Jailbreak: ಸಿನಿಮೀಯ ರೀತಿಯಲ್ಲಿ ಸಿಮಿ ಉಗ್ರರು ಪರಾರಿ

ಭಯೋತ್ಪಾದನೆ ಸಂಘಟನೆಯಾದ SIMIಗೆ ಸೇರಿದ ಏಳು ಮಂದಿ ಮಧ್ಯಪ್ರದೇಶದ ಖಂಡವಾ ಜೈಲಿನಲ್ಲಿ ಸಿನಿಮೀಯ ರೀತಿಯಲ್ಲಿ ಸಿಮಿ ಉಗ್ರರು ಜೈಲ್ ಬ್ರೇಕ್ ಮಾಡಿ, ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಸಮಾಧಾನಕರ ಸಂಗತಿಯೆಂದರೆ, ತಕ್ಷಣವೇ ಪೊಲೀಸರು ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಉಳಿದ 6 ಮಂದಿ ಕೈತಪ್ಪಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಖಂಡವಾ ಮತ್ತು ಇಂದೋರಿನಲ್ಲಿ High Alert ಘೋಷಿಸಲಾಗಿದೆ. ಈ ಹಿಂದೆ ಹಲವಾರು ಬಾರಿ ನಿಷೇಧಕ್ಕೆ ಒಳಗಾಗಿರುವ Students Islamic Movement of India (SIMI) ಸಂಘಟನೆಯ ಉಗ್ರರ ಪರಾರಿ ಕೃತ್ಯದಲ್ಲಿ ಜೈಲು ಅಧಿಕಾರಿಗಳು ಕೈವಾಡವಿರಬಹುದು ಎಂಬ ಆರೋಪಗಳು ಕೇಳಿಬಂದಿದ್ದು, ವ್ಯಾಪಕ ಟೀಕೆಗಳು ಕೇಳಿಬಂದಿವೆ.
ಬೆಳಗಿನ ಜಾವ Jailbreak ಹೇಗಾಯ್ತು?:
ಬಂಧಿತ ಉಗ್ರರು ತಾವಿರುವ ಖಂಡವಾ ಜೈಲಿನೊಳಕ್ಕೆ ಮೊದಲೇ ಚಾಕುವನ್ನು ತರಿಸಿಕೊಂಡಿದ್ದರು. ಜೈಲು ಕೋಣೆಯಿಂದ ಹೊರಬಂದವರೇ ಗಸ್ತಿನಲ್ಲಿದ್ದ ಇಬ್ಬರು ಪೇದೆಗಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಅವರ ಬಳಿಯಿದ್ದ 2 ಸರ್ವಿಸ್ ರೈಫಲ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ನಂತರ ಬಾತ್ ರೂಮ್ ಕೊಠಡಿಯ ಗೋಡೆ ಹಾರಿ ಮಂಗಳವಾರ ಬೆಳಗಿನ ಜಾವ 3 ಗಂಟೆಯಲ್ಲಿ ಪರಾರಿಯಾಗಿದ್ದಾರೆ. ಆದರೆ ಸೈಕೋ ಜೈಶಂಕರನಂತೆ ಒಬ್ಬನಲ್ಲ, ಒಟ್ಟು 7 ಮಂದಿ ಹೀಗೆ ಜೈಲು ಹಾರಿಕೊಂಡು ಹೋಗುತ್ತಿರುವಾಗ ಇತರೆ ಪೊಲೀಸರು ಆ ಅವೇಳೆಯಲ್ಲಿ ಕಡ್ಲೆಪುರಿ ತಿನ್ನುತ್ತಿದ್ದರಾ? ಎಂದು ಜನ ಕೇಳುವಂತಾಗಿದೆ.
ಇತ್ತೀಚೆಗಷ್ಟೇ ಮುಂಬೈನಲ್ಲಿ ಹಾಡಹಗಲೇ, ಹತ್ತಾರು ಪೊಲೀಸರ ಮಧ್ಯೆ ಬಂಧಿಯಾಗಿದ್ದ ಉಗ್ರ ಅವರಿಗೆಲ್ಲಾ ಚಳ್ಳೆಹಣ್ಣು ತಿನ್ನಿಸಿ ಕೋರ್ಟ್ ಆವರಣದಲ್ಲಿ ಮೂರನೆಯ ಮಹಡಿಯಿಂದ ಪರಾರಿಯಾಗಿದ್ದು, ಇನ್ನೂ ಅವನ ಬಗ್ಗೆ ಸುಳಿವು ಸಿಕ್ಕಿಲ್ಲ. ಖಂಡವಾದಲ್ಲಿ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ಪ್ರಕರಣ ಮತ್ತು ATS ಪೊಲೀಸ್ ಅಧಿಕಾರಿ ಸೀತಾರಾಂ ಯಾದವ್ ಸೇರಿದಂತೆ ಮೂವರನ್ನು ಹತ್ಯೆ ಮಾಡಿದ ಗುರುತರ ಆರೋಪಗಳು ಈ ಸಪ್ತ ಉಗ್ರರ ಮೇಲಿದೆ.












Click it and Unblock the Notifications