ಮೋದಿ ಸಂಪುಟ ಸ್ಥಾನ ಪಲ್ಲಟ, ಸುಷ್ಮಾ ಸ್ಥಾನಕ್ಕೆ ವಸುಂಧರಾ?
ಏಪ್ರಿಲ್ 12ಕ್ಕೆ ಸಂಸತ್ತಿನ ಕಲಾಪ ಮುಗಿಯುತ್ತಿದ್ದಂತೆ ಮೋದಿ ಅವರ ಸಂಪುಟ ಪುನರ್ ರಚನೆ ಕಾರ್ಯಕ್ಕೆ ಚಾಲನೆ ಸಿಗುವ ಸಾಧ್ಯತೆ ಕಂಡು ಬಂದಿದೆ. ರೈಲ್ವೆ ಸಚಿವ ಸುರೇಶ್ ಪ್ರಭು, ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರ ಸ್ಥಾನಪಲ್ಲಟ ಸಾಧ್ಯತೆ.
ನವದೆಹಲಿ, ಏಪ್ರಿಲ್ 06: ಏಪ್ರಿಲ್ 12ಕ್ಕೆ ಸಂಸತ್ತಿನ ಕಲಾಪ ಮುಗಿಯುತ್ತಿದ್ದಂತೆ ಮೋದಿ ಅವರ ಸಂಪುಟ ಪುನರ್ ರಚನೆ ಕಾರ್ಯಕ್ಕೆ ಚಾಲನೆ ಸಿಗುವ ಸಾಧ್ಯತೆ ಕಂಡು ಬಂದಿದೆ.
ರೈಲ್ವೆ ಸಚಿವ ಸುರೇಶ್ ಪ್ರಭು, ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರ ಸ್ಥಾನಪಲ್ಲಟವಾಗುವ ಸುದ್ದಿ ಬಂದಿದೆ. ಯಾರೆಲ್ಲರ ಸ್ಥಾನಗಳು ಅದಲು ಬದಲಾಗುತ್ತದೆ ಎಂಬುದರ ಬಗ್ಗೆ ವಿವರ ಮುಂದಿದೆ.
ಮನೋಹರ್ ಪರಿಕ್ಕರ್ ಅವರು ಗೋವಾ ಮುಖ್ಯಮಂತ್ರಿಯಾದ ಬಳಿಕ ರಕ್ಷಣಾ ಖಾತೆಯ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ವಹಿಸಿಕೊಂಡಿದ್ದಾರೆ. ಈಗ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ರಕ್ಷಣಾ ಖಾತೆಯ ಹೊಣೆ ಸಿಗುವ ಸಾಧ್ಯತೆಯಿದೆ.
ಜೊತೆಗೆ ವಿದೇಶಾಂಗ ಸಚಿವ ಸ್ಥಾನದಿಂದ ಸುಷ್ಮಾ ಸ್ವರಾಜ್ ಅವರಿಗೆ ಮುಕ್ತಿ ಸಿಗಲಿದ್ದು, ವಸುಂಧರಾ ರಾಜೆ ಅವರಿಗೆ ಈ ಉನ್ನತ ಹುದ್ದೆ ಲಭಿಸುವ ಸುದ್ದಿ ಬಂದಿದೆ.

ಜೇಟ್ಲಿ ಮೇಲಿನ ಹೊರೆ ಇಳಿಕೆ
ಮನೋಹರ್ ಪರಿಕ್ಕಾರ್ ನಂತರ ರಕ್ಷಣಾ ಸಚಿವರಾಗಿ ಸಮರ್ಥರೊಬ್ಬರನ್ನು ನೇಮಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಚಿಂತಿಸಿದ್ದಾರೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಮೇಲೆ ಹೆಚ್ಚುವರಿ ಹೊರೆಯನ್ನು ಆದಷ್ಟು ಬೇಗ ಇಳಿಸಲು ಬಯಸಿದ್ದಾರೆ. ಒಂದುವೇಳೆ ಸುರೇಶ್ ಪ್ರಭು ಅವರ ಹೆಸರು ಸ್ಥಿರವಾಗದಿದ್ದರೆ ಮತ್ತೊಬ್ಬರನ್ನು ಹೆಸರನ್ನು ಕೂಡಾ ಗೌಪ್ಯವಾಗಿಡಲಾಗಿದ್ದು, ಸದ್ಯದಲ್ಲೆ ಬಹಿರಂಗ ಪಡಿಸುವ ಸಾಧ್ಯತೆಯಿದೆ.

ಮನೋಜ್ ಸಿನ್ಹಾಗೆ ಸ್ಥಾನ?
ರೈಲ್ವೆ ಸಚಿವರಾಗಿ ಸುರೇಶ್ ಪ್ರಭು ಅವರು ಉತ್ತಮ ಕಾರ್ಯ ನಿರ್ವಹಿಸಿದ್ದು, ಒಂದು ವೇಳೆ ರಕ್ಷಣಾ ಸಚಿವ ಹುದ್ದೇಗೆರಿದರೆ, ರೈಲ್ವೆ ಸಚಿವಾಲಯದ ಜವಾಬ್ದಾರಿಯನ್ನು ಮನೋಜ್ ಸಿನ್ಹಾ ಅವರ ಕೈಗೆ ನೀಡಲಾಗುತ್ತದೆ. ಸಿನ್ಹಾ ಅವರನ್ನು ಕ್ಯಾಬಿನೇಟ್ ದರ್ಜೆಗೇರಿಸಲಾಗುವುದು. ಪೂರ್ಣ ಪ್ರಮಾಣದಲ್ಲಿ ರೈಲ್ವೆ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಸುಷ್ಮಾ ಜಾಗಕ್ಕೆ ವಸುಂಧರಾ
ಲಭ್ಯ ಮಾಹಿತಿಯಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸ್ಥಾನಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಅವರನ್ನು ಕರೆ ತರಲು ಸಿದ್ಧತೆ ನಡೆದಿದೆ. ಸುಷ್ಮಾ ಅವರು ಅನಾರೋಗ್ಯದಿಂದಾಗಿ ಹೆಚ್ಚು ಪ್ರವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ಹೈಕಮಾಂಡ್ ನಿರ್ಧರಿಸಿದೆ. ವಸುಂಧರಾ ಅವರು ದೆಹಲಿಗೆ ತೆರಳಿದರೆ, ಅವರ ಸ್ಥಾನಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಓಂ ಮಾಥುರ್ ಅವರನ್ನು ಕೂರಿಸುವ ಸಾಧ್ಯತೆಯಿದೆ.

ಹಿಮಾಚಲಕ್ಕೆ ಜೆಪಿ ನಡ್ಡಾ
ಹಿಮಾಚಲ ಪ್ರದೇಶದ ಮೇಲೆ ಕೇಸರಿ ಬಾವುಟ ಹಾರಿಸುವ ಕನಸು ಹೊತ್ತಿರುವ ಬಿಜೆಪಿ, ಹಿಮಾಚಲ ಪ್ರದೇಶದ ಸಿಎಂ ಆಗಿ ಜೆಪಿ ನಡ್ಡಾ ಅವರನ್ನು ಕೂರಿಸುವ ಬಗ್ಗೆ ಚಿಂತಿಸಿದೆ. ಅಕ್ಟೋಬರ್ ನಲ್ಲಿ ಇಲ್ಲಿ ಚುನಾವಣೆ ನಡೆಯಲಿದ್ದು, ಕೇಂದ್ರ ಆರೋಗ್ಯ ಸಚಿವ ನಡ್ಡಾ ಅವರನ್ನು ಸಿಎಂ ಮಾಡಲು ಬಿಜೆಪಿ
ಯೋಜಿಸಿದೆ.

ರಾಷ್ಟ್ರಪತಿ, ರಾಜ್ಯಪಾಲ ಹುದ್ದೆಗಳು
ಸಂಸತ್ ಕಲಾಪದ ನಂತರ, ರಾಷ್ಟ್ರಪತಿ ಸ್ಥಾನದ ಬಗ್ಗೆ ಕೂಡಾ ಬಿಜೆಪಿ ಚಿಂತಿಸಲಿದೆ. ರಾಷ್ಟ್ರಪತಿ ಸ್ಥಾನಕ್ಕೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಹೆಸರು ಬಲವಾಗಿ ಕೇಳಿಬಂದಿದೆ.ಇದಲ್ಲದೆ 76 ವರ್ಷ ವಯಸ್ಸಿನ ಕೇಂದ್ರ ಮಧ್ಯಮ ಹಾಗೂ ಸಣ್ಣ ಕೈಗಾರಿಕೆ ಸಚಿವ ಕಲ್ ರಾಜ್ ಮಿಶ್ರಾ ಅವರನ್ನು ರಾಜ್ಯವೊಂದರ ರಾಜ್ಯಪಾಲ ಹುದ್ದೆಗೇರಿಸಲು ಬಿಜೆಪಿ ಯೋಜನೆ ಹಾಕಿಕೊಂಡಿದೆ.












Click it and Unblock the Notifications