Chandrayaan-3: ಚಂದ್ರನ ಸನಿಹದಲ್ಲಿ ‘ಚಂದ್ರಯಾನ-3’ ನೌಕೆ!
'ಚಂದ್ರಯಾನ-3' ಈ ಪದ ಕಿವಿಗೆ ಬೀಳುತ್ತಿದ್ದಂತೆ ಶತಕೋಟಿ ಭಾರತೀಯರ ಕಿವಿಯಂತು ಅಲರ್ಟ್ ಆಗಿಬಿಡುತ್ತದೆ. ಏಕೆಂದರೆ ಭಾರತದ ವಿಜ್ಞಾನಿಗಳು ಹಗಲು-ರಾತ್ರಿ ಶ್ರಮವಹಿಸಿ ನಿರ್ಮಿಸಿದ್ದ ಚಂದ್ರಯಾನ-3 ನೌಕೆ ಇನ್ನೇನು ಚಂದ್ರನ ಸಮೀಪಕ್ಕೆ ಬಂದೇ ಬಿಟ್ಟಿದೆ. ಈ ಹೊತ್ತಲ್ಲಿ ಮತ್ತೊಂದು ಮಹತ್ವದ ಹಂತಕ್ಕೆ ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ನಾಳೆ ಈ ಮಹತ್ವದ ಕೆಲಸಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.
ಈಗಿನ ಮಾಹಿತಿ ಪ್ರಕಾರ 'ಚಂದ್ರಯಾನ-3' ನೌಕೆ ಬಹುತೇಕ ಚಂದ್ರನ ಬಳಿಗೆ ತೆರಳಿದೆ. ಇಸ್ರೋದ ಬಾಹ್ಯಾಕಾಶ ನೌಕೆ ಚಂದ್ರನ ಸುಮಾರು 3ನೇ ಎರಡರಷ್ಟು ದೂರವನ್ನು ಕ್ರಮಿಸಿದೆ. ಇದೀಗ ಚಂದ್ರನ ಕಕ್ಷೆಗೆ ಅಧಿಕೃತವಾಗಿ 'ಚಂದ್ರಯಾನ-3' ನೌಕೆಯನ್ನು ಸೇರಿಸುವ ಕೆಲಸ ಬಾಕಿ ಇದ್ದು, ನಾಳೆ ಅಂದರೆ ಆಗಸ್ಟ್ 5ರ ಸಂಜೆ 7 ಗಂಟೆಗೆ ಈ ಕಾರ್ಯಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಇಸ್ರೋ ಸಂಸ್ಥೆ ಈ ಮಹತ್ವದ ಮಾಹಿತಿಯನ್ನ ಅಧಿಕೃತವಾಗಿ ಇಡೀ ಜಗತ್ತಿಗೆ ತಿಳಿಸಿದೆ. ಈ ಮೂಲಕ ಪ್ರಪಂಚವೇ ಮಹತ್ವದ ಹಂತಕ್ಕೆ ಉಸಿರುವ ಬಿಗಿಹಿಡಿದು ಕಾಯುತ್ತಿದೆ.

ಹೇಗೆ ನಡೆಯಲಿದೆ ಮಹತ್ವದ ಪ್ರಕ್ರಿಯೆ?
ಅಷ್ಟಕ್ಕೂ ಇಸ್ರೋ ನೀಡಿರುವ ಮಾಹಿತಿ ಪ್ರಕಾರ, ಲೂನಾರ್ ಟ್ರಾನ್ಸ್‌ಫರ್ ಟ್ರಾಜೆಕ್ಟರಿ ಪಥದಲ್ಲಿ 'ಚಂದ್ರಯಾನ-3' ನೌಕೆ ಸಾಗುತ್ತಿದೆ. ಕಳೆದ ಸೋಮವಾರ ಮಧ್ಯರಾತ್ರಿ ಭೂ ಕಕ್ಷೆಯಿಂದ ಬೇರ್ಪಟ್ಟಿದ್ದ ನೌಕೆ ಚಂದ್ರನ ಕಡೆ ಸಾಗಿದೆ. ಹಾಗೆ ಚಂದ್ರಯಾನ-3 ನೌಕೆ ಚಂದ್ರನ ಸಮೀಪಕ್ಕೆ ಆಗಮಿಸುತ್ತಿದ್ದಂತೆ 'ಲೂನಾರ್-ಆರ್ಬಿಟ್ ಇನ್‌ರ್ಸಶನ್' ಅಂದರೆ ಎಲ್‌ಓಐ ಕಾರ್ಯ ಶುರು ಆಗುತ್ತೆ. ಆಗಸ್ಟ್ 5ಕ್ಕೆ ಎಲ್‌ಓಐ ಮಾಡಲು ಯೋಜಿಸಿದ್ದೇವೆ ಎಂದು ಇಸ್ರೋ ಈ ಮೊದಲೇ ಮಾಹಿತಿ ನೀಡಿತ್ತು. ಅದ್ರಂತೆ ನಾಳೆ ಸಂಜೆ 7 ಗಂಟೆಗೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ ಇಸ್ರೋ.
Chandrayaan-3 Mission Update:
— LVM3-M4/CHANDRAYAAN-3 MISSION (@chandrayaan_3) August 4, 2023
The spacecraft has covered about two-thirds of the distance to the moon.
Lunar Orbit Injection (LOI) set for Aug 5, 2023, around 19:00 Hrs. IST.#Chandrayaan3 #ISRO
'ಟ್ರಾನ್ಸ್ ಲೂನಾರ್ ಇಂಜೆಕ್ಷನ್' ಅಂದ್ರೆ ಏನು?
ಅಂದಹಾಗೆ TLI ಅಥವಾ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಅಂದರೆ ಕಕ್ಷೆ ಬದಲಿಸುವ ಪ್ರಕ್ರಿಯೆ ಎಂದು ಅರ್ಥ. ಇದು ಬಾಹ್ಯಾಕಾಶ ನೌಕೆಯನ್ನು ಚಂದ್ರನ ಹಾದಿಗೆ ಕಳುಹಿಸಲು ಬೆನ್ನೆಲುಬು ಎನ್ನಬಹುದು. ಪ್ರಕ್ರಿಯೆಯನ್ನ ರಾಸಾಯನಿಕ ರಾಕೆಟ್ ಇಂಜಿನ್‌ನಿಂದ ನಿರ್ವಹಿಸಲಾಗುತ್ತದೆ. ಈ ಮೂಲಕ ಬಾಹ್ಯಾಕಾಶ ನೌಕೆ ವೇಗವನ್ನ ಹೆಚ್ಚಿಸಲಾಗುತ್ತೆ. ಹಾಗೇ ಹೆಚ್ಚಿದ ವೇಗ ಅದರ ಕಕ್ಷೆಯನ್ನ ಕಡಿಮೆ ವೃತ್ತಾಕಾರದ ಭೂ ಕಕ್ಷೆಯಿಂದ, ಹೆಚ್ಚು ಹತ್ತಿರದ ಕಕ್ಷೆಗೆ ಬದಲಾಯಿಸಲು ಸಹಾಯ ಮಾಡುತ್ತದೆ. ಆಗಸ್ಟ್ 17ಕ್ಕೆ ಪ್ಯೊಪಲ್ಷನ್ ಮಾಡ್ಯೂಲ್ & ಲ್ಯಾಂಡರ್ ಮಾಡ್ಯೂಲ್ ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 23ರ ಸಂಜೆ 5.47ಕ್ಕೆ ಸುರಕ್ಷಿತವಾಗಿ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ.

ಭಾರತದ ಸಾಧನೆಗೆ ಜಗತ್ತೇ ಫಿದಾ
ಅಷ್ಟಕ್ಕೂ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಭಾರತವು 'ಚಂದ್ರಯಾನ-3' ಯೋಜನೆ ಕೈಗೊಂಡಿದೆ. ಚಂದ್ರಯಾನ-3 ಮಿಷನ್‌ನ ಒಟ್ಟು ವೆಚ್ಚ 615 ಕೋಟಿ ರೂಪಾಯಿ. ಇದು ಚಂದ್ರಯಾನ-2ರ ವೆಚ್ಚಕ್ಕಿಂತಲು ಕಡಿಮೆ ಎನ್ನಬಹುದು. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್‌ನ್ನು ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿ ಕಡೆಗೆ ಪ್ರಯಾಣ ಬೆಳೆಸಿದೆ.
ಕ್ಷಣಕ್ಷಣಕ್ಕೂ ಭಾರತದ 'ಚಂದ್ರಯಾನ-3' ನೌಕೆ ಚಂದ್ರನಿಗೆ ಹತ್ತಿರವಾಗುತ್ತಿದೆ. ಮುಂದಿನ ಹಂತಗಳಿಗೆ ಚಂದ್ರಯಾನ ನೌಕೆ ಸಜ್ಜಾಗುತ್ತಿದ್ದು ಭಾರತ ಇತಿಹಾಸ ನಿರ್ಮಿಸುವುದು ಪಕ್ಕಾ. ಇದೇ ಕಾರಣಕ್ಕೆ ಇಸ್ರೋ ವಿಜ್ಞಾನಿಗಳು ಕೂಡ ಉಸಿರು ಬಿಗಿಹಿಡಿದು ಈ ಕ್ಷಣಕ್ಕಾಗಿ ಕಾಯ್ತಾ ಇದ್ದು, ಹಗಲು-ರಾತ್ರಿ ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ. ನಾಳೆ ಮತ್ತೊಂದು ಹಂತವನ್ನು ಪ್ರವೇಶ ಮಾಡಲಿರುವ ಚಂದ್ರಯಾನ-3, ಆಗಸ್ಟ್ 23ರ ಸಂಜೆ 5.47ಕ್ಕೆ ಅಂತಿಮ ಸವಾಲನ್ನು ಎದುರಿಸಲಿದೆ.












Click it and Unblock the Notifications