Jharkhand Election: ಮೊದಲ ಹಂತದ ಚುನಾವಣೆ; 685 ಅಭ್ಯರ್ಥಿಗಳು ಕಣದಲ್ಲಿ
ಜಾರ್ಖಂಡ್ ವಿಧಾನಸಭಾ ಚುನಾವಣೆಯ ಅಖಾಡ ದಿನೇ ದಿನೇ ರಂಗೇರುತ್ತಿದೆ. ಎರಡು ಹಂತಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಮತದಾನ ನವೆಂಬರ್ 13ರಂದು ನಡೆಯಲಿದೆ. 43 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು, 685 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಅಕ್ಟೋಬರ್ 18ರಿಂದ 25 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. 43 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 805 ಸ್ಪರ್ಧಾಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು. ಪರಿಶೀಲನೆ ಬಳಿಕ 743 ನಾಮಪತ್ರಗಳನ್ನು ಸ್ವೀಕರಿಸಲಾಗಿದ್ದು, ಬಳಿಕ 58 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಅಂತಿಮವಾಗಿ 685 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಜೆಮ್‌ಶೆಡ್‌ಪುರ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ 28 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಅತಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿರುವು ಕ್ಷೇತ್ರವಾಗಿದೆ. ಇನ್ನು ಜಗನ್ನಾಥಪುರ ವಿಧಾನಸಭಾ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು ಕನಿಷ್ಠ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿರುವ ಕ್ಷೇತ್ರವಾಗಿದೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಇದೇ 43 ಕ್ಷೇತ್ರಗಳಲ್ಲಿ ಒಟ್ಟು 633 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.
ಎರಡನೇ ಹಂತದಲ್ಲಿ 643 ಅಭ್ಯರ್ಥಿಗಳು
ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಕೂಡ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದೆ. ಒಟ್ಟು 634 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಇನ್ನೂ ಅವಕಾಶವಿದ್ದು, ಬಳಿಕ ಅಂತಿಮವಾಗಿ ಎಷ್ಟು ಜನ ಕಣದಲ್ಲಿ ಉಳಿಯುತ್ತಾರೆ ಎನ್ನುವ ಮಾಹಿತಿ ಸಿಗಲಿದೆ. ಎರಡನೇ ಹಂತದಲ್ಲಿ 38 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 20 ರಂದು ಮತದಾನ ನಡೆಯಲಿದೆ.
ಜಾರ್ಖಂಡ್‌ನ ಎರಡನೇ ಹಂತದ ಚುನಾವಣೆಗೆ ನಾಮಪತ್ರಗಳ ಪರಿಶೀಲನೆ ನಡೆದಿದೆ ಎಂದು ಜಾರ್ಖಂಡ್‌ನ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕೆ ರವಿಕುಮಾರ್ ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ 11 ಗಂಟೆಯೊಳಗೆ ಕೆಲವು ನಾಮನಿರ್ದೇಶಿತರಿಗೆ ಅಗತ್ಯ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಕೋಟ್ಯಂತರ ರೂಪಾಯಿ ಹಣ ವಶಕ್ಕೆ
ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ರಾಜ್ಯದಲ್ಲಿ ಮತದಾರರಿಗೆ ಹಣ, ಸಾರಾಯಿ ಹಂಚಿಕೆ ಬಗ್ಗೆ ಚುನಾವಣಾಧಿಕಾರಿಗಳು ಕಣ್ಣಿಟ್ಟಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ಈವರೆಗೂ ರಾಜ್ಯದಲ್ಲಿ ಒಟ್ಟು 121.14 ಕೋಟಿ ರೂಪಾಯಿ ಹಣ ಮತ್ತು ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಚುನಾವಣಾ ಆಯೋಗದ ಅಧಿಕೃತ ಪ್ರಕಟಣೆಯ ಪ್ರಕಾರ, ಖುಂಟಿಯಲ್ಲಿ 3.03 ಕೋಟಿ ರೂಪಾಯಿ ಹಣ ಮತ್ತು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಗಿರಿದಿಹ್‌ನಲ್ಲಿ ₹ 2.80 ಕೋಟಿ, ಮತ್ತು ಪೂರ್ವ ಸಿಂಗ್‌ಭೂಮ್‌ನಲ್ಲಿ ₹ 1.97 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ. ರಾಂಚಿಯ ನಮ್ಕುಮ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರಲ್ಲಿ ಬಚ್ಚಿಟ್ಟಿದ್ದ ಸುಮಾರು ₹ 1.14 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಾರ್ಖಂಡ್‌ನಲ್ಲಿ ಒಟ್ಟು 81 ವಿಧಾನಸಭಾ ಕ್ಷೇತ್ರಗಳಿದ್ದು, ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications