Jharkhand Election: ಜೆಎಂಎಂ ಸರ್ಕಾರ ಜಾರ್ಖಂಡ್ ರಾಜ್ಯವನ್ನು ಲೂಟಿ ಮಾಡಿದೆ: ಬಿಜೆಪಿ ನಾಯಕನ ಆರೋಪ
ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರ ಶುರುವಾಗಿದೆ. ಬಿಜೆಪಿ 20 ವರ್ಷಗಳ ಕಾಲ ಜಾರ್ಖಂಡ್ ರಾಜ್ಯವನ್ನು ಲೂಟಿ ಮಾಡಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಆರೋಪ ಮಾಡಿದ್ದ ಬೆನ್ನಲ್ಲೇ, ಬಿಜೆಪಿ ನಾಯಕ ಪ್ರತಿಕ್ರಿಯೆ ನೀಡಿದ್ದು, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸರ್ಕಾರ ಕಳೆದ ಐದು ವರ್ಷಗಳಿಂದ ರಾಜ್ಯವನ್ನು ಲೂಟಿ ಮಾಡಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಜಾರ್ಖಂಡ್ ಅಧ್ಯಕ್ಷ ಮತ್ತು ಧನ್ವಾರ್ ವಿಧಾನಸಭಾ ಕ್ಷೇತ್ರದ ಅಬ್ಯರ್ಥಿ ಬಾಬುಲಾಲ್ ಮರಾಂಡಿ ಆಡಳಿತಾರೂಢ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಜೆಎಂಎಂ ವ್ಯಾಪಕ ಭ್ರಷ್ಟಾಚಾರ ಮಾಡಿದ್ದು, ರಾಜ್ಯದ ಸಂಪತ್ತನ್ನು ದೋಚಿದೆ ಎಂದು ಆರೋಪಿಸಿದರು.

"ಜಾರ್ಖಂಡ್‌ನಲ್ಲಿ ಈ ಬಾರಿ ಪರಿವರ್ತನೆಯಾಗಲಿದೆ. ಜೆಎಂಎಂ ಸರ್ಕಾರ ಕಳೆದ ಐದು ವರ್ಷಗಳಲ್ಲಿ ರಾಜ್ಯವನ್ನು ಲೂಟಿ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಭ್ರಷ್ಟ ನಾಯಕರಿಗೆ ಮತ ಹಾಕುವ ತಪ್ಪನ್ನು ಜಾರ್ಖಂಡ್ ಜನತೆ ಮತ್ತೆ ಮಾಡುವುದಿಲ್ಲ. ಈ ಸರ್ಕಾರ ಮರಳು, ಕಲ್ಲುಗಳು, ಕಲ್ಲಿದ್ದಲು ಮತ್ತು ಭೂಮಿ ಎಲ್ಲವನ್ನೂ ಲೂಟಿ ಮಾಡಿದ್ದಾರೆ. ಅದು ಆದಿವಾಸಿಗಳಿಗೆ ಸೇರಿದ ಭೂಮಿಯಾಗಿರಲಿ ಅಥವಾ ಸೇನೆಯಾಗಿರಲಿ, ಅವರು ಯಾವುದನ್ನೂ ಬಿಟ್ಟಿಲ್ಲ," ಎಂದು ಮರಾಂಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯಾಪಕ ಭ್ರಷ್ಟಾಚಾರ ಮಾಡಿದ್ದಾರೆ
ಬಿಜೆಪಿ ರ್‍ಯಾಲಿಯಲ್ಲಿ ಮಾತನಾಡಿದ ಮರಾಂಡಿ, "ಜಾರ್ಖಂಡ್ ಜನ ಬದಲಾವಣೆಗೆ ಸಜ್ಜಾಗಿದ್ದಾರೆ. ಈ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ಯಾವ ಮಟ್ಟಿಗೆ ವ್ಯಾಪಿಸಿದೆ ಎಂದರೆ, ಸರ್ಕಾರಿ ಕಚೇರಿಗಳೂ ಸುಲಿಗೆ ಕೇಂದ್ರಗಳಾಗಿ ಮಾರ್ಪಟ್ಟಿವೆ. ಜೆಎಂಎಂ ಸರ್ಕಾರ ರಾಜ್ಯವನ್ನು ಲೂಟಿ ಮಾಡುವುದನ್ನು ಬಿಟ್ಟರೆ ಇನ್ನೇನೂ ಮಾಡಿಲ್ಲ. ವಿಧಾನಸಭಾ ಚುನಾವಣೆಯು ಭ್ರಷ್ಟ ನಾಯಕರನ್ನು ಅಧಿಕಾರದಿಂದ ಕಿತ್ತೊಗೆಯಲು ಮತ್ತು ಜಾರ್ಖಂಡ್‌ನಲ್ಲಿ ಬದಲಾವಣೆ ತರಲು ಜನರಿಗೆ ಸಿಕ್ಕಿರುವ ಅವಕಾಶವಾಗಿದೆ" ಎಂದು ಹೇಳಿದರು.
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ 66 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಆಲ್ ಜಾರ್ಖಂಡ್ ವಿದ್ಯಾರ್ಥಿ ಸಂಘ (ಎಜೆಎಸ್‌ಯು), ಸಂಯುಕ್ತ ಜನತಾ ದಳ (ಜೆಡಿ-ಯು) ಮತ್ತು ಲೋಕ ಜನಶಕ್ತಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. 68 ಸ್ಥಾನಗಳು ಬಿಜೆಪಿಗೆ, 10 ಸ್ಥಾನಗಳು ಎಜೆಎಸ್‌ಯು ಪಕ್ಷಕ್ಕೆ, 2 ಜೆಡಿಯು ಮತ್ತು 1 ಸ್ಥಾನವನ್ನು ಎಲ್‌ಜೆಪಿಗೆ ಬಿಟ್ಟುಕೊಡಲಾಗಿದೆ.
ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಇಂಡಿಯಾ ಒಕ್ಕೂಟ ಜೊತೆಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಖಚಿತಪಡಿಸಿದ್ದಾರೆ. 81 ಸ್ಥಾನಗಳಲ್ಲಿ 71 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಎಂಎಂ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಜಾರ್ಖಂಡ್ ವಿಧಾನಸಭಾ ಚುನಾವಣೆಯು ನವೆಂಬರ್ 13 ಮತ್ತು ನವೆಂಬರ್ 20 ಎರಡು ಹಂತಗಳಲ್ಲಿ ನಡೆಯಲಿದ್ದು ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications