ಇರಾನ್ ವಾಯು ಪ್ರದೇಶ ಮತ್ತೆ ಮುಕ್ತ, ಭಾರತದ ವಿಮಾನ ಪ್ರಯಾಣಿಕರಿಗೆ ಭರ್ಜರಿ ಸುದ್ದಿ!
ಇರಾನ್ ಮತ್ತು ಅಮೆರಿಕ ನಡುವೆ ಜಟಾಪಟಿ ನಡೆಯುತ್ತಿರುವ ಸಮಯದಲ್ಲೇ ಯುದ್ಧದ ಆತಂಕವೂ ಆವರಿಸಿತ್ತು. ಇಡೀ ಮಧ್ಯಪ್ರಾಚ್ಯ ಭಯದಲ್ಲಿ ನಲುಗಿ, ಮುಂದೆ ಏನಾಗುತ್ತೋ? ಎಂಬ ಚಿಂತೆಯಲ್ಲಿ ಮುಳುಗಿ ಹೋಗಿತ್ತು. ಇರಾನ್ ದೇಶದಲ್ಲಿ ಅಲ್ಲಿನ ಆಡಳಿತದ ವಿರುದ್ಧ ಜನರು ರೊಚ್ಚಿಗೆದ್ದು ಘೋರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಸಾವಿರಾರು ಜನರು ಹಿಂಸಾಚಾರಕ್ಕೆ ಬಲಿಯಾಗಿದ್ದು ಜಗತ್ತಿನಾದ್ಯಂತ ಸದ್ದು ಮಾಡಿತ್ತು.
ಈ ಎಲ್ಲಾ ಒತ್ತಡಗಳ ನಡುವೆ ಅಮೆರಿಕ ನೇರವಾಗಿ ಇರಾನ್ ಮೇಲೆ ದಾಳಿ ಮಾಡುವ ಎಚ್ಚರಿಕೆ ಕೂಡ ಸಿಕ್ಕಿತ್ತು. ಹೀಗಾಗಿ ಇರಾನ್ ತನ್ನ ವಾಯುಗಡಿ ಬಂದ್ ಮಾಡಿದ್ದು, ಭಾರತದ ವಿಮಾನ ಪ್ರಯಾಣಿಕರ ನಿದ್ದೆಗೆಡಿಸಿತ್ತು. ಆದರೆ, ಈಗ ಭರ್ಜರಿ ಸುದ್ದಿ ಸಿಕ್ಕಿದ್ದು, ಇರಾನ್‌ನ ವಾಯು ಪ್ರದೇಶ ಮತ್ತೆ ಬಳಕೆಗೆ ಮುಕ್ತವಾಗಿದೆ. ಭಾರತದಿಂದ ಪಾಶ್ಚಿಮಾತ್ಯ ದೇಶಗಳ ಕಡೆಗೆ ಹೊರಡುವ ಸಾಕಷ್ಟು ವಿಮಾನಗಳು ಇದೇ ಇರಾನ್ ವಾಯು ಪ್ರದೇಶ ಬಳಸಿ ಹೊರಡುತ್ತವೆ. ಆದರೆ ದಿಢೀರ್ ವಾಯು ಗಡಿಯನ್ನು ಇರಾನ್ ಬಂದ್ ಮಾಡಿದ್ದು ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಸಿತ್ತು. ಈಗ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಇರಾನ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಹಲವು ವಿಮಾನಗಳು ಕ್ಯಾನ್ಸಲ್ ಆಗಿದ್ದವು
ಇರಾನ್ ತನ್ನ ವಾಯುಗಡಿ ಬಂದ್ ಮಾಡಿದ್ದ ಕಾರಣಕ್ಕೆ ಭಾರತದಿಂದ ಪಶ್ಚಿಮದ ಕಡೆಗೆ ಹೋಗುವ ಹಲವು ವಿಮಾನಗಳ ಹಾರಾಟ ಬಂದ್ ಆಗಿತ್ತು. ಪ್ರಮುಖವಾಗಿ ಅಮೆರಿಕ ಕಡೆಗೆ ಹಾರುತ್ತಿದ್ದ ಹಲವು ವಿಮಾನಗಳು ರದ್ದಾದ ಕಾರಣಕ್ಕೆ ಪ್ರಯಾಣಿಕರಿಗೆ ತಲೆನೋವು ಶುರುವಾಗಿತ್ತು. ಹೀಗಿದ್ದಾಗ ಇರಾನ್‌ನ ಅಧಿಕಾರಿಗಳು ಮಹತ್ವದ ನಿರ್ಧಾರ ಪ್ರಕಟಿಸಿದ್ದು, ವಾಯುಗಡಿ ಬಂದ್ ಮಾಡಿರುವ ನಿರ್ಧಾರ ವಾಪಸ್ ಪಡೆದಿದ್ದಾರೆ. ಹೀಗಾಗಿ ಭಾರತ ಸೇರಿದಂತೆ ಏಷ್ಯಾ ಮೂಲಕ ಪಶ್ಚಿಮದ ಕಡೆಗೆ ಹೋಗುವ ನೂರಾರು ವಿಮಾನಗಳಿಗೆ ಸಹಾಯವಾಗಿದೆ. ಹಾಗಾದರೆ ದಿಢೀರ್ ಇರಾನ್ ಈ ನಿರ್ಧಾರ ಕೈಗೊಂಡಿದ್ದು ಏಕೆ?
ಅಮೆರಿಕ ಸೇನಾ ದಾಳಿ ಮಾಡಲ್ಲ!
ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಸೇನಾ ದಾಳಿ ಮಾಡುವ ವಾರ್ನಿಂಗ್ ಕೊಟ್ಟಿದ್ದರು. ಅದರಲ್ಲೂ ಇರಾನ್ ಪ್ರತಿಭಟನೆ ವೇಳೆ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕ ಎಂಟ್ರಿ ಕೊಡಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶಗಳನ್ನು ಕೂಡ ಟ್ರಂಪ್ ಅವರು ನೀಡಿದ್ದರು. ಹೀಗಿದ್ದಾಗ ಇರಾನ್ ಮತ್ತು ಅಮೆರಿಕ ನಡುವೆ ಘೋರ ಯುದ್ಧ ಗ್ಯಾರಂಟಿ? ಎಂಬ ಪ್ರಶ್ನೆ ಮೂಡಿತ್ತು. ಆದರೆ ಅಂತಿಮವಾಗಿ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಯಾವುದೇ ಸೇನಾ ಕಾರ್ಯಾಚರಣೆಗೆ ಚಿಂತಿಸಿಲ್ಲ ಎಂದಿದ್ದಾರೆ. ಆ ನಂತರ ಇರಾನ್ ಕೂಡ ತನ್ನ ವಾಯುಗಡಿ ಮತ್ತೆ ಮುಕ್ತಗೊಳಿಸಿದೆ.
3,428 ಜನರ ಜೀವ ಬಲಿ
ಆಡಳಿತ ವೈಫಲ್ಯದ ವಿರುದ್ಧ ಶುರುವಾದ ಪ್ರತಿಭಟನೆಗಳು ಘೋರ ರೂಪ ಪಡೆದು, ಈವರೆಗೂ ಸುಮಾರು 3,428 ಜನರನ್ನ ಬಲಿ ಪಡೆಯಲಾಗಿದೆ ಎಂಬ ಆರೋಪ ಇದೆ. ಹೀಗೆ ಇರಾನ್ ನೆಲದಲ್ಲಿ ಪ್ರತಿಭಟನೆ ಹತ್ತಿಕ್ಕಲು ಹೋರಾಟ ಮಾಡಿದವರ ಹತ್ಯೆ ಮಾಡಲಾಗುತ್ತಿದೆ ಎಂಬ ಆರೋಪವನ್ನ ಟ್ರಂಪ್ ಗಂಭೀರವಾಗಿ ಪರಿಗಣಿಸಿದ್ದರು. ಅಲ್ಲದೆ ಇರಾನ್‌ಗೆ ನೇರವಾಗಿ ಪೆಟ್ಟು ಕೊಡುವ ಎಚ್ಚರಿಕೆ ನೀಡಿದ್ದರು, ಆದರೆ ಈಗ ಅವರೇ ನೀಡಿರುವ ಹೇಳಿಕೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಇರಾನ್ ವಿರುದ್ಧ ಅಮೆರಿಕ ಯಾವುದೇ ಸೇನಾ ಕಾರ್ಯಾಚರಣೆ ನಡೆಸಲ್ಲ ಎಂಬುದು ಬಹುತೇಕ ಕನ್ಫರ್ಮ್ ಆಗಿದೆ.












Click it and Unblock the Notifications