US Election: ಕಮಲಾ ಹ್ಯಾರಿಸ್ ಪೂರ್ವಜರ ಗ್ರಾಮದಲ್ಲಿ ವಿಶೇಷ ಪೂಜೆ; ಗೆಲುವಿಗಾಗಿ ಪ್ರಾರ್ಥನೆ
ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕ ಚುನಾವಣೆ ಅಂತಿಮ ಘಟ್ಟ ತಲುಪಿದೆ. ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ ವೇಳೆಗೆ ಯುಎಸ್ ಚುನಾವಣಾ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಇಬ್ಬರಲ್ಲಿ ಶ್ವೇತಭವನ ಪ್ರವೇಶಿಸುವುದು ಯಾರು ಎನ್ನುವುದು ಇನ್ನು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ. ಕಮಲಾ ಹ್ಯಾರಿಸ್ ಗೆಲುವಿಗೆ ಭಾರತದಲ್ಲಿ ಕೂಡ ಪ್ರಾರ್ಥನೆ ನಡೆಯುತ್ತಿದೆ.
ಕಮಲಾ ಹ್ಯಾರಿಸ್ ಭಾರತೀಯ ಮೂಲದವರು, ಅವರ ಪೂರ್ವಜರು ತಮಿಳುನಾಡಿನವರು. ವಾಷಿಂಗ್ಟನ್‌ನಿಂದ 13,000 ಕಿ.ಮೀ ದೂರದ ಹಳ್ಳಿಯ ಜನ ತಮ್ಮ ಊರಿನ ಹೆಣ್ಣು ಮಗಳು, ಅಮೆರಿಕವನ್ನು ಆಳುವಂತಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಈ ಗ್ರಾಮದಲ್ಲಿ ಫ್ಲೆಕ್ಸ್, ಬ್ಯಾನರ್ ಹಾಕಲಾಗಿದ್ದು, ಕಮಲಾ ಹ್ಯಾರಿಸ್ ಗೆಲುವಿಗಾಗಿ ಹಾರೈಸಲಾಗಿದೆ.

ಕಮಲಾ ಹ್ಯಾರಿಸ್ ಅವರ ತಾಯಿಯ ಅಜ್ಜ ಪಿ.ವಿ. ಗೋಪಾಲನ್ ಶತಮಾನದ ಹಿಂದೆ ಈಗಿನ ತಮಿಳುನಾಡಿನ ತುಳಸೇಂದ್ರಪುರಂ ಎಂಬ ಊರಿನಲ್ಲಿ ಜನಿಸಿದವರು. ಇಡಿ ಗ್ರಾಮವೇ ಇದೀಗ ಕಮಲಾ ಹ್ಯಾರಿಸ್ ಅವರ ಗೆಲುವಿಗಾಗಿ ಪ್ರಾರ್ಥನೆ ಮಾಡುತ್ತಿದೆ.
ವಿಶೇಷ ಪ್ರಾರ್ಥನೆ, ಪೂಜೆ
ಮಂಗಳವಾರ ಬೆಳಗ್ಗೆಯಿಂದಲೇ ಗ್ರಾಮದ ದೇವಸ್ತಾನದಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದೆ ಎಂದು ದೇವಸ್ಥಾನದ ಬಳಿ ಸಣ್ಣ ಅಂಗಡಿ ನಡೆಸುತ್ತಿರುವ ಗ್ರಾಮಸ್ಥ ಜಿ.ಮಣಿಕಂಠನ್ ತಿಳಿಸಿದ್ದಾರೆ. ಕಮಲಾ ಹ್ಯಾರಿಸ್ ಗೆಲುವು ಸಾಧಿಸಿದರೆ, ಇಡೀ ಊರಿನಲ್ಲಿ ಸಂಭ್ರಮಾಚರಣೆ ನಡೆಸಲು ಕೂಡ ತಯಾರಿ ಮಾಡಿಕೊಳ್ಳಲಾಗಿದೆ.
ಈ ಮಣ್ಣಿನ ಮಗಳು ಗೆಲ್ಲಲಿ
ದೇವಸ್ಥಾನದಲ್ಲಿ ಕಮಲಾ ಹ್ಯಾರಿಸ್ ಅವರ ಹೆಸರನ್ನು ದೇವಸ್ಥಾನಕ್ಕೆ ದೇಣಿಗೆ ಕೊಟ್ಟಿರುವ ಪಟ್ಟಿಯಲ್ಲಿ ಕೆತ್ತಲಾಗಿದೆ. ಕಮಲಾ ಹ್ಯಾರಿಸ್ ಜೊತೆಗೆ ಅವರ ತಾತನ ಹೆಸರೂ ಕೂಡ ಇದೆ, ಈ 'ಮಣ್ಣಿನ ಮಗಳು' ಚುನಾವಣೆಯಲ್ಲಿ ಗೆಲ್ಲಲಿ ಎಂದು ದೊಡ್ಡ ಬ್ಯಾನರ್ ಕೂಡ ಹಾಕಿಸಲಾಗಿದೆ. ಇಲ್ಲಿ ಹುಟ್ಟಿ ಬೆಳೆದ ಕಮಲಾ ಹ್ಯಾರಿಸ್ ಅವರ ತಾಯಿಯ ಅಜ್ಜ ಪಿ.ವಿ. ಗೋಪಾಲನ್ ಮತ್ತು ಅವರ ಕುಟುಂಬ ಚೆನ್ನೈಗೆ ವಲಸೆ ಹೋಗಿದ್ದರು. ಅಲ್ಲಿ ಅವರು ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
ನಾಲ್ಕು ವರ್ಷಗಳ ಹಿಂದೆ 2020 ರಲ್ಲಿ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷರಾಗಿ ಸ್ಪರ್ಧೆ ಮಾಡಿದ್ದಾಗ ಕೂಡ ಅವರ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿತ್ತು. ಯುಎಸ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇಡೀ ಗ್ರಾಮದಲ್ಲಿ ಪಟಾಕಿ ಸಿಡಿಸಿ, ಅನ್ನದಾನ ಮಾಡಲಾಗಿತ್ತು ಈ ಘಟನೆ ಬಳಿಕ ಇಡೀ ಗ್ರಾಮ ಜಾಗತಿಕವಾಗಿ ಗಮನ ಸೆಳೆದಿತ್ತು.
ಡೆಮಾಕ್ರಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ಸ್ಪರ್ಧೆ ಮಾಡಿದ್ದು, ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ಸ್ಪರ್ಧೆ ಮಾಡಿದ್ದಾರೆ. ಯುಎಸ್ ಚುನಾವಣಾ ಇತಿಹಾಸದಲ್ಲಿ ಇದು ವಿಶೇಷ ಎನ್ನಲಾಗಿದೆ. ಇಬ್ಬರು ಅಭ್ಯರ್ಥಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು ಗೆಲುವು ಯಾರಿಗೆ ಎನ್ನುವ ಕುತೂಹಲ ಹೆಚ್ಚಾಗಿದೆ.












Click it and Unblock the Notifications