ಕೊರೊನಾ ಆತಂಕ: ಜೆಇಇ ಮುಖ್ಯ ಪರೀಕ್ಷೆ ಮುಂದೂಡಿಕೆ
ನವದೆಹಲಿ, ಏಪ್ರಿಲ್ 18: ದೇಶದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚುತ್ತಿದ್ದು, ಜೆಇಇ ಮುಖ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ. ಜೆಇಇ ಪರೀಕ್ಷೆಯ ಮೊದಲ ಎರಡು ಹಂತ ಕಳೆದ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಮುಗಿದಿದೆ.
ಈ ತಿಂಗಳು 27ರಿಂದ ಮೂರು ದಿನಗಳ ಕಾಲ ಜೆಇಇ ಮುಖ್ಯ ಪರೀಕ್ಷೆ ನಡೆಯಬೇಕಾಗಿತ್ತು. ಆದರೆ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ. ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪರೀಕ್ಷೆಗಿಂತ 15 ದಿವಸ ಮೊದಲು ಪ್ರಕಟಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ ಟಿಎ) ತಿಳಿಸಿದೆ. ದೇಶಾದ್ಯಂತ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಐಸಿಎಸ್‌ಇ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಈ ವಾರದ ಆರಂಭದಲ್ಲಿ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ತನ್ನ 10 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ 12 ನೇ ತರಗತಿ ಪರೀಕ್ಷೆಯನ್ನು ಮುಂದೂಡಿದೆ. ಹಲವಾರು ರಾಜ್ಯ ಮಂಡಳಿಗಳು ಕೂಡಾ ಪರೀಕ್ಷೆಗಳನ್ನು ಮುಂದೂಡಿವೆ ಅಥವಾ ರದ್ದುಗೊಳಿಸಿವೆ.

ಕೊರೊನಾ ಪ್ರಕರಣಗಳು ರಾಷ್ಟ್ರವ್ಯಾಪಿ ಉಲ್ಬಣಗೊಂಡ ಹಿನ್ನೆಲೆಯಲ್ಲಿ, ಮೇ 4 ರಿಂದ ನಡೆಯಬೇಕಿದ್ದ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಪರೀಕ್ಷೆಗಳ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗೆರ್ರಿ ಅರಾಥೂನ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಸಿಬಿಎಸ್‌ಇ 10 ಹಾಗೂ 12ನೇ ತರಗತಿ ಪರೀಕ್ಷೆಯನ್ನು ಕೂಡ ಮುಂದೂಡಲಾಗಿದೆ.











Click it and Unblock the Notifications