ಜಮ್ಮು ಮತ್ತು ಕಾಶ್ಮೀರದಲ್ಲಿ ಸದ್ಯಕ್ಕೆ ವಿಧಾನಸಭೆ ಚುನಾವಣೆ ಇಲ್ಲ!
ನವದೆಹಲಿ, ಜೂನ್ 20 : ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜೊತೆಗಿ ಮೈತ್ರಿಗೆ ಬಿಜೆಪಿ ವಿದಾಯ ಹೇಳಿದ್ದು, ಸರ್ಕಾರ ಪತನವಾಗಿದೆ. ಆದರೆ, 2019ರ ಲೋಕಸಭೆ ಚುನಾವಣೆಗೂ ಮೊದಲೇ ಕಣಿವೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ ಇದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ತಿಂಗಳ ಕಾಲ ರಾಷ್ಟ್ರಪತಿ ಆಡಳಿತ ಜಾರಿಗೆ ಬರುವ ಸಾಧ್ಯತೆ ಇದೆ. 2018ರ ಅಂತ್ಯದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿ ಎಂದು ಬಿಜೆಪಿ ನಾಯಕರು ಸಹ ಬಯಸುತ್ತಿದ್ದಾರೆ.
ರಾಜ್ಯಪಾಲರು ರಾಷ್ಟ್ರಪತಿಗಳ ಆಳ್ವಿಕೆ ಶಿಫಾರಸು ಮಾಡಿ ಅದು ಜಾರಿಗೆ ಬಂದರೆ ಡಿಸೆಂಬರ್ 19 ಅಥವ 20ರ ಹೊತ್ತಿಗೆ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಳ್ಳುತ್ತದೆ. ಆ ಸಮಯದಲ್ಲಿ ಲೋಕಸಭೆಯ ಚಳಿಗಾಲದ ಅಧಿವೇಶನವೂ ಅಂತ್ಯಗೊಳ್ಳಲಿದ್ದು, ನಂತರ ಚುನಾವಣೆ ನಡೆಯಲಿ ಎಂದು ಬಿಜೆಪಿಯ ವಾದವಾಗಿದೆ.

ಒಂದು ದೇಶ ಒಂದು ಚುನಾವಣೆ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ರಾಷ್ಟ್ರಪತಿ ಆಳ್ವಿಕೆ ಹೇರಿ ಜಮ್ಮು ಮತ್ತು ಕಾಶ್ಮೀರದ ಚುನಾವಣೆಯನ್ನು ಮುಂದೂಡಿ, ಲೋಕಸಭೆ ಚುನಾವಣೆ ಸಮಯದಲ್ಲಿಯೇ ವಿಧಾನಸಭೆ ಚುನಾವಣೆ ನಡೆಸುವ ಚಿಂತನೆಯೂ ಬಿಜೆಪಿ ಮುಂದಿದೆ.
87 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಪಿಡಿಪಿ 28, ಬಿಜೆಪಿ 25, ಕಾಂಗ್ರೆಸ್ 12, ಎನ್‌ಸಿ 15, ಇತರರು 7 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಮಾಡಿಕೊಂಡು ರಚನೆ ಮಾಡಿದ್ದ ಸರ್ಕಾರ ಪತನವಾಗಿದೆ.
ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ಪಿಡಿಪಿ ಜೊತೆಯಾಗಿ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ಎನ್‌ಸಿ ಸಹ ಸರ್ಕಾರ ರಚನೆ ಭಾಗವಾಗುವುದಿಲ್ಲ ಎಂದು ಈಗಾಗಲೇ ಘೋಷಣೆ ಮಾಡಿದೆ. ಆದ್ದರಿಂದ, ರಾಜ್ಯದಲ್ಲಿ ರಾಷ್ಟ್ರಪತಿಗಳ ಆಳ್ವಿಕೆ ಜಾರಿಯಾಗುವುದು ಖಚಿತವಾಗಿದೆ.












Click it and Unblock the Notifications