ಐಫೋನ್, ಪ್ರತ್ಯೇಕ ವಾಸಸ್ಥಾನ: ಜೈಲಿನಲ್ಲಿದ್ದುಕೊಂಡೇ ಐಶಾರಾಮಿ ಜೀವನ- ಜೈಲಾಧಿಕಾರಿಗಳಿಗೆ ಕೋಟಿ ಕೋಟಿ ಹಣ ಕೊಡುತ್ತಿದ್ದ ಸುಕೇಶ್!
ಅಕ್ರಮ ಹಣ ಸುಲಿಗೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದುಕೊಂಡೇ ಕೆಲ ನಟಿಯರಿಗೆ ಕರೆ ಮಾಡಿದ್ದರು. ಕೋಟಿ ಕೋಟಿ ಹಣ ವಂಚನೆ ಮಾಡಿದ್ದರು. ಮಾತ್ರವಲ್ಲದೆ ಕೆಲವರನ್ನ ಅನೇಕ ಬಾರಿ ಭೇಟಿ ಕೂಡ ಆಗಿದ್ದರು. ಜೈಲಿನಲ್ಲಿರುವ ವ್ಯಕ್ತಿ ಅದು ಹೇಗೆ ಕರೆ ಮಾಡುತ್ತಾನೆ? ಜೈಲಿನಲ್ಲಿ ಫೋನ್ ಇಷ್ಟುಕೊಳ್ಳುವ ಅವಕಾಶ ಇದಿಯಾ? ಜೈಲಿನಿಂದ ಕರೆ ಮಾಡುವುದು ಒಂದು ಕರೆ ಇರಲಿ, ಖ್ಯಾತ ನಟಿಯರನ್ನು ಪದೇ ಪದೇ ಭೇಟಿ ಕೂಡ ಮಾಡಿದ್ದ.
ಮಾತ್ರವಲ್ಲದೆ ತಾನು ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಪರಿಚಯಸ್ಥ ಎಂದು ಕೂಡ ಹೇಳಿಕೊಂಡಿದ್ದ. ಇದೆಲ್ಲಾ ಜೈಲಿನಿಂದ ಮಾಡಲು ಹೇಗೆ ಸಾಧ್ಯ? ಮೊದಲು ಇದನ್ನು ಕಂಡು ಹಿಡಿಯಬೇಕು. ಇದನ್ನು ಮುಚ್ಚಿಟ್ಟು ಕೇವಲ ಸುಕೇಶ್ ಹಾಗೂ ನಟಿಯೊಂದಿಗಿನ ನಂಟಿನ ಬಗ್ಗೆ ಮಾತ್ರ ವರದಿಗಳಾಗುತ್ತ ಅಸಲಿ ಸುದ್ದಿಯನ್ನೇ ಮುಚ್ಚಿಡಲಾಗುತ್ತಿದೆ ಎನ್ನುವ ಮಾತುಗಳಿಗೆ ಸದ್ಯ ಉತ್ತರ ಸಿಕ್ಕಿದೆ.

ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ ಅನ್ನೋ ಮಾತು ಸುಕೇಶ್ ಪ್ರಕರಣದಲ್ಲಿ ಅಕ್ಷರಶ: ನಿಜವಾಗಿದೆ. ಈ ವಂಚಕ ಜೈಲಿನಲ್ಲಿದ್ದುಕೊಂಡು ಜೈಲಾಧಿಕಾರಿಗಳ ಸಹಾಯ ಪಡೆದು ಹಲವಾರು ಕೃತ್ಯಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬಯಲಾಗಿದೆ.
ಸುಕೇಶ್‌ಗಿತ್ತು ಜೈಲಾಧಿಕಾರಿಗಳ ಸಹಾಯ
ಜೈಲಿನ ಕೊಠಡಿಯೊಳಗಿನ ಐಶಾರಾಮಿ ಸೌಲಭ್ಯಗಳಿಗೆ ಪ್ರತಿಯಾಗಿ ಸುಕೇಶ್ ಚಂದ್ರಶೇಖರ್ ಜೈಲು ಅಧಿಕಾರಿಗಳಿಗೆ ಪ್ರತಿ ತಿಂಗಳು ಕೋಟ್ಯಂತರ ರೂಪಾಯಿಗಳನ್ನು ಪಾವತಿಸಿದ್ದಾರೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ದೆಹಲಿಯ ರೋಹಿಣಿ ಜೈಲಿನಿಂದ ಸುಲಿಗೆ ದಂಧೆ ನಡೆಸುತ್ತಿದ್ದ ಸುಕೇಶ್ ಜೈಲು ಅಧಿಕಾರಿಗಳ ಜೊತೆಯಲ್ಲಿ ಸಂಘಟಿತ ಅಪರಾಧ ಮಾಡಿದ್ದಾರೆ ಎಂದು ತನಿಖೆಯ ಗೌಪ್ಯ ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.
ಹೀಗೆ ಆರೋಪಿ ಸುಕೇಶ್ ಜೊತೆ ಕೈ ಜೋಡಿಸಿದವರು ಅಂದಿನ ರೋಹಿಣಿ ಜೈಲಿನ ಅಧೀಕ್ಷಕ ಸುಂದರ್ ಬೋರಾ, ಅಂದಿನ ರೋಹಿಣಿ ಜೈಲಿನ ಉಪ ಅಧೀಕ್ಷಕ ಮಹೇಂದರ್ ಪ್ರಸಾದ್ ಸುಂದರಿಯಾಲ್ ಹಾಗೂ ಅಂದಿನ ರೋಹಿಣಿ ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ಧರಂ ಸಿಂಗ್ ಮೀನಾ. ಇವರೆಲ್ಲರೂ ಸದ್ಯ ತನಿಖೆಯ ಭಾಗವಾಗಿದ್ದಾರೆಂದು ತಿಳಿದುಬಂದಿದೆ.

ಈ ಮೂವರು ಅಧಿಕಾರಿಗಳನ್ನು 2020-21ರಲ್ಲಿ ರೋಹಿಣಿ ಜೈಲಿನಲ್ಲಿ (ಬ್ಯಾರಕ್ ಸಂಖ್ಯೆ 10) ಸುಕೇಶ್ ಜೊತೆಗೆ ಇರಿಸಲಾಗಿತ್ತು. ಜೈಲಿನ ಹೊರಗಿದ್ದವರನ್ನೇ ಯಾಮಾರಿಸಿ ಬುಟ್ಟಿಗೆ ಬೀಳಿಸಿಕೊಳ್ಳುವ ಸುಕೇಶ್‌ನಿಗೆ ಜೈಲಾಧಿಕಾರಿಗಳನ್ನ ಹಣದಾಸೆಗೆ ಬೀಳಿಸಿಕೊಳ್ಳುವುದು ಕಷ್ಟವಾಗಲಿಲ್ಲ.
ಮೂವರು ಜೈಲಾಧಿಕಾರಿಗಳ ಬಂಧನ
ಜೈಲಿನೊಳಗೆ ಅನಧಿಕೃತ ಮತ್ತು ಅಕ್ರಮ ಸೌಲಭ್ಯಗಳನ್ನು ಪಡೆಯಲು ಸುಕೇಶ್ ನಿಯಮಗಳು ಬಗ್ಗೆ ಜೈಲು ಅಧಿಕಾರಿಗಳೊಂದಿಗೆ ಚರ್ಚಿಸಿದ್ದನು. ಸುಕೇಶ್ ಜೈಲಿನಲ್ಲಿದ್ದಾಗ ಅಪರಾಧ ಚಟುವಟಿಕೆಗಳನ್ನು ನಡೆಸಲು ಈ ಸೌಲಭ್ಯಗಳನ್ನು ಬಳಸಿಕೊಂಡಿದ್ದಾನೆ ಎಂದು ಇಂಡಿಯಾ ಟುಡೇ ತಿಳಿಸಿದೆ. ಸುಕೇಶ್ ಚಂದ್ರಶೇಖರ್ ಸೃಷ್ಟಿಸಿದ ಅಪರಾಧದ ಆದಾಯದಿಂದ ಜೈಲು ಅಧಿಕಾರಿಗಳ ವಿಚಾರಣೆ ನಡೆಸಲಾಗುತ್ತಿದೆ.
ಈ ಮೂವರು ಅಧಿಕಾರಿಗಳನ್ನು ಫೆಬ್ರವರಿ 7, 2023 ರಂದು ಜೈಲು ನಿಯಮಗಳು ಮತ್ತು ನಿಬಂಧನೆಗಳ ಸ್ಪಷ್ಟ ಉಲ್ಲಂಘನೆಗಾಗಿ ಮತ್ತು ಮನಿ ಲಾಂಡರಿಂಗ್ ಆಕ್ಟ್ (PMLA) ಅಡಿಯಲ್ಲಿ ಬಂಧಿಸಲಾಯಿತು. ಅವರನ್ನು ಇಡಿ ಕಸ್ಟಡಿಗೆ ಒಪ್ಪಿಸಲಾಗಿದ್ದು, ಪ್ರಸ್ತುತ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

ಜೈಲಾಧಿಕಾರಿಗಳಿಗೆ ಪಾವತಿಸುತ್ತಿದ್ದ ಹಣವೆಷ್ಟು?
ಕಷ್ಟಪಟ್ಟು ದುಡಿದರೂ ಹಣ ಕೈಗೆಟಕುವುದು ಕಷ್ಟ ಇದೆ. ಹೀಗಿರುವಾಗ ಸುಕೇಶ್ ಮಾತ್ರ ಮೈ ಬಗ್ಗಿಸಿ ಕೆಲಸ ಮಾಡ್ತಾಯಿಲ್ಲ, ಯಾವುದೇ ಬಿಸಿನೆಸ್ ಕೂಡ ಹೊಂದಿಲ್ಲ. ಆದರೂ ಈತ ಜೈಲಾಧಿಕಾರಿಗಳಿಗೆ ಕೋಟಿ ಕೋಟಿ ಹಣ ನೀಡುವಷ್ಟು ಶ್ರೀಮಂತ.
ಜೈಲಿನಲ್ಲಿದ್ದ ಆರೋಪಿ ಸುಕೇಶ್ ಜೈಲಾಧಿಕಾರಿಗಳಿಗೆ ತಿಂಗಳಿಗಿಷ್ಟು ಹಣವನ್ನು ಸಲೀಸಾಗಿ ನೀಡುತ್ತಿದ್ದನಂತೆ. ತಿಂಗಳಿಗಿಷ್ಟು ಹಣ ನೀಡಬೇಕು ಎನ್ನುವುದು ಅಧಿಕಾರಿಗಳೊಂದಿಗೆ ಸುಕೇಶ್ ಡೀಲ್ ಮಾಡಿಕೊಂಡಿದ್ದನಂತೆ.
ಸುಂದರ್ ಬೋರಾ (ಸೂಪರಿಂಟೆಂಡೆಂಟ್) ತಿಂಗಳಿಗೆ 1.5 ಕೋಟಿ ರೂಪಾಯಿ ಮತ್ತು ಮಹೇಂದ್ರ ಪ್ರಸಾದ್ ಸುಂದರಿಯಾಲ್ (ಉಪ ಅಧೀಕ್ಷಕ) ತಿಂಗಳಿಗೆ 25 ಲಕ್ಷ ರೂಪಾಯಿ ಹಾಗೂ ಸುಕೇಶ್ ಜೈಲು ಡಿಜಿಗೆ ಪ್ರತಿ ತಿಂಗಳು ಸುಮಾರು 2 ಕೋಟಿ ರೂ. ಪಾವತಿಸಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಸುಕೇಶ್ ಅವರಿಂದ 'ರಕ್ಷಣಾ ಹಣ'ವಾಗಿ ಕೋಟ್ಯಂತರ ರೂ. ಅಧಿಕಾರಿಗಳು ಪೀಕಿದ್ದಾರೆ. ಜೈಲಿನಲ್ಲಿರುವ ಸುಕೇಶ್ ಗೆ ಕೋಟಿ ಕೋಟಿ ಹಣ ಬರುತ್ತಿದ್ದದ್ದು ಎಲ್ಲಿಂದ? ಯಾರು ಈತನಿಗೆ ಈ ಪ್ರಮಾಣದಲ್ಲಿ ಹಣ ನೀಡುತ್ತಿದ್ದರು ಎನ್ನುವ ಆಳದ ತನಿಖೆ ನಡೆಯುತ್ತಿದೆ.
ಜೈಲಿನಲ್ಲಿ ಸುಕೇಶ್ ಅನುಭವಿಸಿದ ಅಕ್ರಮ ಸೌಲಭ್ಯಗಳು
ಚೆನ್ನೈನಿಂದ ಪೆರೋಲ್ ಸಮಯದಲ್ಲಿ ಸುಕೇಶ್ ಅವರು ಐಫೋನ್ 12 ಪ್ರೊ ಅನ್ನು ಖರೀದಿಸಿದರು. ಇದನ್ನು ಜೈಲಿನಲ್ಲಿ ಸುಲಿಗೆ ಉದ್ದೇಶಗಳಿಗಾಗಿ ಬಳಸಿದ್ದರು. ಮಾತ್ರವಲ್ಲದೆ ಸುಕೇಶ್ ಜೈಲಿನಲ್ಲಿ ಪ್ರತ್ಯೇಕ ವಾಸಸ್ಥಾನವನ್ನೂ ಜೈಲಿನಲ್ಲಿ ಹೊಂದಿದ್ದರು. ಜೈಲು ಅಧಿಕಾರಿಗಳು ಸುಕೇಶ್‌ಗೆ ಏರ್‌ಟೆಲ್ ಸಿಮ್ ಕಾರ್ಡ್ ಅನ್ನು ಖರೀದಿಸಲು ಅನುಕೂಲ ಮಾಡಿಕೊಟ್ಟಿದ್ದರು. ಇದನ್ನು ಜೈಲಿನ ಆವರಣದಲ್ಲಿ ಇಂಟರ್ನೆಟ್ ಸೇವೆಗಳನ್ನು ಪಡೆಯಲು ಬಳಸಲಾಗುತ್ತಿತ್ತು.
ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸಲು ಸುಕೇಶ್ ಅವರು ಅದಿತಿ ಸಿಂಗ್ ಅವರೊಂದಿಗೆ ಸಂವಹನ ನಡೆಸಲು ಇಂಟರ್ನೆಟ್ ಅನ್ನು ಬಳಸುತ್ತಿದ್ದರು. ಅವರು ಅದಿತಿ ಸಿಂಗ್ ಮತ್ತು ಇತರರೊಂದಿಗೆ ಸಂವಹನ ನಡೆಸಲು ಇಂಟರ್ನೆಟ್ ಆಧಾರಿತ ಅಪ್ಲಿಕೇಶನ್‌ಗಳಾದ ಟೆಲಿಗ್ರಾಮ್ ಮತ್ತು ವಾಟ್ಸಾಪ್ ಅನ್ನು ಬಳಸಿದ್ದಾರೆ. ಕೊರೊನಾ ಸಮಯದಲ್ಲಿ ಇತರ ಸೌಲಭ್ಯಗಳನ್ನು ಸುಕೇಶ್ ಬಳಸಿದ್ದಾರೆ ಎನ್ನಲಾಗುತ್ತಿದೆ.
ಅಷ್ಟ ಮಾತ್ರವಲ್ಲ ಸುಕೇಶ್ ಅವರ ಸೆಲ್‌ನಲ್ಲಿರುವ ಸಿಸಿಟಿವಿ ಪರದೆಯನ್ನು ನೀರಿನ ಬಾಟಲಿಗಳಿಂದ ನಿರ್ಬಂಧಿಸಲು ಅನುಮತಿಸಲಾಗಿತ್ತು. ಸುಕೇಶ್ ಅವರು ತಮ್ಮ ವಕೀಲರಿಗೆ ಮತ್ತುಇತರರಿಗೆ ಕರೆ ಮಾಡಲು ಸೂಪರಿಂಟೆಂಡೆಂಟ್ ಕಚೇರಿಯಲ್ಲಿ ಫೋನ್ ಬಳಸಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ನಮೂದು ಇಲ್ಲ.
ಸುಕೇಶ್ ಅವರು ಅನುಮತಿಯಿಲ್ಲದೆ ನ್ಯಾಯಾಲಯದ ಹೊರಗೆ ಓಡಾಡಿದ್ದಾರೆ. ಆದರೂ ಯಾವ ಕಾರಣಕ್ಕಾಗಿ ಅವರಿಗೆ ಓಡಾಡಲು ಅನುಮತಿಸಲಾಯಿತು ಎಂಬುದನ್ನು ರಿಜಿಸ್ಟರ್‌ನಲ್ಲಿ ನಮೋದಿಸಲಾಗಿಲ್ಲ.
ಸುಕೇಶ್ ಜೈಲಾಧಿಕಾರಿಗಳಿಗೆ ಹಣ ನೀಡುತ್ತಿದ್ದದ್ದು ಹೇಗೆ?
ಹಾಗಾದರೆ ಸುಕೇಶ್‌ಗೆ ಯಾರು ಹಣ ನೀಡುತ್ತಿದ್ದರು? ಜೈಲಿನಲ್ಲಿ ಸುಕೇಶ್‌ಗೆ ಹಣ ಕೊಟ್ಟವರು ಯಾರು? ಯಾರಿಂದ ಸುಕೇಶ್ ಜೈಲಾಧಿಕಾರಿಗಳಿಗೆ ಹಣವನ್ನು ನೀಡುತ್ತಿದ್ದನು? ಇದೆಲ್ಲಾ ಮತ್ತಷ್ಟು ಕುತೂಹಲಕಾರಿ ವಿಷಯ.
ಸುಕೇಶ್ ಜೈಲಾಧಿಕಾರಿಗಳಿಗೆ ಹಣವನ್ನು ತನ್ನ ಆಪ್ತನಿಂದ ಪಾವತಿಸುತ್ತಿದ್ದನು. ಸಹಾಯಕ ಅಧೀಕ್ಷಕ ಧರಂ ಸಿಂಗ್ ಮೀನಾ ಅವರು ಹಲವಾರು ಬಾರಿ ಸುಕೇಶ್ ಅವರ ಆಪ್ತ ಸಹಾಯಕ ದೀಪಕ್ ರಮ್ನಾನಿ ಅವರಿಂದ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೈಲಿನೊಳಗಿಂದ ದೀಪಕ್ ರಮ್ನಾನಿ ಅವರೊಂದಿಗೆ ಮಾತುಕತೆ ಬಳಿಕ ಸುಕೇಶ್ ನಗದು ಮೊತ್ತವನ್ನು ತಲುಪಿಸುವ ದಿನಾಂಕ, ಸಮಯ ಮತ್ತು ಸ್ಥಳವನ್ನು ಅಂತಿಮಗೊಳಿಸುತ್ತಿದ್ದರು.
ಧರಂ ಸಿಂಗ್ ಮೀನಾ ಅವರು ದೀಪಕ್‌ನಿಂದ ನಗದು ಮೊತ್ತವನ್ನು ಸ್ವೀಕರಿಸುತ್ತಿದ್ದರು. ನಂತರ ಸುಕೇಶ್ ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಜೈಲು ಅಧಿಕಾರಿಗಳಿಗೆ ವಿತರಿಸುತ್ತಿದ್ದರು. ಅದಕ್ಕಾಗಿ ಧರಂ ಸಿಂಗ್ ಮೀನಾ ಅವರಿಗೆ ಹೆಚ್ಚುವರಿಯಾಗಿ ಹಣ ನೀಡಲಾಗುತ್ತಿತ್ತು.
ಈ ಹಣವನ್ನು ಈ ಅಧಿಕಾರಿಗಳು ಮನೆಯ ಖರ್ಚು, ಅಂಚೆ ಕಛೇರಿಯ ಉಳಿತಾಯ ಖಾತೆಯಲ್ಲಿ ಹೂಡಿಕೆ, ಫ್ಲಾಟ್ ಖರೀದಿ ಮತ್ತಿತರ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಸಂವಹನವನ್ನು ಅವರು ಫೋನ್ ಹಾಗೂ ವಾಟ್ಸಾಪ್ ಮೂಲಕ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸುಕೇಶ್ ಚಂದ್ರಶೇಖರ್ ಯಾರು?
ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳಿಂದ ಸುಕೇಶ್ ಚಂದ್ರಶೇಖರ್ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ಮಾಜಿ ಫಾರ್ಮಾ ಕಂಪನಿಯಾದ ರಾನ್‌ಬಾಕ್ಸಿ ಮಾಲೀಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಿಗೆ 200 ಕೋಟಿ ರೂ. ಪಂಗನಾಮ ಹಾಕಿದ ವ್ಯಕ್ತಿ.
ಚಂದ್ರಶೇಖರ್ ಮತ್ತು ಅವರ ಸಹಚರರು ಸರ್ಕಾರಿ ಅಧಿಕಾರಿಗಳಂತೆ ನಟಿಸಿ ಪತಿಗೆ ಜಾಮೀನು ನೀಡುವುದಾಗಿ ಭರವಸೆ ನೀಡಿ ಅದಿತಿಯಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಚಂದ್ರಶೇಖರ್ ಅವರು ರೋಹಿಣಿ ಜೈಲಿನಲ್ಲಿದ್ದಾಗ ಕೇಂದ್ರ ಸರ್ಕಾರದ ಅಧಿಕಾರಿಯಂತೆ ಸ್ಪೂಫ್ ಕಾಲ್ ಮೂಲಕ ಹಣ ವರ್ಗಾವಣೆ ಮಾಡುವಂತೆ ಅದಿತಿಗೆ ಮನವೊಲಿಸಿದ್ದಾರೆ ಎಂದು ದೂರಲಾಗಿದೆ.
ಚಂದ್ರಶೇಖರ್ ಮತ್ತು ಅವರ ಪತ್ನಿ ಲೀನಾ ಮರಿಯಾ ಪೌಲ್ ಅವರನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದೆಹಲಿ ಪೊಲೀಸರು ಈ ಪ್ರಕರಣದಲ್ಲಿ ಅವರ ಪಾತ್ರಕ್ಕಾಗಿ ಬಂಧಿಸಿದ್ದರು.
ಇನ್ನೂ ಸುಕೇಶ್ ವಿಚಾರಣೆ ವೇಳೆ ಜಾಕ್ವೆಲಿನ್ ಫರ್ನಾಂಡೀಸ್ ಗೂ ಹಣ ನೀಡಿರುವುದಾಗಿ ಹೇಳಿಕೊಂಡಿದ್ದನು. ಬಳಿಕ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಸುಕೇಶ್ ಅನ್ಯೂನ್ಯವಾಗಿರುವ ಫೋಟೋಗಳು ಸಾಮಾಜಿಕ ಜಾಲತಾನದಲ್ಲಿ ಭಾರೀ ವೈರಲ್ ಆಗಿದ್ದವು.
ಜಾಕ್ವೆಲಿನ್ ಫರ್ನಾಂಡೀಸ್‌ಗೆ ಅವರು ದುಬಾರಿ ಉಡುಗೊರೆಗಳನ್ನು ಕಳುಹಿಸಿದ್ದಾರೆ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದ ಸುಕೇಶ್. ಆದರೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಫೆರ್ನಾಂಡಿಸ್‌ಗೆ ನ್ಯಾಯಾಲಯ ನವೆಂಬರ್ 15 ರಂದು ಜಾಮೀನು ನೀಡಿತ್ತು. ಪ್ರಕರಣದಲ್ಲಿ ಆಕೆಯನ್ನು ಬಂಧಿಸಿಲ್ಲ.












Click it and Unblock the Notifications