ಹಾರ್ವರ್ಡ್ ಎಲ್ಲಿದೆ ಎಂದೇ ಗೊತ್ತಿಲ್ಲದ ಪೋಷಕರ ಮಗಳೀಗ ಅದೇ ವಿವಿಯ ವಿದ್ಯಾರ್ಥಿನಿ: ಇದು ಹಳ್ಳಿ ಹುಡುಗಿ ಸೀಮಾ ಕುಮಾರಿ ಯಶೋಗಾಥೆ

ಜಗತ್ತಿನ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯ ಎಲ್ಲಿದೆ ಎಂಬುದೇ ಆಕೆಯ ಪೋಷಕರಿಗೆ ಗೊತ್ತಿಲ್ಲ. ತಂದೆ-ತಾಯಿ ಎಂದೂ ಶಾಲೆಯ ಮೆಟ್ಟಿಲನ್ನೇ ಹತ್ತಿದವರಲ್ಲ. ಆದರೆ, ಅವರ ಮಗಳೀಗ ಅದೇ ವಿಶ್ವವಿದ್ಯಾಲಯದಲ್ಲಿ ಸ್ಕಾಲರ್‌ಶಿಪ್‌ ಪಡೆದು ಅರ್ಥಶಾಸ್ತ್ರ ವ್ಯಾಸಂಗ ಮಾಡುತ್ತಿದ್ದಾಳೆ.

ಬಡತನ, ಹಳ್ಳಿಯ ಕಟ್ಟುಪಾಡುಗಳು ಹಾಗೂ ಹೆಣ್ಣುಮಕ್ಕಳ ಮೇಲಿನ ನಿರ್ಬಂಧಗಳನ್ನ ಮೆಟ್ಟಿ ನಿಂತು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವ ಜಾರ್ಖಂಡ್‌ನ ಫುಟ್ಬಾಲ್ ಆಟಗಾರ್ತಿ ಸೀಮಾ ಕುಮಾರಿ ಅವರ ಸ್ಫೂರ್ತಿದಾಯಕ ಯಶೋಗಾಥೆ ಪ್ರತಿಯೊಬ್ಬರಿಗೂ ಮಾದರಿ.

Jharkhand Village Footballer Seema Kumari Earns Full Scholarship to Harvard University Success Story

ಬಡತನ ಮೆಟ್ಟಿ ನಿಂತ ಜಾರ್ಖಂಡ್ ಫುಟ್ಬಾಲ್ ಆಟಗಾರ್ತಿ

ಜಾರ್ಖಂಡ್‌ನ ಡಾಹು ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಸೀಮಾ ಕುಮಾರಿ ಕಡು ಬಡತನದ ಹಿನ್ನೆಲೆಯುಳ್ಳವಳು. ಆಕೆಯ ತಂದೆ ಸ್ಥಳೀಯ ದಾರದ ಕಾರ್ಖಾನೆಯೊಂದರಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರ ಒಂದು ಸಣ್ಣ ಮನೆಯಲ್ಲಿ ಬರೋಬ್ಬರಿ 19 ಜನ ಕುಟುಂಬ ಸದಸ್ಯರು ವಾಸಿಸುತ್ತಿದ್ದರು.

ಇಂತಹ ಹಳ್ಳಿಯಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಗಗನಕುಸುಮವಾಗಿತ್ತು. ಆದರೆ, 2012ರಲ್ಲಿ ಯುವ ಎಂಬ ಎನ್‌ಜಿಒ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಫುಟ್ಬಾಲ್ ಆಟವನ್ನ ಪರಿಚಯಿಸಲು ಆಕೆಯ ಹಳ್ಳಿಗೆ ಬಂದಾಗ ಸೀಮಾ ಬದುಕು ಬದಲಾಗಲು ಶುರುವಾಯಿತು. ಕೇವಲ 9 ವರ್ಷದವಳಿದ್ದಾಗ ಫುಟ್ಬಾಲ್ ತರಬೇತಿಗೆ ಸೇರಿದ ಸೀಮಾ, ಮನೆಗೆಲಸದ ನಡುವೆಯೂ ಆಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು.

ಎನ್‌ಜಿಒ ಬದಲಿಸಿದ ಬದುಕು

2015ರಲ್ಲಿ ಇದೇ ಯುವ ಎಂಬ ಎನ್‌ಜಿಒ ಹಳ್ಳಿಯಲ್ಲಿ ತನ್ನದೇ ಆದ ಶಾಲೆಯನ್ನ ಪ್ರಾರಂಭಿಸಿತು. 70 ಮಕ್ಕಳಿದ್ದ ತರಗತಿಯಿಂದ ಕೇವಲ 6 ಮಕ್ಕಳಿರುವ ತರಗತಿಗೆ ಸೀಮಾ ಶಿಫ್ಟ್ ಆದಳು. ಇದರಿಂದ ಆಕೆಗೆ ಉತ್ತಮ ಮಾರ್ಗದರ್ಶನ ಸಿಕ್ಕಿತು. ಫುಟ್ಬಾಲ್ ಆಟ ಆಕೆಯನ್ನ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್‌ಗಳಿಗೆ ಕರೆದೊಯ್ದಿತು.

ತನ್ನ 15ನೇ ವಯಸ್ಸಿನಲ್ಲಿ ಇಂಗ್ಲೀಷ್‌ ಕಲಿಯಲು ಆರಂಭಿಸಿದ ಸೀಮಾ, ಕೇವಲ ಐದು ವರ್ಷಗಳಲ್ಲಿ ಸಿಯಾಟಲ್‌ನಲ್ಲಿ ಎಕ್ಸ್‌ಚೇಂಜ್ ಪ್ರೋಗ್ರಾಮ್, ಕೇಂಬ್ರಿಡ್ಜ್ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾಲಯಗಳಲ್ಲಿ ಬೇಸಿಗೆ ಶಿಬಿರಗಳಲ್ಲೇಲ್ಲ ಭಾಗವಹಿಸಿದ್ದರು. ವಿದೇಶಿ ಶಿಕ್ಷಣದ ಈ ಒಡನಾಟ ಆಕೆಯಲ್ಲಿ ವಿದೇಶದಲ್ಲಿಯೇ ಕಲಿಯಬೇಕು ಎಂಬ ದೊಡ್ಡ ಕನಸನ್ನು ಹುಟ್ಟು ಹಾಕಿತು.

ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿವೇತನ

ಹಾರ್ವರ್ಡ್ ವಿವಿಗೆ ಸೇರುವ ಕನಸಿಗೆ ನೀರೆರೆದವರು ಸೀಯಾಳ ಇಂಗ್ಲೀಷ್ ಶಿಕ್ಷಕಿ ಹಾಗೂ ಹಾರ್ವರ್ಡ್ ಹಳೆಯ ವಿದ್ಯಾರ್ಥಿನಿ ಮ್ಯಾಗಿ. ಸೀಮಾಳ ಸಾಮರ್ಥ್ಯವನ್ನ ಗುರುತಿಸಿದ ಅವರು, ಅರ್ಜಿ ಸಲ್ಲಿಕೆ ಹಾಗೂ ಹಣಕಾಸಿನ ನೆರವಿನ ಫಾರ್ಮ್‌ಗಳನ್ನ ತುಂಬಲು ಸಹಾಯ ಮಾಡಿದರು.

ಈ ನಡುವೆ SATನಂತಹ ಪ್ರವೇಶ ಪರೀಕ್ಷೆ ಬರೆಯಲು ಹಣವಿಲ್ಲದೆ ಸೀಮಾ ಪರದಾಡುತ್ತಿದ್ದಳು. ಅದೇ ಸಮಯಕ್ಕೆ ಕೊರೊನಾ ಸಾಂಕ್ರಾಮಿಕ ಬಂದಿದ್ದರಿಂದ ಹಾರ್ವರ್ಡ್ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯ ನಿಯಮವನ್ನ ಸಡಿಲಿಸಿತು. ಇದು ಸೀಮಾಗೆ ವರದಾನವಾಯಿತು. ಒಂದು ರಾತ್ರಿ ಆಕೆಗೆ ಹಾರ್ವರ್ಡ್‌ನಿಂದ ಪೂರ್ಣ ವಿದ್ಯಾರ್ಥಿವೇತನದೊಂದಿಗೆ ಪ್ರವೇಶ ಸಿಕ್ಕಿರುವ ಇಮೇಲ್ ಬಂತು. ಆ ರಾತ್ರಿ ಖುಷಿಯಿಂದ ತನಗೆ ನಿದ್ದೆಯೇ ಬರಲಿಲ್ಲ, ಏಳು ಬಾರಿ ಎದ್ದು ಕೂತಿದ್ದೆ ಎಂದು ಸೀಮಾ ನೆನಪಿಸಿಕೊಳ್ಳುತ್ತಾಳೆ.

ಮಹಿಳಾ ಸಬಲೀಕರಣದ ಕನಸು

ಪ್ರಸ್ತುತ 2025ರ ಬ್ಯಾಚ್‌ನಲ್ಲಿ ಅರ್ಥಶಾಸ್ತ್ರ ವ್ಯಾಸಂಗ ಮಾಡುತ್ತಿರುವ ಸೀಮಾ, ಕ್ಯಾಂಪಸ್‌ನಲ್ಲಿ ದಕ್ಷಿಣ ಏಷ್ಯಾ ಸಂಘ ಸೇರಿದಂತೆ ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾಳೆ. ಆಕೆಯ ಸಾಧನೆಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಉದ್ಯಮಿ ಕಿರಣ್ ಮಜುಂದಾರ್ ಶಾ ಸೇರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಲ್ಯ ವಿವಾಹದ ಒತ್ತಡ, ಚಡ್ಡಿ ಧರಿಸಿ ಫುಟ್ಬಾಲ್ ಆಡುವಾಗ ಎದುರಿಸಿದ ಟೀಕೆಗಳನ್ನೆಲ್ಲ ಮೀರಿ ನಿಂತಿರುವ ಸೀಮಾ, ಭವಿಷ್ಯದಲ್ಲಿ ಆರ್ಥಿಕವಾಗಿ ಸ್ವತಂತ್ರಳಾಗುವ ಗುರಿ ಹೊಂದಿದ್ದಾಳೆ. ತನ್ನ ಶಿಕ್ಷಣ ಮುಗಿದ ಬಳಿಕ ತಾಯ್ನಾಡಿಗೆ ಮರಳಿ, ತನ್ನ ಹಳ್ಳಿಯ ಇತರ ಹೆಣ್ಣುಮಕ್ಕಳಿಗೂ ಕೌಶಲ್ಯ ತರಬೇತಿ ನೀಡಿ, ಅವರ ಬದುಕನ್ನು ಕಟ್ಟಿಕೊಡುವ ದೊಡ್ಡ ಕನಸನ್ನ ಹೊತ್ತಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+