J&K Election: ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ಅತಿ ಹೆಚ್ಚು ಅಂತರದಲ್ಲಿ ಗೆದ್ದ ಅಭ್ಯರ್ಥಿಗಳ ಪಟ್ಟಿ
ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು, ಮಂಗಳವಾರ ಫಲಿತಾಂಶ ಕೂಡ ಹೊರಬಿದ್ದಿದೆ. 90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ 49 ಸ್ಥಾನಗಳನ್ನು ಗೆದ್ದಿರುವ ನ್ಯಾಷನಲ್ ಕಾನ್ಫರೆನ್ಸ್ (NC) ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (INC) ಸರ್ಕಾರವನ್ನು ರಚನೆ ಮಾಡಲು ಸಜ್ಜಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಬಳಿಕ ಮೊದಲ ಬಾರಿಗೆ ಇಲ್ಲಿ ಸರ್ಕಾರ ರಚನೆಯಾಗುತ್ತಿದೆ.
ಐದು ವರ್ಷಗಳ ಹಿಮದೆ 370ನೇ ವಿಧಿಯನ್ನು ರದ್ದು ಮಾಡಿದ ಬಳಿಕ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ನಡದಿದೆ. ನ್ಯಾಷನಲ್ ಕಾನ್ಫರೆನ್ಸ್ 42 ಸ್ಥಾನಗಳನ್ನು ಗೆಲುವು ಸಾಧಿಸಿತು. 2014ರಲ್ಲಿ 25 ಸ್ಥಾನಗಳಲ್ಲಿ ಗೆಲುವ ಸಾಧಿಸಿದ್ದ ಬಿಜೆಪಿ ಈ ಬಾರಿ 29 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಲವನ್ನು ಹೆಚ್ಚಿಸಿಕೊಂಡಿದೆ.

ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದ್ರ ರೈನ ನೌಶೆರಾ ಕ್ಷೇತ್ರದಲ್ಲಿ ಸೋತು ನಿರಾಸೆ ಅನುಭವಿಸಿದರೂ, ಬಿಜೆಪಿ 2014ರ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಮತಗಳನ್ನು ಪಡೆದಿದೆ. 2014ರಲ್ಲಿ ಬಿಜೆಪಿ ಪಡೆದ ಮತಗಳ ಪ್ರಮಾಣ 23% ಇದ್ದರೆ ಈ ಬಾರಿ 25.64% ರಷ್ಟಕ್ಕೆ ಏರಿಕೆಯಾಗಿದೆ.
ಹೆಚ್ಚು ಅಂತರದಲ್ಲಿ ಗೆದ್ದಿದ್ಯಾರು?
ಹಲವು ಅಭ್ಯರ್ಥಿಗಳು ಅತಿ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸಿದರೆ ಇನ್ನೂ ಕೆಲವು ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದರು. ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ನಗ್ರೋಟಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೆಂದರ್ ರಾಣಾ 30,472 ಮತಗಳಿಂದ ಗೆಲುವು ಸಾಧಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್ 29,728 ಮತಗಳ ಅಂತರದಿಂದ ಗೆಲುವ ಸಾಧಿಸಿದರು. ಸಾಂಬಾ ಕ್ಷೇತ್ರದಲ್ಲಿ ಸುರ್ಜಿತ್ ಸಿಂಗ್ ಸ್ಲಾಥಿಯಾ 29,481 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಮುಖ್ಯವಾಗಿ ಐದು ಬಿಜೆಪಿ ಅಭ್ಯರ್ಥಿಗಳು 20,000ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಎನ್‌ಸಿ ಪಕ್ಷದ ಇಬ್ಬರು ಅಭ್ಯರ್ಥಿಗಳು ಮಾತ್ರ 20,000ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದಾರೆ.
ಕಡಿಮೆ ಅಂತರದಲ್ಲಿ ಗೆದ್ದವರು
ಟ್ರಾಲ್ ವಿಧಾನಸಭಾ ಕ್ಷೇತ್ರದಲ್ಲಿ ಪಿಡಿಪಿಯ ರಫೀಕ್ ಅಹ್ಮದ್ ನಾಯ್ಕ್ ಕೇವಲ 460 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಕಿಶ್ತ್ವಾರ್‌ನಲ್ಲಿ ಬಿಜೆಪಿಯ ಶಗುನ್ ಪರಿಹಾರ್ ಎನ್‌ಸಿಯ ಸಜಾದ್ ಕಿಚ್‌ಲೂ ವಿರುದ್ಧ 521 ಮತಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು.
ಎನ್‌ಸಿಯ ಜಾವೈದ್ ರಿಯಾಜ್ ಅವರು ಪೀಪಲ್ಸ್ ಕಾನ್ಫರೆನ್ಸ್ ಅಭ್ಯರ್ಥಿ ಇಮ್ರಾನ್ ಅನ್ಸಾರಿ ವಿರುದ್ಧ ಕೇವಲ 603 ಮತಗಳಿಂದ ಗೆಲುವು ಸಾಧಿಸಿದರು. ಸ್ವತಂತ್ರ ಅಭ್ಯರ್ಥಿ ಪ್ಯಾರೆ ಲಾಲ್ ಶರ್ಮಾ, ಮಾಜಿ ಸಚಿವ ಜಿ ಎಂ ಸರೂರಿ ವಿರುದ್ಧ 643 ಮತಗಳಿಂದ ಗೆಲುವ ಸಾಧಿಸಿದರು. ಹಂದ್ವಾರ ಕ್ಷೇತ್ರದಲ್ಲಿ ಸಜಾದಿ ಗನಿ ಲೋನ್ 662 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಜಮ್ಮು-ಕಾಶ್ಮೀರದ ಮುಂದಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರದ ಚುನಾವಣಾ ಫಲಿತಾಂಶ ಹೊರಬಂದಿದ್ದು, ನ್ಯಾಷನಲ್ ಕಾನ್ಫಿರನ್ಸ್‌ನ ಯುವ ನಾಯಕ ಒಮರ್ ಅಬ್ದುಲ್ಲಾ ಅವರು ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಒಮರ್ ಅಬ್ದುಲ್ಲಾ ತಂದೆ, ಕಾಶ್ಮೀರದ ಮಾಜಿ ಸಿಎಂ ಫಾರುಖ್ ಅಬ್ದುಲ್ಲಾ ಅವರು, ಜಮ್ಮು-ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಅವರು ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.












Click it and Unblock the Notifications