Karnataka CM: ಯಾಕೆ ಸಂಧಾನಕ್ಕೆ ಒಪ್ಪಿಕೊಂಡೆ ಎಂದು ಕಾರಣ ನೀಡಿದ ಡಿಕೆ ಶಿವಕುಮಾರ್
ಕರ್ನಾಟಕ ಸಿಎಂ ಯಾರು ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಸಿದ್ದರಾಮಯ್ಯ ಕರ್ನಾಟಕ ಮುಖ್ಯಮಂತ್ರಿಯಾಗಲಿದ್ದಾರೆ, ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಲಿದ್ದು ಮೇ 20ರಂದು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ನಾಲ್ಕು ದಿನಗಳಿಂದ ಸಿಎಂ ಪಟ್ಟಕ್ಕಾಗಿ ಇನ್ನಿಲ್ಲದಂತೆ ಹೋರಾಡಿದ ಡಿಕೆ ಶಿವಕುಮಾರ್ ಕೊನೆಗೂ ರಾಜಿ ಸಂಧಾನಕ್ಕೆ ಮಣಿದಿದ್ದಾರೆ.
ಡಿಸಿಎಂ ಆಗಲು ಒಪ್ಪಿಕೊಂಡಿರುವ ಅವರು ಸಿದ್ದರಾಮಯ್ಯ ಸಿಎಂ ಆಗಲು ಒಪ್ಪಿಗೆ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಬಾಯಿ ಬಿಡದ ಡಿಕೆಶಿ ಸಂಧಾನಕ್ಕೆ ಒಪ್ಪಿದ ನಂತರ ಇಂಡಿಯಾ ಟುಡೆ ಜೊತೆ ಮಾತನಾಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಸಂಧಾನಕ್ಕೆ ಒಪ್ಪಿದ್ದೇನೆ ಎಂದು ಹೇಳಿದ್ದಾರೆ.

ಇಂಟಿಯಾ ಟುಡೆ ಜೊತೆ ಮಾತನಾಡಿದ ಅವರು, "ನಾವು ಕರ್ನಾಟಕ ಜನತೆಗೆ ಹಲವು ಭರವಸೆಗಳನ್ನು ನೀಡಿದ್ದೇವೆ. ಲೋಕಸಭಾ ಚುನಾವಣೆ ಕೂಡ ಹತ್ತಿರದಲ್ಲಿದೆ. ಪಕ್ಷದ ಹಿತದೃಷ್ಟಿಯಿಂದ ಗಾಂಧಿ ಕುಟುಂಬ ಮತ್ತು ಎಐಸಿಸಿ ಅಧ್ಯಕ್ಷರ ಮಾತಿಗೆ ಒಪ್ಪಿಗೆ ನೀಡಿದ್ದೇನೆ." ಎಂದು ಹೇಳಿದರು.
ಸೂತ್ರಕ್ಕೆ ಒಪ್ಪಿಕೊಂಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಹೌದು, ಕೆಲವು ಸಂದರ್ಭದಲ್ಲಿ ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಕರ್ನಾಟಕ ಜನತೆಗೆ ಏನು ಭರವಸೆಗಳನ್ನು ಕೊಟ್ಟಿದ್ದೇವೆ, ಅವುಗಳನ್ನು ಈಡೇರಿಸುವುದು ನಮಗೆ ಮುಖ್ಯವಾಗುತ್ತದೆ. ಕಳೆದ ಒಂದು ವರ್ಷದಿಂದ ಸಹಕರಿಸಿದ ಮಾಧ್ಯಮಗಳಿಗೆ, ಎಕ್ಸಿಟ್ ಪೋಲ್‌ನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿದ್ದಕ್ಕೆ ಧನ್ಯವಾದಗಳು" ಎಂದು ಹೇಳಿದರು.
ಡಿಕೆ ಶಿವಕುಮಾರ್ ಪಕ್ಷನಿಷ್ಠೆಗೆ ಅಪಾರ ಮೆಚ್ಚುಗೆ
ಡಿ.ಕೆ. ಶಿವಕುಮಾರ್ ಅವರ ಪಕ್ಷ ನಿಷ್ಠೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಕ್ಷದ ಹಿತದೃಷ್ಟಿಯಿಂದ ನಾನು ಸಂಧಾನಕ್ಕೆ ಒಪ್ಪಿಕೊಂಡಿದ್ದೇನೆ ಎನ್ನುವುದು ಅವರ ರಾಜಕೀಯ ಮುತ್ಸದ್ದಿತನವನ್ನು ತೋರುತ್ತದೆ. ಡಿಕೆಶಿ ಪಕ್ಷಕ್ಕಾಗಿ ಸಿಎಂ ಹುದ್ದೆಯನ್ನು ತ್ಯಾಗ ಮಾಡಿದ್ದಾರೆ ಎಂದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಹಾಡಿ ಹೊಗಳಿದ್ದಾರೆ.
ಡಿಕೆ ಶಿವಕುಮಾರ್ ಅವರ ಪಕ್ಷ ನಿಷ್ಟೆ ಪ್ರಶ್ನಾತೀತ, ತಮ್ಮ ಮೇಲೆ ಕೇಸುಗಳು ದಾಖಲಾದರು, ಜೈಲಿಗೆ ಕಳುಹಿಸಿದರು, ಹೊರಬಂದ ನಂತರ ಪಕ್ಷವನ್ನು ತಳಮಟ್ಟದಲ್ಲಿ ಬಲಗೊಳಿಸುವಲ್ಲಿ ಅವರ ಪಾತ್ರ ಬಹಳ ಮುಖ್ಯ, ಅದರಲ್ಲೂ ಸಾಮಾಜಿಕ ಮಾಧ್ಯಮದಲ್ಲಿ ಬಲಿಷ್ಠವಾಗಿದ್ದ ಬಿಜೆಪಿಯನ್ನು ಅದೇ ಸಾಮಾಜಿಕ ಮಾಧ್ಯಮಗಳ ಮೂಲಕವೇ ಹಣಿಯಲು ಒಂದು ತಂಡವನ್ನೇ ಕಟ್ಟಿದ್ದ ಡಿಕೆಶಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದಾರೆ ಎನ್ನುವುದು ಸತ್ಯ.
ಸಿದ್ದರಾಮಯ್ಯ ಅವರು ಇದೇ ಕೊನೆ ಚುನಾವಣೆ ಎಂದು ಹೇಳಿದ್ದು, ಡಿಕೆ ಶಿವಕುಮಾರ್ ಅವರ ಸಿಎಂ ಹಾದಿ ಸುಗಮವಾಗಿದೆ, ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿಕೆ ಶಿವಕುಮಾರ್ ಅವಿರೋಧವಾಗಿ ಸಿಎಂ ಸ್ಥಾನಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.












Click it and Unblock the Notifications