ನೀವು ಬಳಸುವ ಬೆಲ್ಲ ಕಲಬೆರಕೆಯಾಗಿದೆಯೇ? ಸರಳ ವಿಧಾನವನ್ನು ಅನುಸರಿಸುವ ಮೂಲಕ ಹೀಗೆ ಕಂಡು ಹಿಡಿಯಿರಿ
ಬೆಲ್ಲವು ಪ್ರತೀ ಮನೆಯಲ್ಲಿ ಅಡುಗೆಗೆ ಬಳಸುವ ಸಾಮಗ್ರಿ. ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ತಯಾರಿಸುವಾಗ ಬೆಲ್ಲವನ್ನು ಬಳಸಲಾಗುತ್ತದೆ. ಹಬ್ಬದ ಭಕ್ಷ್ಯಗಳನ್ನು ತಯಾರಿಸುವಾಗಲೂ ಬೆಲ್ಲದ ಬಳಕೆಯಾಗುತ್ತದೆ. ಇನ್ನು ಆಯುರ್ವೇದ ಪಾನೀಯಗಳಲ್ಲಿಯಂತೂ ಬೆಲ್ಲ ಇದ್ದೇ ಇರುತ್ತದೆ. ಅನೇಕ ಮಂದಿ ಸಕ್ಕರೆಗೆ ಪರ್ಯಾಯವಾಗಿ ಬೆಲ್ಲವನ್ನು ಬಳಸುತ್ತಾರೆ. ಸಕ್ಕರೆಗೆ ಹೋಲಿಸಿದರೆ ಬೆಲ್ಲ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಕೆಲವರ ವಾದ.
ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಿಗುವ ಬೆಲ್ಲದಲ್ಲಿಯೂ ಕಲಬೆರಕೆಯ ವಾಸನೆ ಬಡಿದಿದೆ. ಹಾಗಾಗಿ ಇದೀಗ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಗ್ರಾಹಕರು ಬಳಸುವ ಬೆಲ್ಲ ಶುದ್ಧವಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ ಎನ್ನುವುದನ್ನು ವಿವರಿಸಿದೆ. ಇದಕ್ಕೆ ಸಹಾಯವಾಗುವ ನಿಟಿನಲ್ಲಿ ಮನೆಯಲ್ಲಿಯೇ ಮಾಡಬಹುದಾದ ಸರಳ ಪರೀಕ್ಷೆತ ಹಂತಗಳನ್ನು ವಿವರಿಸಿದೆ.

ಬೆಲ್ಲಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಇನ್ನು ಕೆಲವು ಋತುವಿನಲ್ಲಿ ಬೆಲ್ಲದ ಬಳಕೆ ಅಧಿಕವಾಗಿರುತ್ತದೆ. ಅದರ ತೂಕ, ಬಣ್ಣ ಅಥವಾ ವಿನ್ಯಾಸವನ್ನು ಹೆಚ್ಚಿಸಲು ಕೆಲವೊಮ್ಮೆ ಅದನ್ನು ಅಗ್ಗದ ವಸ್ತುಗಳೊಂದಿಗೆ ಬೆರೆಸಲಾಗುತ್ತದೆ. ಸಾಮಾನ್ಯವಾಗಿ ಬೆಲ್ಲದ ಜೊತೆಗೆ ಸಕ್ಕರೆ, ಸೀಮೆಸುಣ್ಣದ ಪುಡಿ ಮತ್ತು ಅಡಿಗೆ ಸೋಡಾವನ್ನು ಬೆರೆಸಲಾಗುತ್ತದೆ.
ಬೆಲ್ಲದ ಬ್ಲಾಕ್‌ಗಳನ್ನು ಮೃದುವಾಗಿರಿಸಲು ಮತ್ತು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು ಅಡಿಗೆ ಸೋಡಾವನ್ನು ಬಳಸಲಾಗುತ್ತದೆ. ಇದು ಬೆಲ್ಲದ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ.
ಬೆಲ್ಲದಲ್ಲಿರುವ ಅಡಿಗೆ ಸೋಡಾವನ್ನು ಪತ್ತೆ ಮಾಡಲು FSSAI ನ ಸರಳ ಮನೆ ಪರೀಕ್ಷೆ:
ಬೆಲ್ಲದಲ್ಲಿ ಅಡಿಗೆ ಸೋಡಾವನ್ನು ಬೆರೆಸಲಾಗಿದೆಯೇ ಎನ್ನುವುದನ್ನು ಸುಲಭವಾಗಿ ಕಂಡು ಹಿಡಿಯುವುದು ಹೇಗೆ ಎನ್ನುವುದನ್ನು FSSAI ತನ್ನ X ಖಾತೆಯಲ್ಲಿ ಶೇರ್ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋವನ್ನು ಹಂಚಿಕೊಂಡಿದೆ.
ಮನೆಯಲ್ಲಿ ಪರೀಕ್ಷೆ ಮಾಡುವ ಸುಲಭ ವಿಧಾನ
* ಒಂದು ಸಣ್ಣ ಗ್ಲಾಸ್ ಅಥವಾ ಟೆಸ್ಟ್ ಟ್ಯೂಬ್‌ನಲ್ಲಿ ಕಾಲು ಚಮಚ ಪುಡಿಮಾಡಿದ ಬೆಲ್ಲವನ್ನು ತೆಗೆದುಕೊಳ್ಳಿ.
* ಇದಕ್ಕೆ ಸರಿಸುಮಾರು 3 ಮಿಲಿ ಹೈಡ್ರೋಕ್ಲೋರಿಕ್ ಆಮ್ಲ (HCL) ಸೇರಿಸಿ.
* ಇದು ಬೆಲ್ಲದೊಂದಿಗೆ ಹೇಗೆ ರಿಯಾಕ್ಟ್ ಮಾಡುತ್ತದೆ ಎನ್ನುವುದನ್ನು ಎಚ್ಚರಿಕೆಯಿಂದ ಗಮನಿಸಿ.
ಫಲಿತಾಂಶಗಳು ಏನನ್ನು ಸೂಚಿಸುತ್ತವೆ?
ಈ ಮಿಶ್ರಣದಲ್ಲಿ ಗುಳ್ಳೆಗಳು ಎದ್ದರೆ ಅದು ಶುದ್ದ ಬೆಲ್ಲ ಅಲ್ಲ ಎನ್ನುವುದಲ್ಲಿ ಸಂದೇಹ ಬೇಡ. ಒಂದು ವೇಳೆ ಗುಳ್ಳೆಗಳು ಕಾಣಿಸದಿದ್ದರೆ ಅದು ಶುದ್ದ ಬೆಲ್ಲ.
ಗುಳ್ಳೆಗಳು ಏಕೆ ರೂಪುಗೊಳ್ಳುತ್ತವೆ?
ಬೆಲ್ಲದಲ್ಲಿ ಸೋಡಿಯಂ ಬೈಕಾರ್ಬನೇಟ್ ಇದ್ದರೆ, ಅದು ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಪ್ರತಿಕ್ರಿಯಿಸಿ ಇಂಗಾಲದ ಡೈಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಈ ರಾಸಾಯನಿಕ ಕ್ರಿಯೆಯು ವಿಜಿಬಲ್ ಫೀಜಿಂಗ್ ಅಥವಾ ಗುಳ್ಳೆಗಳನ್ನು ಉಂಟುಮಾಡುತ್ತದೆ. ಇದು ಕಲಬೆರಕೆಯ ಸ್ಪಷ್ಟ ಸಂಕೇತವಾಗಿದೆ.
ಕಲಬೆರಕೆ ಬೆಲ್ಲ ಹಾನಿಕಾರಕವೇ?
ಸಣ್ಣ ಪ್ರಮಾಣದಲ್ಲಿ ಅಡುಗೆ ಸೋಡಾ ಸೇವಿಸುವುದರಿಂದ ತಕ್ಷಣಕ್ಕೆ ಹಾನಿಕಾರಕ ಅನಿಸದಿರಬಹುದು. ಆದರೂ, ಅದು ಬೆಲ್ಲದ ನೈಸರ್ಗಿಕ ಸಂಯೋಜನೆಯನ್ನು ಬದಲಾಯಿಸುತ್ತದೆ. ಕಾಲ ಕಳೆದಂತೆ ಈ ಕಲಬೆರಕೆ ಬೆಲ್ಲವನ್ನು ಸೇವಿಸುವುದರಿಂದ ಬೆಲ್ಲ ಸೇವನೆಯಿಂದ ದೇಹಕ್ಕೆ ಸಿಗುವ ಪ್ರಯೋಜನಗಳನ್ನು ಸಿಗದೇ ಹೋಗಬಹುದು. ಜೀರ್ಣಕ್ರಿಯೆ, ಎನರ್ಜಿ ಹೆಚ್ಚಿಸುವುದು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮುಂತಾದ ಗುಣಗಳನ್ನು ಬೆಲ್ಲ ಕಳೆದುಕೊಳ್ಳಬಹುದು. ಇದು ರುಚಿ, ವಿನ್ಯಾಸ ಮತ್ತು ಪೌಷ್ಟಿಕಾಂಶದ ಮೌಲ್ಯದ ಮೇಲೂ ಪರಿಣಾಮ ಬೀರಬಹುದು.
FSSAI ಮಾಡುವ ಶಿಫಾರಸು ಏನು?
ಮನೆ ಪರೀಕ್ಷೆಗಳು ಮೂಲಭೂತ ಕಲಬೆರಕೆಯನ್ನು ಪತ್ತೆಹಚ್ಚಲು ಸಹಾಯ ಮಾಡಬಹುದಾದರೂ, ಅವು ಪ್ರಯೋಗಾಲಯ ವಿಶ್ಲೇಷಣೆಗೆ ಪರ್ಯಾಯವಲ್ಲ ಎನ್ನುವುದನ್ನು FSSAI ಒತ್ತಿಹೇಳುತ್ತದೆ. ಪ್ರಮಾಣೀಕೃತ ಪ್ರಯೋಗಾಲಯಗಳು ಮಾತ್ರ ಬೆಲ್ಲದ ಶುದ್ಧತೆಯನ್ನು ನಿರ್ಣಾಯಕವಾಗಿ ನಿರ್ಧರಿಸಬಹುದು. ಆದರೆ ಕೆಲವು ಸರಳ ಜಾಗೃತಿ ಪರೀಕ್ಷೆಗಳು ಗ್ರಾಹಕರಿಗೆ ಹೆಚ್ಚು ಮಾಹಿತಿಯುಕ್ತ ಖರೀದಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಬಹುದು.
ಕಲಬೆರಕೆ ಬೆಲ್ಲ ಖರೀದಿಸುವುದನ್ನು ತಪ್ಪಿಸುವುದು ಹೇಗೆ?
ಪ್ಯಾಕ್ ಮಾಡಿದ ಬೆಲ್ಲದ ಮೇಲೆ ಮಾನ್ಯವಾದ FSSAI ಪರವಾನಗಿ ಸಂಖ್ಯೆಯನ್ನು ಪರಿಶೀಲಿಸಿ.
ತುಂಬಾ ಪ್ರಕಾಶಮಾನವಾದ ಅಥವಾ ಹೊಳೆಯುವ ಬೆಲ್ಲದ ಬ್ಲಾಕ್‌ಗಳನ್ನು ಖರೀದಿಸಬೇಡಿ.
ವಿಶ್ವಾಸಾರ್ಹ ಬ್ರ್ಯಾಂಡ್‌ಗಳು ಅಥವಾ ವಿಶ್ವಾಸಾರ್ಹ ಸ್ಥಳೀಯ ಮಾರಾಟಗಾರರಿಂದಲೇ ಬೆಲ್ಲ ಖರೀದಿಸಿ.
ಅಸಾಮಾನ್ಯವಾಗಿ ಕಡಿಮೆ ಬೆಲೆಗಳ ಬೆಲ್ಲ ಖರೀದಿ ಮಾಡಬೇಡಿ.
ಶಂಕಿತ ಕಲಬೆರಕೆಯ ರಿಪೋರ್ಟ್ ಮಾಡುವುದು ಹೇಗೆ?
ಬೆಲ್ಲ ಕಲಬೆರಕೆಯಾಗಿದೆ ಎನ್ನುವ ಅನುಮಾನ ಬಂದರೆ ಈ ಮೂಲಕ ರಿಪೋರ್ಟ್ ಮಾಡಬಹುದು:
ಅಧಿಕೃತ FSSAI ಆನ್‌ಲೈನ್ ಪೋರ್ಟಲ್ ಮೂಲಕ, FSSAI ಮೊಬೈಲ್ ಅಪ್ಲಿಕೇಶನ್ ಮೂಲಕ ಮತ್ತು ಸ್ಥಳೀಯ ಆಹಾರ ಸುರಕ್ಷತಾ ಇಲಾಖೆಗೆ ದೂರುಗಳನ್ನು ಸಲ್ಲಿಸುವುದರಿಂದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲು ಸಹಾಯವಾಗುತ್ತದೆ. ಆಹಾರ ಸುರಕ್ಷತಾ ಮಾನದಂಡಗಳನ್ನು ಕಾಯ್ದುಕೊಳ್ಳಲು ಸಹಾಯವಾಗುತ್ತದೆ.


Click it and Unblock the Notifications
