Janhvi Kapoor: ಪ್ರಧಾನಿ ನರೇಂದ್ರ ಮೋದಿಗೆ "ಕೇಳುವುದು ಅರ್ಥಮಾಡಿಕೊಳ್ಳುವ ಮೊದಲ ಹೆಜ್ಜೆ" ಎಂದ ನಟಿ ಜಾಹ್ನವಿ ಕಪೂರ್
Janhvi Kapoor: ದೇಶದಲ್ಲಿ ನಡೆಯುತ್ತಿರುವ ಯುವಕರು ಪ್ರತಿಭಟನೆಗೆ ಸಂಬಂಧಿಸಿದಂತೆ ನಟಿ ಶ್ರೀದೇವಿ ಅವರು ಪುತ್ರಿ ಹಾಗೂ ನಟಿ ಜಾಹ್ನವಿ ಕಪೂರ್ (Jahnavi Kapoor) ಅವರು ಧ್ವನಿ ಎತ್ತಿದ್ದಾರೆ. ದೇಶದಾದ್ಯಂತ ಜೆನ್ ಜೀ ಪ್ರತಿಭಟನೆ ನಡೆಯುತ್ತಿದೆ. ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಯುವಕರು ಪ್ರತಿಭಟನೆ ಮಾಡುತ್ತಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿಯಿಂದ ಪ್ರಾರಂಭವಾದ ಪ್ರತಿಭಟನೆಯು ಇದೀಗ ಆಂದೋಲನ ಸ್ವರೂಪ ಪಡೆದುಕೊಂಡಿದೆ. ಬಾಲಿವುಡ್‌ನ ಹಲವರು ಇದೀಗ ಈ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಕ್ಕೆ ಪ್ರಾರಂಭಿಸಿದ್ದಾರೆ. ಕನ್ನಡ ಚಿತ್ರರಂಗದಿಂದ ಯುವರಾಜ್ ಕುಮಾರ್ ಅವರು ಬೆಂಬಲ ಸೂಚಿಸಿದ್ದಾರೆ. ಮಾಲಿವುಡ್ (ಮಲಯಾಳಂ)ಚಿತ್ರರಂಗದಿಂದಲೂ ಹಲವರು ಬೆಂಬಲ ಸೂಚಿಸಿದ್ದಾರೆ. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್, ಗಾಯಕ ಅರಿಜಿತ್ ಸಿಂಗ್ ಅವರು ಸೇರಿದಂತೆ ಹಲವರು ಯುವಕರ ಪ್ರತಿಭಟನೆಗೆ ಧ್ವನಿಯಾಗಿದ್ದಾರೆ. ಈ ಬೆಳವಣಿಗೆಗಳ ನಡುವೆ ಜೆನ್ ಜೀ ನಟಿ ಜಾಹ್ನವಿ ಕಪೂರ್ ಅವರು ನೀಟ್ ಪ್ರತಿಭಟನೆಗೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿದ್ದಾರೆ.

ಕೇಳುವುದು ಅರ್ಥಮಾಡಿಕೊಳ್ಳುವ ಮೊದಲ ಹೆಜ್ಜೆ. ಪ್ರತಿಯೊಂದು ಯುವ ಧ್ವನಿಯೂ ಗೌರವ ಮತ್ತು ಸಹಾನುಭೂತಿಗೆ ಅರ್ಹವಾಗಿದೆ. #VoiceOfTheYouth ಅಂತ ಜಾಹ್ನವಿ ಕಪೂರ್ ಅವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಯುವಕರ ಪ್ರತಿಭಟನೆಗೆ ಕೇಂದ್ರ ಸರ್ಕಾರ ಧ್ವನಿಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
"ಜೀವನ ಕೆಲವೊಮ್ಮೆ ವಿಚಿತ್ರವಾಗಿ ಪೂರ್ಣ ವೃತ್ತವನ್ನು ಸುತ್ತುತ್ತದೆ. 1997ರಲ್ಲಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಧ್ವನಿ ಎತ್ತಿದ್ದವರು, ಇಂದು ಅದೇ ರೀತಿಯ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ಪ್ರತಿಭಟನೆಗಳನ್ನು ಎದುರಿಸುತ್ತಿದ್ದಾರೆ. ಇತಿಹಾಸ ಯಾವಾಗಲೂ ಕಠಿಣ ಪ್ರಶ್ನೆಗಳನ್ನೇ ಕೇಳುತ್ತದೆ." #NEET ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಕೇಂದ್ರ ಶಿಕ್ಷಣ ಧರ್ಮೇಂದ್ರ ಪ್ರಧಾನ್ ಅವರ ರಾಜಕೀಯ ನೀತಿಯನ್ನು ಪ್ರಶ್ನೆ ಮಾಡಿದ್ದಾರೆ.
"ಯುವಕರ ಜ್ವಲಂತ ಚಿಂತನೆ ಮತ್ತು ಉತ್ಸಾಹವೇ ಭೂಮಿಯ ಮೇಲೆ, ಭೂಮಿಯ ಮೇಲಿರುವ ಆಕಾಶದಲ್ಲಾಗಲಿ, ಭೂಮಿಯ ಅಡಿಯಲ್ಲಿ ಇರುವ ಯಾವುದೇ ಸಂಪನ್ಮೂಲಕ್ಕಿಂತಲೂ ಅತ್ಯಂತ ಶಕ್ತಿಶಾಲಿ ಸಂಪನ್ಮೂಲವಾಗಿದೆ." ಎನ್ನುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕೋಟ್ ಅನ್ನು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಮುಂದುವರಿದು ಸೋಶಿಯಲ್ ಮೀಡಿಯಾ ಎಕ್ಸ್ ಮಾಲಿಕ ಹಾಗೂ ಉದ್ಯಮಿ ಎಲಾನ್ ಮಸ್ಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಮಕ್ಕಳೇ ಭವಿಷ್ಯ ಎನ್ನುವ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಸಾಥ್
ಕಳೆದ ಕೆಲವು ದಿನಗಳಿಂದ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸಿಜೆಪಿ ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ನಟ ಸಲ್ಮಾನ್ ಖಾನ್ ಪ್ರತಿಭಟನೆಗಳ ಕುರಿತು ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ತುಂಬಾ ಶಾಂತಿಯುತ ಚಳುವಳಿಯಾಗಿತ್ತು, ಅದು ಹಿಂಸಾತ್ಮಕ ತಿರುವು ಪಡೆಯುವ ಪರಿಸ್ಥಿತಿ ಬಂದದ್ದು ನನಗೆ ತುಂಬಾ ದುಃಖವಾಗಿದೆ. ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ನನ್ನ ಹೃದಯ ಮಿಡಿಯುತ್ತದೆ. ಪ್ರಶ್ನೆಪತ್ರಿಕೆ ಸೋರಿಕೆ ಬಹಳ ಗಂಭೀರ ವಿಷಯವಾಗಿದೆ, ಮತ್ತು ನಮ್ಮ ದೇಶದ ಮಕ್ಕಳು ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ಒಗ್ಗೂಡಿದ್ದಾರೆ ಮತ್ತು ಅವರ ಪೋಷಕರು ಅವರನ್ನು ಬೆಂಬಲಿಸಿದ್ದಾರೆಂದು ತಿಳಿದು ನನಗೆ ಸಂತೋಷವಾಗಿದೆ.
ಕಷ್ಟಪಟ್ಟು ಓದಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಾಗೂ ಉತ್ತಮ, ಶಿಕ್ಷಣಯುತ ಭಾರತವನ್ನು ಕಟ್ಟಲು ಈ ಯುವಕರು ತೋರಿರುವ ಸಮರ್ಪಣೆ, ಪ್ರಾಮಾಣಿಕತೆ ಮತ್ತು ಉತ್ಸಾಹವನ್ನು ನಾನು ಹೃತ್ಪೂರ್ವಕವಾಗಿ ಮೆಚ್ಚುತ್ತೇನೆ. ಈ ಹೋರಾಟ ಮತ್ತು ಪ್ರತಿಭಟನೆ ಸರಿಯಾದ ದಾರಿಯಲ್ಲಿದೆ. ವಿದ್ಯಾರ್ಥಿಗಳು ಇದನ್ನು ಸಂಪೂರ್ಣ ಶಾಂತಿಯುತವಾಗಿ ನಡೆಸಿರುವುದು ಅವರ ಧೈರ್ಯ ಮತ್ತು ಜವಾಬ್ದಾರಿಯುತ ಮನೋಭಾವವನ್ನು ತೋರಿಸುತ್ತದೆ. ಶಿಕ್ಷಣದ ಮೇಲಿನ ಇಂತಹ ಬದ್ಧತೆ ಮತ್ತು ಉತ್ಸಾಹ ಹೊಂದಿರುವ ಈ ಪೀಳಿಗೆಯೇ ಭಾರತಕ್ಕೆ ಹೆಮ್ಮೆ ತರುವ ಶಕ್ತಿಯಾಗಿದೆ ಎಂದೂ ನಟ ಸಲ್ಮಾನ್ ಖಾನ್ ಅವರು ಹೇಳಿದ್ದಾರೆ.


Click it and Unblock the Notifications
