Jharkhand Assembly Election: ವಿಧಾನಸಭೆ ಚುನಾವಣೆಗೆ ಲೋಕ ಜನಶಕ್ತಿ ಪಕ್ಷ ಸ್ಪರ್ಧೆ ಬಗ್ಗೆ ಚಿರಾಗ್ ಪಾಸ್ವಾನ್ ಹೇಳಿದ್ದೇನು?
Jharkhand Assembly Election 2024: ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನವೇ ಭರ್ಜರಿ ಪ್ರಚಾರಗಳು ಆರಂಭವಾಗಿವೆ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಅಬ್ಬರದ ಪ್ರಚಾರ ಆರಂಭಿಸಿದ್ದು, ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಲೇ ಇದ್ದಾರೆ. ಇದೀಗ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಕೂಡ ಇಲ್ಲಿನ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್ ಬಣ) ಸ್ಪರ್ಧಿಸಲಿದ್ದು, ಮೈತ್ರಿ ಅಥವಾ ಏಕಾಂಗಿಯಾಗಿ ಚುನಾವಣೆ ಎದುರಿಸುವುದು ಸೇರಿದಂತೆ ಎಲ್ಲಾ ಆಯ್ಕೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚಿಕ್ಕವನಿದ್ದಾಗ ಜಾರ್ಖಂಡ್ ಏಕೀಕೃತ ಬಿಹಾರಕ್ಕೆ ಸೇರಿತ್ತು. ನಮ್ಮ ತಂದೆ ಜಾರ್ಖಂಡ್‌ನಲ್ಲಿ ಕೆಸಲ ಮಾಡಿದ್ದಾರೆ. ರಾಜ್ಯದಲ್ಲಿ ನಮ್ಮ ಪಕ್ಷವು ದೊಡ್ಡ ವೋಟ್‌ಬ್ಯಾಂಕ್ ಹೊಂದಿದೆ. ಆದ್ದರಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಹೇಳಿದರು.
ಎನ್‌ಡಿಎ ಮಿತ್ರಪಕ್ಷಗಳಾದ ಜೆಡಿಎಸ್‌ಯು ಪಕ್ಷ ಮತ್ತು ಜನತಾ ದಳದೊಂದಿಗೆ (ಸಂಯುಕ್ತ) ಬಿಜೆಪಿ ಮೈತ್ರಿ ಮಾಡಿಕೊಂಡು ಜಾರ್ಖಂಡ್ ವಿಧಾನಸಭೆ ಚುನಾವಣೆ ಎದುರಿಸಲಿದೆ ಎಂದು ಹೇಳಿದರು. ಮೈತ್ರಿಪಕ್ಷಗಳೊಂದಿಗೆ ಸೀಟು ಹಂಚಿಕೆ ಒಪ್ಪಂದವು ಶೇಕಡ 99ರಷ್ಟು ಪೂರ್ಣಗೊಂಡಿದೆ. ಉಳಿದ ಒಂದು ಅಥವಾ ಎರಡು ಸೀಟುಗಳ ವಿಚಾರವಾಗಿ ಮಾತುಕತೆ ಮುಂದುವರೆದಿದ್ದು, ಶೀಘ್ರವೇ ಅಂತಿಮಗೊಳ್ಳಲಿದೆ ಎಂದರು.
ಹಿಮಂತ ಬಿಸ್ವಾ ಹೇಳಿದ್ದೇನು?: ವಿಧಾನಸಭಾ ಚುನಾವಣೆ ಹಿನ್ನೆಲೆ ನಿನ್ನೆ (ಸೆಪ್ಟೆಂಬರ್ 28) ಜಾರ್ಖಂಡ್‌ಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆಯನ್ನು ಅಕ್ಟೋಬರ್ 3ರಂದು ಬಿಡುಗಡೆ ಮಾಡಲಿದೆ ಎಂದರು. ಇನ್ನು ರಾಜ್ಯದ 81 ವಿಧಾನಸಭಾ ಸ್ಥಾನಗಳಿಗೆ ಮುಂದಿನ ತಿಂಗಳು ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಈಗಾಗಲೇ ಬಿಜೆಪಿಯ ಪರಿವರ್ತನಾ ಯಾತ್ರೆ ಆರಂಭವಾಗಿದೆ. ಇನ್ನು ಅಕ್ಟೋಬರ್ 2ರಂದು ಅಂದರೆ ಗಾಂಧಿಜಯಂತಿಯಂದು ಹಜಾರಿಬಾಗ್‌ನಲ್ಲಿ ನಡೆಯಲಿರುವ ಬಿಜೆಪಿಯ ಪರಿವರ್ತನ ಯಾತ್ರೆ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ಇನ್ನು ಅಕ್ಟೋಬರ್ 3ರಿಂದ ನಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.
2019ರಲ್ಲಿ ನವೆಂಬರ್ 30 ಮತ್ತು ಡಿಸೆಂಬರ್ 20ರ ನಡುವೆ 5 ಹಂತಗಳಲ್ಲಿ 81 ವಿಧಾನಸಭಾ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸಲಾಗಿದ್ದು, ಡಿಸೆಂಬರ್ 23ರಂದು ಫಲಿತಾಂಶಗಳನ್ನು ಘೋಷಣೆ ಮಾಡಲಾಯಿತು. ಇನ್ನು ಈ ಬಾರಿ ವರ್ಷದ ಕೊನೆಯಲ್ಲಿ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2-3 ಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮತದಾರರ ವಿವರ: ಜಾರ್ಖಂಡ್ ವಿಧಾನಸಭೆಯ ಚುನಾವಣೆಯು ಜನವರಿ 5, 2025ರಂದು ಕೊನೆಗೊಳ್ಳಲಿದೆ ಎಂದು ಹೇಳಾಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 2.59 ಕೋಟಿ ಮತದಾರರಿದ್ದಾರೆ. ಇವರಲ್ಲಿ 1.31 ಕೋಟಿ ಪುರುಷರು ಮತ್ತು 1.28 ಕೋಟಿ ಮಹಿಳೆಯರಿದ್ದಾರೆ. ರಾಜ್ಯದಲ್ಲಿ ಪ್ರಥಮ ಬಾರಿಗೆ 11.5 ಲಕ್ಷಕ್ಕೂ ಹೆಚ್ಚು ಮಂದಿ ಮತದಾನ ಮಾಡಲಿದ್ದಾರೆ. 1.5 ಲಕ್ಷ ಮತದಾರರು 85 ವರ್ಷ ಮೇಲ್ಪಟ್ಟವರಾಗಿದ್ದು, 3.64 ಲಕ್ಷ ಅಂಗವಿಕಲ ಮತದಾರರಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications