ಹೋಳಿ ಸಂಭ್ರಮಾಚರಣೆಯಲ್ಲಿ ಜಪಾನ್ ಯುವತಿಗೆ ಕಿರುಕುಳ ನೀಡಿದ ಯುವಕರ ಗುಂಪು; ವಿಡಿಯೋ ವೈರಲ್
ಯುವತಿಯ ಗುರುತು ಅಥವಾ ಘಟನೆಯ ಬಗ್ಗೆ ಯಾವುದೇ ವಿವರಗಳ ಮಾಹಿತಿ ನೀಡುವಂತೆ ಜಪಾನ್ ರಾಯಭಾರ ಕಚೇರಿಗೆ ಇಮೇಲ್ ಕಳುಹಿಸಲಾಗಿದೆ.
ನವದೆಹಲಿ, ಮಾರ್ಚ್ 10: ಹೋಳಿ ಹಬ್ಬದ ಸಂಭ್ರಮಾಚರಣೆ ವೇಳೆ ಹಲವು ಅವಘಡಗಳು ಸಂಭವಿಸಿವೆ. ಯುವತಿಯರ ಮೇಲೆ ಬಲವಂತವಾಗಿ ಬಣ್ಣ ಹಾಕಲು ಹೋಗಿ ಯುವಕರು ಕಿರುಕುಳ ನೀಡುವ ಘಟನೆಗಳು ನಡೆದಿದ್ದು, ದೆಹಲಿಯಲ್ಲಿ ಯುವಕರ ಗುಂಪೊಂದು ಜಪಾನಿನ ಯುವತಿಗೆ ಬಣ್ಣ ಹಾಕಿ ಕಿರುಕುಳ ನೀಡಿರುವ ಘಟನೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.
ಬುಧವಾರ ದೆಹಲಿಯಲ್ಲಿ ಹೋಳಿ ಆಚರಣೆ ವೇಳೆ ಯುವಕರ ಗುಂಪೊಂದು ಜಪಾನ್‌ನ ಯುವತಿಯೊಬ್ಬರನ್ನು ಅಟ್ಟಾಡಿಸಿಕೊಂಡು, ಕಿರುಕುಳ ನೀಡಿ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೌರ್ಜನ್ಯ ಎಸಗಿದ ಆರೋಪಿ ಯುವಕರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಬಲವಂತವಾಗಿ ಹೋಳಿ ಇದೆ ಎಂದು ಕೂಗುತ್ತಾ ಯುವತಿಯ ಮೇಲೆ ಬಣ್ಣ ಎರಚುತ್ತಿದ್ದಾರೆ. ಮತ್ತೊಬ್ಬ ಯುವಕ ಆಕರಯನ್ನು ಗಟ್ಟಿಯಾಗಿ ಹೊಡಿದುಕೊಂಡಿರುವುದು, ಇನ್ನೋಬ್ಬರು ಆಕೆಯ ತಲೆ ಮೇಲೆ ಮೊಟ್ಟೆ ಒಡೆಯುತ್ತಿರುವುದು ಕಾಣಿಸುತ್ತದೆ. ಈ ಯುವಕರಿಂದ ತಪ್ಪಿಸಿಕೊಳ್ಳಲು ಆಕೆ, "ಬೈ, ಬೈ" ಎಂದು ಹೇಳುತ್ತಾರೆ. ಆದರು ಅವರು ಬಿಡುವುದಿಲ್ಲ. ಕೊನೆಗೆ ಆಕೆ ಒಬ್ಬರ ಕೆನ್ನೆಗೆ ಹೊಡೆದು ಅಲ್ಲಿಂದ ಹೊರಡುತ್ತಾರೆ.
"ವಿಡಿಯೋದಲ್ಲಿ ಕಂಡು ಬಂದ ಗುರುತುಗಳ ಆಧಾರದ ಮೇಲೆ, ಇದು ಪಹರ್‌ಗಂಜ್‌ನಲ್ಲಿ ನಡೆದಿದೆ ಎಂದು ತೋರುತ್ತಿದೆ, ಆದರೂ, ಆ ಪ್ರದೇಶದಲ್ಲಿ ಅಂತಹ ಯಾವುದೇ ಘಟನೆ ನಡೆದಿದೆಯೇ ಅಥವಾ ಈ ವಿಡಿಯೋ ಹಳೆಯದಾಗಿದೆಯೇ ಎಂಬುದನ್ನು ತನಿಕೆ ಮಾಡಿ ಪರಿಶೀಲಿಸಲಾಗುತ್ತಿದೆ" ಎಂದು ದೆಹಲಿ ಪೊಲೀಸರು ಹೇಳಿಕೆ ನೀಡಿದ್ದಾರೆ. ಜೊತೆಗೆ ಪಹರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಯಾವುದೇ ವಿದೇಶಿಯರೊಂದಿಗೆ ಅನುಚಿತ ವರ್ತನೆಗೆ ಸಂಬಂಧಿಸಿದ ಯಾವುದೇ ದೂರು ಅಥವಾ ಕರೆ ಬಂದಿಲ್ಲ ಎಂದು ಹೇಳಿದ್ದಾರೆ.
ಇನ್ನು, ಯುವತಿಯ ಗುರುತು ಅಥವಾ ಘಟನೆಯ ಬಗ್ಗೆ ಯಾವುದೇ ವಿವರಗಳ ಮಾಹಿತಿ ನೀಡುವಂತೆ ಜಪಾನ್ ರಾಯಭಾರ ಕಚೇರಿಗೆ ಇಮೇಲ್ ಕಳುಹಿಸಲಾಗಿದೆ. ಬೀಟ್ ಪೊಲೀಸರು ಮತ್ತು ಸ್ಥಳೀಯ ಗುಪ್ತಚರರ ಮೂಲಕ ವಿಡಿಯೋದಲ್ಲಿರುವ ಯುವಕರ ಗುರುತು ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ವಿವರಗಳನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಹಲವರು ಈ ವಿಡಿಯೋವನ್ನು ದೆಹಲಿ ಪೊಲೀಸರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕ್ರಮಕ್ಕಾಗಿ ಟ್ಯಾಗ್ ಮಾಡಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿರುವ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಯುವತಿಯ ಸಂಪರ್ಕ ಮಾಡಲು ಪ್ರಯತ್ನಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications