ್ನಾಟದ ಕಾವೇರಿ ಕುಂಭಮೇಳದಲ್ಲಿ ನಾನು ಖಂಡಿತವಾಗಿಯೂ ಭಾಗಿಯಾಗುತ್ತೇನೆ ಎಂದು ಹೇಳಿದ್ದಾರೆ.
ಇಂದು ಪ್ರಯಾಗ್‌ರಾಜ್‌ಗೆ ತೆರಳಿರುವ ಅವರು ನಾಳೆ ಮತ್ತೆ ರಾಜ್ಯಕ್ಕೆ ವಾಪಸ್ ಆಗಲಿದ್ದು, ಯಲಹಂಕ ವಾಯುನೆಲೆಯಲ್ಲಿ ನಡೆಯುವ ಏರ್‌ಶೋ ವೀಕ್ಷಿಸಲಿದ್ದಾರೆ. ಅಲ್ಲದೆ ಗ್ಲೋಬಲ್ ಇನ್ವೆಸ್ಟ್ ಸಭೆ ಕೂಡ ಇರುವುದರಿಂದ ಅವುಗಳಲ್ಲಿಯೂ ಭಾಗವಹಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರೆ ಅದೃಷ್ಟ ಕುಲಾಯಿಸುತ್ತೆ ಎನ್ನುವ ಮಾತಿದೆ. ಮಹಾಕುಂಭ ಮೇಳದ ವೇಳೆ ಸಂಗಮದ ಸ್ನಾನವು ಅತಿ ಪವಿತ್ರ ಹಾಗೂ ಪಾಪ ಕರ್ಮಗಳೆಲ್ಲವೂ ತೊಳೆಯುತ್ತದೆ ಎಂದು ನಂಬಲಾಗಿದೆ. ಇನ್ನು ಡಿ.ಕೆ.ಶಿವಕುಮಾರ್ ಅವರು ತಮ್ಮ ಕುಟುಂಬ ಸಮೇತರಾಗಿ ಪ್ರಯಾಗ್‌ರಾಜ್‌ನಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ.
ಡಿಕೆ ಶಿವಕುಮಾರ್ ಅವರು ಪ್ರಯಾಗ್‌ರಾಜ್‌ಗೆ ಹೋಗುತ್ತಿರುವ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ನೀಡಿದ್ದರು. ಗಂಗೆಯಲ್ಲಿ ಮುಳುಗಿದ ತಕ್ಷಣ ಡಿಸಿಎಂ ಡಿಕೆ ಶಿವಕುಮಾರ್ ಅವರ ಪಾಪಗಳೆಲ್ಲ ಕಳೆದುಹೋಗುತ್ತಾ? ಎಂದು ವ್ಯಂಗ್ಯವಾಡಿದ್ದರು. ಕುಂಭ ಮೇಳದಲ್ಲಿ ಕೆಪಿಸಿಸಿ ಅಧ್ಯಕ್ಷರು ಪುಣ್ಯಸ್ನಾನ ಮಾಡಿದ ತಕ್ಷಣ ಕರ್ನಾಟಕದಲ್ಲಿ ಬಡತನ ನಿರ್ಮೂಲನೆ ಆಗುತ್ತಾ? ಹೀಗಂತ ಈಗ ಮಲ್ಲಿಕಾರ್ಜುನ್ ಖರ್ಗೆ ಸಾಹೇಬರು ಪ್ರಶ್ನೆ ಮಾಡಲ್ವಾ? ಎಂದು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದರು.












Click it and Unblock the Notifications