ರಾಷ್ಟ್ರಪತಿ ಹುದ್ದೆಗೆ ತೇಲಿಬಂದ ಮತ್ತೊಂದು ಅಚ್ಚರಿಯ ಹೆಸರು
ಬಿಜೆಪಿಯ ಹಿರಿಯ ನಾಯಕಿ, ಕೇಂದ್ರ ವಿದೇಶಾಂಗ ಖಾತೆಯ ಸಚಿವೆ ಸುಷ್ಮಾ ಸ್ವರಾಜ್ ಅವರ ಹೆಸರೂ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗಳ ರೇಸಿನಲ್ಲಿ ಕೇಳಿ ಬರುತ್ತಿದೆ.
ಜುಲೈ ತಿಂಗಳಲ್ಲಿ ನಡೆಯುವ ರಾಷ್ಟ್ರಪತಿ ಚುನಾವಣೆಗೆ ಇದುವರೆಗೆ ಬಂದು ಹೋದ ಸಂಭಾವ್ಯ ಅಭ್ಯರ್ಥಿಗಳ ಹೆಸರು ಒಂದಲ್ಲಾ.. ಎರಡಲ್ಲಾ... ಈ ಪಟ್ಟಿಗೆ ಈಗ ಇನ್ನೊಂದು ಹೆಸರು ಸೇರ್ಪಡೆಯಾಗಿದೆ.
ಬಿಜೆಪಿಯ ಹಿರಿಯ ನಾಯಕಿ, ಕೇಂದ್ರ ವಿದೇಶಾಂಗ ಖಾತೆಯ ಸಚಿವೆ ಸುಷ್ಮಾ ಸ್ವರಾಜ್ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾದರೆ ಅಚ್ಚರಿಯಿಲ್ಲ ಎನ್ನುವ ಸುದ್ದಿ ಕೇಳಿ ಬರುತ್ತಿದೆ. [ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಲು ದೇವೇಗೌಡರಿಗೆ ಆಫರ್]
ಎಲ್ಲರೂ ಒಪ್ಪುವ ಅಪರೂಪದ ರಾಜಕಾರಣಿಯಾಗಿರುವ ಸುಷ್ಮಾ ಅವರನ್ನು ಎನ್ಡಿಎ ತನ್ನ ಅಭ್ಯರ್ಥಿಯಾಗಿ ಘೋಷಿಸಿದರೆ, ಅಲ್ಲೂ ಇಲ್ಲೂ ಗುರುತಿಸಿಕೊಳ್ಳದ ಮತ್ತು ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಪ್ರಾದೇಶಿಕ ಪಕ್ಷಗಳು ಬಿಜೆಪಿಗೆ ಬೆಂಬಲ ಸೂಚಿಸುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.
ಏಳು ಬಾರಿ ಸಂಸದರಾಗಿ ಆಯ್ಕೆಯಾಗಿರುವ, 65ವರ್ಷದ ಸುಷ್ಮಾ ಸ್ವರಾಜ್, ತನ್ನ 25ನೇ ವಯಸ್ಸಿನಲ್ಲಿ ಹರ್ಯಾಣ ಸರಕಾರದಲ್ಲಿ ಮಂತ್ರಿಯಾಗಿ ಕೆಲಸ ನಿರ್ವಹಿಸಿದ್ದರು.[ಮೋದಿ ಸಂಪುಟ ಸ್ಥಾನ ಪಲ್ಲಟ, ಸುಷ್ಮಾ ಸ್ಥಾನಕ್ಕೆ ವಸುಂಧರಾ?]
ಎಲ್ಲಾ ಪಕ್ಷಗಳ ಮುಖಂಡರ ಜೊತೆ ಉತ್ತಮ ಸಂಬಂಧವನ್ನು ಹೊಂದಿರುವ ಸುಷ್ಮಾ ಸ್ವರಾಜ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನಾಗಿ ನಿಲ್ಲಿಸಿದರೆ, ನಿರಾಯಾಸವಾಗಿ ಗೆಲ್ಲಬಹುದು ಎನ್ನುವುದು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿರುವ ಮಾತು. ನಿತೀಶ್, ನವೀನ್ ಬೆಂಬಲ ಸಾಧ್ಯತೆ, ಮುಂದೆ ಓದಿ..

ಸಮಾಜವಾದಿ ನಾಯಕಿಯಾಗಿ ಗುರುತಿಸಿಕೊಂಡಿದ್ದ ಸುಷ್ಮಾ ಸ್ವರಾಜ್
ತನ್ನ ರಾಜಕೀಯ ಜೀವನದ ಆರಂಭದಲ್ಲಿ ಸಮಾಜವಾದಿ ನಾಯಕಿಯಾಗಿ ಗುರುತಿಸಿಕೊಂಡಿದ್ದ ಸುಷ್ಮಾ ಸ್ವರಾಜ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನಾಗಿ ಘೋಷಿಸಿದರೆ, ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಬೆಂಬಲಿಸುವ ಸಾಧ್ಯತೆ ಹೆಚ್ಚು ಎನ್ನುವ ಮಾತು ಕೇಳಿ ಬರುತ್ತಿದೆ.

ನಿತೀಶ್ ಕುಮಾರ್ ಬೆಂಬಲ ಸಾಧ್ಯತೆ
ಇದಕ್ಕಿಂತಲೂ ಪ್ರಮುಖವಾದ ಅಂಶವೇನಂದರೆ, ಒಂದು ವೇಳೆ ಸುಷ್ಮಾ ಸ್ವರಾಜ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದರೆ, ಯಾವುದೇ ಷರತ್ತಿಲ್ಲದೇ ಅವರನ್ನು ಬೆಂಬಲಿಸುವುದಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿ ಮುಖಂಡರಿಗೆ ವಾಗ್ದಾನ ನೀಡಿದ್ದಾರೆ ಎನ್ನಲಾಗುತ್ತಿದೆ.

ನವೀನ್ ಪಟ್ನಾಯಕ್ ಬೆಂಬಲ
ಒರಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡಾ ಸುಷ್ಮಾ ಸ್ವರಾಜ್ ಅವರನ್ನು ಬೆಂಬಲಿಸುವ ಸಾಧ್ಯತೆಯಿದೆ. ಸುಷ್ಮಾ ಸ್ವರಾಜ್ ಅಥವಾ ದ್ರೌಪದಿ ಮುರ್ಮು ಈ ಇಬ್ಬರಲ್ಲಿ ಯಾರದಾರೂ ಬಿಜೆಡಿ ಬೆಂಬಲ ಬಿಜೆಪಿಗೆ ನಿಶ್ಚಿತ.

ಸುಷ್ಮಾ ನಿಲುವೇನು ಇನ್ನೂ ಸ್ಪಷ್ಟವಾಗಿಲ್ಲ
ರಾಷ್ಟ್ರಪತಿ ಹುದ್ದೆಯ ವಿಚಾರದಲ್ಲಿ ಸುಷ್ಮಾ ಸ್ವರಾಜ್ ಒಲವು ಏನು ಎನ್ನುವ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ. ಅನಾರೋಗ್ಯದ ನಡುವೆಯೂ ನರೇಂದ್ರ ಮೋದಿ ಸರಕಾರದ ಆಕ್ಟೀವ್ ಮಂತ್ರಿಗಳಲ್ಲೊಬ್ಬರಾದ ಸುಷ್ಮಾ ಅವರನ್ನು, ಯುಪಿಎ ಮೈತ್ರಿಕೂಟದ ಮುಖಂಡರೂ ಗೌರವಿಸುತ್ತಾರೆ.

ಜುಲೈ ತಿಂಗಳಲ್ಲಿ ನಡೆಯುವ ಚುನಾವಣೆ
ಸುಮಿತ್ರಾ ಮಹಾಜನ್, ದ್ರೌಪದಿ ಮುರ್ಮು, ಗೋಪಾಲಕೃಷ್ಣ ಗಾಂಧಿ, ಶರದ್ ಪವಾರ್, ಸುಷ್ಮಾ ಸ್ವರಾಜ್ ಮುಂತಾದವರ ಹೆಸರು ಕೇಳಿ ಬರುತ್ತಿದ್ದರೂ, ಬಿಜೆಪಿಯಾಗಲಿ, ವಿರೋಧ ಪಕ್ಷಗಳಾಗಲಿ ಯಾರ ಹೆಸರನ್ನು ಇನ್ನೂ ಅಂತಿಮಗೊಳಿಸಲಿಲ್ಲ.












Click it and Unblock the Notifications