ನೀರವ್ ಮೋದಿ ವಿರುದ್ಧ ಸದ್ಯದಲ್ಲೇ ರೆಡ್ ಕಾರ್ನರ್ ನೋಟಿಸ್
ನವದೆಹಲಿ, ಜೂನ್ 22: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರಕ್ಕೂ ಅಧಿಕ ಕೋಟಿ ರೂಪಾಯಿ ಪಂಗನಾಮ ಹಾಕಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್ ಮೋದಿ ವಿರುದ್ಧ ಸದ್ಯದಲ್ಲೇ 'ಇಂಟರ್ ಪೋಲ್' ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಿದೆ.
ಸಿಬಿಐ ನೀಡಿದ ದಾಖಲೆಗಳಿಗೆ ಇಂಟರ್ ಪೋಲ್ ತೃಪ್ತಿ ವ್ಯಕ್ತಪಡಿಸಿದ್ದು ಇವತ್ತೇ ನೀರವ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸುವ ಸಾಧ್ಯತೆಗಳಿವೆ.
ಮುಂಬೈ ವಿಶೇಷ ನ್ಯಾಯಾಲಯ ನೀರವ್ ಮೋದಿ ವಿರುದ್ಧ ಹೊರಡಿಸಿರುವ ಜಾಮೀನು ರಹಿತ ವಾರಂಟ್, ಪ್ರಕರಣದಲ್ಲಿ ಸಲ್ಲಿಸಲಾಗಿರುವ ಚಾರ್ಜ್ ಶೀಟ್ ದಾಖಲೆಗಳನ್ನು ಸಿಬಿಐ ಇಂಟರ್ ಪೋಲ್ ಗೆ ಸಲ್ಲಿಸಿದೆ. ಈ ದಾಖಲೆಗಳನ್ನು ಇಂಟರ್ ಪೋಲ್ ಪರಿಶೀಲನೆ ನಡೆಸುತ್ತಿದ್ದು ರೆಡ್ ಕಾರ್ನರ್ ನೋಟಿಸ್ ಹೊರಡಿಸಲಿದೆ ಎನ್ನಲಾಗಿದೆ.

ಒಂದೊಮ್ಮೆ ಯಾವುದೇ ರೀತಿಯ ವಿವರಣೆಗಳನ್ನು ಇಂಟರ್ ಪೋಲ್ ಬಯಸದೇ ಇದ್ದಲ್ಲಿ ಇಂದು ಅಥವಾ ಮುಂದಿನ ವಾರದ ಆರಂಭದಲ್ಲಿ ರೆಡ್ ಕಾರ್ನರ್ ನೋಟಿಸ್ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.
ನೀರವ್ ಮೋದಿಯವರ ಭಾರತೀಯ ಪಾಸ್ಪೋರ್ಟ್ ರದ್ದುಗೊಳಿಸಲಾಗಿದೆ. ಹೀಗಿದ್ದೂ ಅವರು ಬೇರೆ ಬೇರೆ ದೇಶಗಳಿಗೆ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ರೆಡ್ ಕಾರ್ನರ್ ನೋಟಿಸ್ ಮೂಲಕ ನೀರವ್ ವಶಕ್ಕೆ ಪಡೆಯಲು ಸಿಬಿಐ ಮುಂದಾಗಿದೆ.











Click it and Unblock the Notifications