ಕೋವಿಡ್ ಸೋಂಕಿತರಿಗೆ ವಿಮೆ ಬಗ್ಗೆ ಸಿಹಿ ಸುದ್ದಿ
ನವದೆಹಲಿ, ಜುಲೈ 17 : ಕೋವಿಡ್ ಸೋಂಕಿತ ರೋಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ತಾತ್ಕಾಲಿಕ ಆಸ್ಪತ್ರೆಗೆ ದಾಖಲಾಗಿದ್ದರೂ ವಿಮೆ ಪಡೆಯಲು ಅರ್ಹ ಎಂದು ಹೇಳಿದೆ. ಹಲವಾರು ರಾಜ್ಯಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
Recommended Video
ಶುಕ್ರವಾರ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ತಾತ್ಕಾಲಿಕ ಆಸ್ಪತ್ರೆಯನ್ನು ಆಸ್ಪತ್ರೆ ಎಂದೇ ಪರಿಗಣಿಸಬೇಕು ಎಂದು ವಿಮೆ ಕಂಪನಿಗಳಿಗೆ ಸೂಚನೆ ನೀಡಿದೆ.
ವೈದ್ಯರ ಸೂಚನೆಯಂತೆ ಕೋವಿಡ್ ಸೋಂಕಿತ ರೋಗಿ ತಾತ್ಕಾಲಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ರೋಗಿಯ ಚಿಕಿತ್ಸಾ ವೆಚ್ಚವನ್ನು ವಿಮೆ ಕಂಪನಿಗಳು ತುಂಬಬೇಕು ಎಂದು ಹೇಳಿದೆ. ಒಂದು ವೇಳೆ ತಮ್ಮ ವ್ಯಾಪ್ತಿಯ ಆಸ್ಪತ್ರೆಗಳೇ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿದ್ದರೂ ಅದರಲ್ಲಿರುವ ರೋಗಿಗೂ ವಿಮೆ ನೀಡಬೇಕು ಎಂದು ತಿಳಿಸಲಾಗಿದೆ.

ಕೆಲವು ದಿನಗಳ ಹಿಂದೆ ಐಆರ್‌ಡಿಎಐ ವಿಮೆ ಕಂಪನಿಗಳಿಗೆ ನಗದು ರಹಿತ ಚಿಕಿತ್ಸೆಗೆ ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿತ್ತು. ಆಸ್ಪತ್ರೆಗೆ ದಾಖಲಾದ ವ್ಯಕ್ತಿ ವಿಮೆ ವ್ಯಾಪ್ತಿಗೆ ಒಳಪಟ್ಟಿದ್ದರೆ ನಗದು ರಹಿತ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ಜನರಲ್ ಇನ್ಷೂರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳು ಎಷ್ಟು ದರವನ್ನು ನಿಗದಿ ಮಾಡಬಹುದು ಎಂದು ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಆದರೆ, ಕೆಲವು ಆಸ್ಪತ್ರೆಗಳು ಈ ದರಕ್ಕೆ ಒಪ್ಪಿಗೆ ನೀಡಿರಲಿಲ್ಲ.
ವಿವಿಧ ರಾಜ್ಯಗಳ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೆಚ್ಚಿನ ದರವಿದೆ. ವಿಮೆ ಹೊಂದಿರುವವರು ಚಿಕಿತ್ಸೆ ಪಡೆದರೆ ಅದನ್ನು ವಿಮಾ ಕಂಪನಿಗಳು ಪಾವತಿ ಮಾಡಿದರೆ ರೋಗಿಗಳಿಗೂ ಸಹಾಯಕವಾಗಲಿದೆ.












Click it and Unblock the Notifications