Jammu and Kashmir: ದಶಕಗಳ ಬಳಿಕ ವಿಧಾನಸಭಾ ಚುನಾವಣೆಗೆ ಸಜ್ಜಾದ ಜಮ್ಮು & ಕಾಶ್ಮೀರ; 24 ಕ್ಷೇತ್ರಗಳಲ್ಲಿ ನಾಳೆ ಮತದಾನ
ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ನಾಳೆ (ಬುಧವಾರ ) 1ನೇ ಹಂತದ ಮತದಾನಕ್ಕೆ ವೇದಿಕೆ ಸಿದ್ಧವಾಗಿದೆ. ಏಳು ಜಿಲ್ಲೆಗಳ 24 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು, ಭಾರಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. 90 ಸ್ವತಂತ್ರ ಅಭ್ಯರ್ಥಿಗಳು ಸೇರಿ 219 ಅಭ್ಯರ್ಥಿಗಳ ಭವಿಷ್ಯವನ್ನು 23 ಲಕ್ಷಕ್ಕೂ ಹೆಚ್ಚು ಮತದಾರರು ನಿರ್ಧರಿಸಲಿದ್ದಾರೆ.
2019ರ ಆಗಸ್ಟ್ ತಿಂಗಳಿನಲ್ಲಿ ಆರ್ಟಿಕಲ್ 370 ರದ್ದಾದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆಯಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ಮೊದಲ ಹಂತದ ಚುನಾವಣೆಯಲ್ಲಿ 11,76,462 ಪುರುಷರು, 11,51,058 ಮಹಿಳಾ ಮತದಾರರು ಮತ್ತು 60 ತೃತೀಯಲಿಂಗ ಮತದಾರರನ್ನು ಸೇರಿ ಒಟ್ಟು 23,27,580 ಮತದಾರರು ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿದ್ದಾರೆ. ಇದರಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ 15,774 ವೃದ್ಧ ಮತದಾರರು ಇದ್ದರೆ, 28,309 ವಿಕಲಚೇತನರು ಇದ್ದಾರೆ. 18-19 ವರ್ಷದೊಳಗಿನ 1.23 ಯುವ ಮತದಾರರು ಇದ್ದಾರೆ.
ಸುಗಮ ಮತದಾನ ನಡೆಸಲು ಸಜ್ಜು
24 ವಿಧಾನಸಭಾ ಕ್ಷೇತ್ರಗಳ 3,276 ಮತಗಟ್ಟೆಗಳಲ್ಲಿ ಒಟ್ಟು 14,000 ಮತಗಟ್ಟೆ ಸಿಬ್ಬಂದಿ ಸುಗಮ ಮತದಾನ ನಡೆಯಲು ಕೆಲಸ ಮಾಡಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ವ್ಯಾಪಕವಾದ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮತದಾರರು ಯಾವುದೇ ಅಂಜಿಕೆಯಿಲ್ಲದೆ ಮತಗಟ್ಟೆ ಆಗಮಿಸಿ ಹಕ್ಕು ಚಲಾಯಿಸಬಹುದು ಎಂದು ಪೊಲೀಸ್ ಮಹಾನಿರೀಕ್ಷಕ ವಿ.ಕೆ. ಬಿರ್ಡಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಭದ್ರತೆಗಾಗಿ ಕೇಂದ್ರೀಯ ಸಶಸ್ತ ಅರೆ ಸೈನಿಕ ಪಡೆಗಳು, ಜಮ್ಮು ಮತ್ತು ಕಾಶ್ಮೀರ ಸಶಸ್ತ್ರ ಪೊಲೀಸ್ ಸಿಬ್ಬಂದಿ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ರ ಬಹು ಹಂತದ ಪಡೆಗಳು ಭದ್ರತೆಯನ್ನು ಒದಗಿಸಲಿದ್ದಾರೆ.
ಸಿಪಿಐ (ಎಂ) ನ ಮೊಹಮ್ಮದ್ ಯೂಸುಫ್ ತರಿಗಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್, ನ್ಯಾಷನಲ್ ಕಾನ್ಫರೆನ್ಸ್‌ನ ಸಕಿನಾ ಇಟೂ, ಪಿಡಿಪಿಯ ಸರ್ತಾಜ್ ಮದ್ನಿ, ಅಬ್ದುಲ್ ರೆಹಮಾನ್ ವೀರಿ. ಪಿಡಿಪಿಯ ಇಲ್ತಿಜಾ ಮುಫ್ತಿ, ಎನ್‌ಸಿಯ ಬಶೀರ್ ಅಹ್ಮದ್ ವೀರಿ, ಬಿಜೆಪಿಯ ಸೋಫಿ ಮೊಹಮ್ಮದ್ ಯೂಸುಫ್ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.











Click it and Unblock the Notifications