Jharkhand & Maharashtra Election: ಜಾರ್ಖಂಡ್, ಮಹಾರಾಷ್ಟ್ರ ಚುನಾವಣೆ; ಮತದಾನ, ಎಕ್ಸಿಟ್ ಪೋಲ್ ಸಮಯ
ಜಾರ್ಖಂಡ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಜಾರ್ಖಂಡ್ 2ನೇ ಹಂತದ ಚುನಾವಣೆ ಜೊತೆಗೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಕೂಡ ನಡೆಯಲಿದೆ. ಜಾರ್ಖಂಡ್‌ನಲ್ಲಿ ಮೊದಲ ಹಂತದ ಚುನಾವಣೆ ನವೆಂಬರ್ 13ರಂದು ನಡೆದಿದ್ದು, 43 ಕ್ಷೇತ್ರಗಳಲ್ಲಿ ಮತದನಾ ನಡೆದಿದೆ. ನಾಳೆ (ಬುಧವಾರ) 38 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ಚುನಾವಣಾ ಫಲಿತಾಂಶ ನವೆಂಬರ್ 23ರಂದು ಹೊರಬೀಳಲಿದೆ.
ಜಾರ್ಖಂಡ್‌ನಲ್ಲಿ ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. 31 ಬೂತ್‌ಗಳಲ್ಲಿ ಮಾತ್ರ ಸಂಜೆ 4 ಗಂಟೆಗೆ ಮತದಾನ ಮುಗಿಯಲಿದೆ. 4 ಗಂಟೆಯ ಒಳಗೆ ಮತಗಟ್ಟೆಗೆ ಬಂದವರಿಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ.

ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಎಲ್ಲಾ 288 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. 5 ಗಂಟೆಯ ಒಳಗೆ ಮತಗಟ್ಟೆಗೆ ಬಂದವರಿಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ.
ಇಂಡಿಯಾ ಒಕ್ಕೂಟ vs ಎನ್‌ಡಿಎ
ಎರಡೂ ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟ ಮತ್ತು ಎನ್‌ಡಿಎ ನಡುವೆ ಭಾರಿ ಹಣಾಹಣಿ ನಡೆಯುತ್ತಿದೆ. ಜಾರ್ಖಂಡ್‌ನಲ್ಲಿ ಆಡಳಿತಾರೂಢ ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್ ಮತ್ತು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ನಡುವೆ ಪೈಪೋಟಿ ಉಂಟಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ನಾಯಕರು ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಇಂಡಿಯಾ ಒಕ್ಕೂಟದ ಪರ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಹೇಮಂತ್ ಸೊರೇನ್ ಪ್ರಚಾರ ಮಾಡಿದ್ದಾರೆ. ಜಾರ್ಖಂಡ್ ಮತದಾರ ನಾಳೆ ಆಳುವ ಸರ್ಕಾರವನ್ನು ಆಯ್ಕೆ ಮಾಡಲಿದ್ದಾನೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ, ಎನ್‌ಸಿಪಿ (ಅಜಿತ್ ಪವಾರ್ ಬಣ), ಶಿವಸೇನಾ (ಏಕನಾಥ್ ಶಿಂಧೆ ಬಣ) ಮೈತ್ರಿ ಮಾಡಿಕೊಂಡಿದ್ದು ಮಹಾಯುತಿ ಹೆಸರಿನಲ್ಲಿ ಚುನಾವಣೆ ಎದುರಿಸುತ್ತಿವೆ. ಮತ್ತೊಂದು ಕಡೆ ಕಾಂಗ್ರೆಸ್, ಶಿವಸೇನಾ (ಉದ್ದವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್ ಬಣ) ಮಹಾ ವಿಕಾಸ್ ಅಘಡಿ ಮೈತ್ರಿಕೂಟದ ಹೆಸರಿನಲ್ಲಿ ಚುನಾವಣೆ ಎದುರಿಸಿತ್ತಿವೆ.
ಎಕ್ಸಿಟ್ ಪೋಲ್ ಯಾವಾಗ
ಎರಡೂ ರಾಜ್ಯಗಳ ಚುನಾವಣೆ ಮುಗಿದ ಬಳಿಕ ಎಕ್ಸಿಟ್ ಪೋಲ್ ಫಲಿತಾಂಶಗಳು ಪ್ರಕಟವಾಗುವ ಸಾಧ್ಯತೆ ಇದೆ. ಇದು ಚುನಾವಣಾ ಫಲಿತಾಂಶದ ಬಗ್ಗೆ ದಿಕ್ಸೂಚಿಯನ್ನು ನೀಡುತ್ತದೆ. ಸಂಜೆ 6 ಗಂಟೆ ಬಳಿಕ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೋತ್ತರ ಸಮೀಕ್ಷೆ ಫಲಿತಾಂಶಗಳು ಪ್ರಕಟವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications