ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋರ್ಟ್ ರದ್ದು ಮಾಡಿದರೂ ಸೆಕ್ಷನ್ 66ಎ ಬಳಕೆ; ಸುಪ್ರೀಂ ಛೀಮಾರಿ

|
Google Oneindia Kannada News

ನವದೆಹಲಿ, ಸೆ. 7: ಐಟಿ ಕಾಯ್ದೆಯ ಸೆಕ್ಷನ್ 66ಎ ಅನ್ನು ಏಳು ವರ್ಷಗಳ ಹಿಂದೆಯೇ ರದ್ದು ಮಾಡಲಾಗಿದ್ದರೂ ಅದರ ಅಡಿಯಲ್ಲಿ ಪ್ರಕರಣ ದಾಖಲಿಸುತ್ತಿರುವುದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಸೆಕ್ಷನ್ 66ಎ ಅಡಿಯಲ್ಲಿ ದಾಖಲಾದ ಎಲ್ಲಾ ಪ್ರಕರಣಗಳನ್ನು ಮೂರು ವಾರಗಳೊಳಗೆ ಹಿಂಪಡೆಯುವಂತೆ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನ್ಯಾಯಾಲಯ ಸೂಚಿಸಿದೆ.

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಎಂಬ ಎನ್‌ಜಿಒ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಂಗಳವಾರ(ಸೆ.6) ಈ ಮಹತ್ವದ ಆದೇಶ ಹೊರಡಿಸಿದೆ.

ಹಿಜಾಬ್ ಧರಿಸಿದರೆ ಶಿಸ್ತು ಉಲ್ಲಂಘನೆಯಾಗುವುದು ಹೇಗೆ; ಸುಪ್ರೀಂ ಹೇಳಿದ್ದೇನು?ಹಿಜಾಬ್ ಧರಿಸಿದರೆ ಶಿಸ್ತು ಉಲ್ಲಂಘನೆಯಾಗುವುದು ಹೇಗೆ; ಸುಪ್ರೀಂ ಹೇಳಿದ್ದೇನು?

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಅನ್ನು ಸುಪ್ರೀಂ ಕೋರ್ಟ್ 2015 ಮಾರ್ಚ್ 24ರಂದು ನೀಡಿದ ತೀರ್ಪಿನಲ್ಲಿ ರದ್ದು ಮಾಡಿತ್ತು. ವ್ಯಕ್ತಿಗೆ ವಾಕ್ ಸ್ವಾತಂತ್ರ್ಯ ಬಹಳ ಮುಖ್ಯ. ಆದರೆ, ಈ ಹಕ್ಕನ್ನು ಸೆಕ್ಷನ್ 66ಎ ಮೊಟುಕುಗೊಳಿಸುತ್ತದೆ ಎಂದು ಆಗ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು. ಆದರೂ ಕೂಡ ವಿವಿಧ ರಾಜ್ಯಗಳಲ್ಲಿ ಈ ಪ್ರಕರಣವನ್ನು ಈಗಲೂ ದುರ್ಬಳಕೆ ಮಾಡಿಕೊಂಡು ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿ ಪಿಯುಸಿಎಲ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, "ಈ ಕಾಯ್ದೆ ಅಂಶವನ್ನು ಅಸಿಂಧುಗೊಳಿಸಿ ಈ ನ್ಯಾಯಾಲಯ ಸ್ಪಷ್ಟವಾಗಿ ತೀರ್ಪು ನೀಡಿದ್ದರೂ ಅದರ ಅಡಿಯಲ್ಲೇ ಈಗಲೂ ಪ್ರಕರಣಗಳು ದಾಖಲಾಗುತ್ತಿರುವುದು ಗಂಭೀರ ವಿಚಾರ" ಎಂದು ಸುಪ್ರೀಂ ನ್ಯಾಯಪೀಠ ಹೇಳಿದೆ. ಮುಖ್ಯನ್ಯಾಯಮೂರ್ತಿ ಉದಯ್ ಯು ಲಲಿತ್ ಮತ್ತು ನ್ಯಾ| ಎಸ್ ರವೀಂದ್ರ ಭಟ್ ಈ ನ್ಯಾಯಪೀಠದಲ್ಲಿದ್ದಾರೆ.

ಸುಪ್ರೀಂ ಆದೇಶ

ಸುಪ್ರೀಂ ಆದೇಶ

"ಐಟಿ ಕಾಯ್ದೆ ಸೆಕ್ಷನ್ 66ಎ ಅಡಿಯಲ್ಲಿ ಈಗಲೂ ಪ್ರಕರಣ ದಾಖಲಿಸುತ್ತಿರುವ ಅಥವಾ ದಾಖಲಿಸಿರುವ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರದ ಕೌನ್ಸಲ್ ಜೋಹೆಬ್ ಹುಸೇನ್ ಅವರಿಗೆ ತಿಳಿಸಿದ್ದೇವೆ," ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

"ಕೇಂದ್ರ ಪರ ವಕೀಲರು ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿ ಸೂಕ್ತ ಮಾಹಿತಿ ಪಡೆಯಲು ಸ್ವತಂತ್ರರಿರುತ್ತಾರೆ. ಅವರಿಗೆ ರಾಜ್ಯ ಸರಕಾರಗಳನ್ನು ಪ್ರತಿನಿಧಿಸುವ ವಕೀಲರು ಸಹಾಯ ಮಾಡುತ್ತಾರೆ. ಇಡೀ ಪ್ರಕ್ರಿಯೆ ಇವತ್ತಿನಿಂದ ಮೂರು ವಾರದೊಳಗೆ ಮುಗಿಯಲಿ. ಮೂರು ವಾರಗಳ ಬಳಿಕ ಮುಂದಿನ ವಿಚಾರಣೆಯಲ್ಲಿ ಇದನ್ನು ಅವಲೋಕಿಸೋಣ" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಏನಿದು ಪ್ರಕರಣ?

ಏನಿದು ಪ್ರಕರಣ?

2015ರಲ್ಲಿ ರದ್ದಾದ ಐಟಿ ಕಾಯ್ದೆ ಸೆಕ್ಷನ್ 66ಎ ಅಡಿಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ ಎಂದು ಪಿಯುಸಿಎಲ್ ಎಂಬ ಎನ್‌ಜಿಒ ಆರೋಪಿಸಿ ಕೋರ್ಟ್ ಮೆಟ್ಟಿಲೇರಿತ್ತು. ಈ ಸೆಕ್ಷನ್ ಅಡಿಯಲ್ಲಿ ಜಾರ್ಖಂಡ್‌ನಲ್ಲಿ 40 ಪ್ರಕರಣಗಳು ಇವೆ. ಮಧ್ಯಪ್ರದೇಶದಲ್ಲಿ ಅಲ್ಲಿನ ಸರಕಾರ 145 ಪ್ರಕರಣಗಳನ್ನು ದಾಖಲಿಸಿದೆ. ಅದರಲ್ಲಿ 113 ಪ್ರಕರಣಗಳು ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇವೆ. ಈ ಅಂಶವನ್ನು ಪಿಯುಸಿಎಲ್ ಪರ ವಕೀಲ ಸಂಜಯ್ ಪಾರಿಖ್ ನ್ಯಾಯಪೀಠದ ಗಮನಕ್ಕೆ ತಂದಿದ್ದರು.

ಕಳೆದ ವರ್ಷ ಜುಲೈ 5ರಂದು ಪಿಯುಸಿಎಲ್‌ನ ಅರ್ಜಿಯನ್ನು ಗಮನಿಸಿದ ಸುಪ್ರೀಂಕೋರ್ಟ್, ತಾನು 2015ರಲ್ಲಿ ರದ್ದು ಮಾಡಿದ ಸೆಕ್ಷನ್‌ನ ಅಡಿಯಲ್ಲಿ ಈಗಲೂ ಪ್ರಕರಣಗಳು ದಾಖಲಾಗುತ್ತಿರುವುದ್ದಕ್ಕೆ ಆಘಾತ ವ್ಯಕ್ತಪಡಿಸಿತ್ತು. ಒಂದು ತಿಂಗಳ ಬಳಿಕ ಈ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾದ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಉಚ್ಚ ನ್ಯಾಯಾಲಯಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿತು.

2015ರಲ್ಲಿ ಸುಪ್ರೀಂಕೋರ್ಟ್ ಐಟಿ ಕಾಯ್ದೆಯ ಸೆಕ್ಷನ್ 66ಎ ಅನ್ನು ರದ್ದುಗೊಳಿಸಿರುವ ಆದೇಶದ ಬಗ್ಗೆ ಎಲ್ಲಾ ರಾಜ್ಯ ಸರಕಾರಗಳು ಪೊಲೀಸ್ ಸಿಬ್ಬಂದಿಯ ಗಮನಕ್ಕೆ ತರಬೇಕೆಂದು 2019 ಫೆಬ್ರವರಿ 15ರಂದು ಕೋರ್ಟ್ ಆದೇಶಿಸಿತ್ತು. ಆದರೂ ಕೂಡ ಪೊಲೀಸ್ ಠಾಣೆಗಳಲ್ಲಿ ಸೆಕ್ಷನ್ 66ಎ ಅಡಿಯಲ್ಲಿ ಪ್ರಕರಣ ದಾಖಲಾಗುವುದು ಮುಂದುವರಿದಿದೆ. ದೇಶಾದ್ಯಂತ ಕೆಳ ಹಂತದ ನ್ಯಾಯಾಲಯಗಳಲ್ಲೂ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದು ಎನ್‌ಜಿಒ ಸಂಸ್ಥೆ ಕೋರ್ಟ್‌ನಲ್ಲಿ ಅಚ್ಚರಿ ವ್ಯಕ್ತಪಡಿಸಿತು.

2019ರಲ್ಲಿ ನೀಡಿದ ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯವು ತಾನು ನೀಡಿದ ತೀರ್ಪಿನ ಪ್ರತಿಗಳನ್ನು ಎಲ್ಲಾ ಟ್ರಯಲ್ ಕೋರ್ಟ್‌ಗಳಿಗೂ ಕಳುಹಿಸಬೇಕೆಂದು ಹೈಕೋರ್ಟ್‌ಗಳಿಗೆ ಸೂಚಿಸಿತ್ತು. ಆದರೂ ಕೂಡ ಟ್ರಯಲ್ ಕೋರ್ಟ್‌ಗಳಲ್ಲಿ ಸೆಕ್ಷನ್ 66ಎ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.

2012ರಲ್ಲಿ ಮೊದಲ ಪಿಐಎಲ್

2012ರಲ್ಲಿ ಮೊದಲ ಪಿಐಎಲ್

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಅನ್ನು ತಿದ್ದುಪಡಿ ಮಾಡಬೇಕೆಂದು ಹತ್ತು ವರ್ಷಗಳ ಹಿಂದೆ ಕಾನೂನು ವಿದ್ಯಾರ್ಥಿನಿ ಶ್ರೇಯಾ ಸಿಂಘಲ್ ಪಿಐಎಲ್ ಹಾಕಿದ್ದರು. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪಾಲಗಡ್‌ನಲ್ಲಿ ಶಾಹೀನ್ ಧಾಡ ಮತ್ತು ರಿನು ಶ್ರೀನಿವಾಸನ್ ಎಂಬಿಬ್ಬರು ಯುವತಿಯರನ್ನು ಈ ಸೆಕ್ಷನ್ ಅಡಿಯಲ್ಲಿ ಬಂಧಿಸಲಾಗಿತ್ತು. ಅದನ್ನು ಪ್ರಶ್ನಿಸಿ, ಈ ಕಾನೂನನ್ನು ತಿದ್ದುಪಡಿ ಮಾಡಬೇಕೆಂದು ಶ್ರೇಯಾ ಸಿಂಘಲ್ ತಮ್ಮ ಅರ್ಜಿಯಲ್ಲಿ ಕೋರಿದ್ದರು.

ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ನಿಧನರಾದಾಗ ಇಡೀ ಮುಂಬೈ ನಗರವನ್ನು ಬಂದ್ ಮಾಡಲಾಗಿತ್ತು. ಅದರ ವಿರುದ್ಧ ಒಬ್ಬ ಹುಡುಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಮತ್ತೊಬ್ಬ ಹುಡುಗಿ ಆ ಪೋಸ್ಟ್‌ಗೆ ಲೈಕ್ ಒತ್ತಿದ್ದರು. ಆ ಇಬ್ಬರ ಬಂಧನ ಮಾಡಿದ್ದನ್ನು ಆಕ್ಷೇಪಿಸಿ ಅರ್ಜಿ ಸಲ್ಲಿಸಿದವರಲ್ಲಿ ಶ್ರೇಯಾ ಸಿಂಘಲ್ ಜೊತೆಗೆ ಪಿಯುಸಿಎಲ್ ಕೂಡ ಇತ್ತು. ಐಟಿ ಸೆಕ್ಷನ್ 66ಎ ಯ ಸಾಂವಿಧಾನಿಕ ಸಿಂಧುತ್ವವನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಏನಿದು ಸೆಕ್ಷನ್ 66ಎ?

ಏನಿದು ಸೆಕ್ಷನ್ 66ಎ?

ಸಂವಹನ ಸೇವೆ ಮೂಲಕ ಆಕ್ಷೇಪಾರ್ಹ ಸಂದೇಶ ಕಳುಹಿಸುವುದು ಶಿಕ್ಷಾರ್ಹ ಅಪರಾಧ. ತಪ್ಪು ಮಾಹಿತಿ, ಇನ್ನೊಬ್ಬರಿಗೆ ನೋವು ತರುವ ಉದ್ದೇಶದಿಂದ, ಅಥವಾ ಅಪಾಯಕಾರಿ, ದ್ವೇಷಪೂರಿತ ಇತ್ಯಾದಿ ಉದ್ದೇಶದಿಂದ ಮಾಹಿತಿಯನ್ನು ಕಂಟ್ಯೂಟರ್ ಸಾಧನ ಅಥವಾ ಇಮೇಲ್ ಮೂಲಕ ರವಾನಿಸುವುದು ಶಿಕ್ಷಾರ್ಹ ಅಪರಾಧ ಎಂದು ಈ ಕಾಯ್ದೆ ಹೇಳುತ್ತದೆ.

ಇದರ ಅಡಿಯಲ್ಲಿ ಆರೋಪ ಸಾಬೀತಾದರೆ ಮೂರು ವರ್ಷಗಳವರೆಗೂ ಜೈಲುಶಿಕ್ಷೆ ವಿಧಿಸುವ ಅವಕಾಶ ಇರುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Supreme Court has taken objection to the cases filed under IT act section 16A, which was scrapped by it on 2015. It has asked state governments to withraw those cases within 3 weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X