ಮಹಿಳಾ ಚಾಲಕಿಯನ್ನ ಮದುವೆಯಾಗುವವರಾರು?: ಟೀಕಿಸಿದವರ ಬಾಯಿ ಮುಚ್ಚಿಸಿದ ದಿಟ್ಟೆ

"ಮಹಿಳಾ ಚಾಲಕಿಯನ್ನ ಯಾರು ತಾನೇ ಮದುವೆಯಾಗುತ್ತಾರೆ?" - ಇದು ಆಕೆ ಆಟೋರಿಕ್ಷಾ ಓಡಿಸಲು ಮುಂದಾದಾಗ ಸಮಾಜ ಕೇಳಿದ ಮೊದಲ ಪ್ರಶ್ನೆ. ಆದರೆ, ಆಕೆಗೆ ತನ್ನ ಸಾಮರ್ಥ್ಯವನ್ನ ಎಲ್ಲರೆದರೂ ಸಾಬೀತುಪಡಿಸಬೇಕು ಎನ್ನುವ ಹಂಬಲಕ್ಕಿಂತ ಹೆಚ್ಚಾಗಿ, ಸಂಕಷ್ಟದಲ್ಲಿದ್ದ ತನ್ನ ಕುಟುಂಬವನ್ನ ಕಾಪಾಡಿಕೊಳ್ಳುವ ಅನಿವಾರ್ಯತೆ ಇತ್ತು.

ಹೌದು, ಕಷ್ಟದ ಸಮಯದಲ್ಲಿ ಕುಟುಂಬದ ಆಧಾರಸ್ತಂಭವಾಗಿ ನಿಂತು ಸಮಾಜದ ಟೀಕೆಗಳಿಗೆ ಕಿವಿಗೊಡದೆ, ಅವೆಲ್ಲವನ್ನ ಟೀಕಿಸುವವರ ಮುಂದೆಯೇ ಮೆಟ್ಟಿ ನಿಂತ ಮಹಿಳೆಯೊಬ್ಬಳ ಸ್ಫೂರ್ತಿದಾಯಕ ಕಥೆ ಇದು. ಕೋವಿಡ್-19 ಸಾಂಕ್ರಾಮಿಕ ರೋಗ ಅನೇಕರ ಬದುಕನ್ನ ಕಸಿದುಕೊಂಡಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಆ ಸಂದರ್ಭದಲ್ಲಿ ಈ ಮಹಿಳಾ ಆಟೋ ಚಾಲಕಿ ತೋರಿದ ಧೈರ್ಯ ಇಂದು ಎಲ್ಲರಿಗೂ ಮಾದರಿ ಎನ್ನಬಹುದು.

Inspiring Story

ಕೊರೊನಾ ಎನ್ನುವ ಮಹಾಮಾರಿಯಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಯ್ತು. ಶಾಲೆ-ಕಾಲೇಜುಗಳು ಸಹ ಬಾಗಿಲು ಮುಚ್ಚಿದವು. ಇದೇ ಸಮಯದಲ್ಲಿ ಈ ಆಟೋ ಚಾಲಕಿ ತಂದೆ ಇದ್ದ ಒಂದು ಕೆಲಸವನ್ನ ಸಹ ಕಳೆದುಕೊಂಡರು. ಅಪ್ಪನ ಕೆಲಸವೇ ಕುಟುಂಬದ ಆದಾಯದ ಮೂಲವಾಗಿತ್ತು. ಅಲ್ಲದೇ ವಿಧಿಯ ಆಟ ಎಂಬಂತೆ, ಅದೇ ಸಮಯದಲ್ಲಿ ಆಕೆಯ ತಂದೆ ಕೈ ಕೂಡ ಮುರಿದುಹೋಯಿತು. ಆಗ ಮನೆಯ ಸಂಪೂರ್ಣ ಜವಾಬ್ದಾರಿ, ಆರ್ಥಿಕ ಸಂಕಷ್ಟ ಹಾಗೂ ಒಡಹುಟ್ಟಿದವರ ಭವಿಷ್ಯ ಎಲ್ಲವೂ ಇದ್ದಕ್ಕಿದ್ದಂತೆ ಈ ಯುವತಿಯ ಹೆಗಲೇರಿತು. ಆ ದಿನಗಳಲ್ಲಿ ಹೊಸ ಕೆಲಸ ಹುಡುಕುವುದು ಕೂಡ ಅಸಾಧ್ಯದ ಮಾತಾಗಿತ್ತು.

ಆದರೆ ಆಕೆಯ ಪುಣ್ಯ ಎನ್ನುವಂತೆ ಅವರ ಮನೆಯಲ್ಲಿ ಒಂದು ಹಳೆಯ ಆಟೋರಿಕ್ಷಾ ಇತ್ತು. ಇಂತಹ ಪರಿಸ್ಥಿತಿಯಲ್ಲಿ ಆಕೆ ಚುರು ಕುಗ್ಗದೆ, ಆ ಆಟೋರಿಕ್ಷಾದ ಕೀ ಕೈಗೆತ್ತಿಕೊಂಡು ರಸ್ತೆಗಿಳಿಯುವ ದಿಟ್ಟ ನಿರ್ಧಾರ ತೆಗೆದುಕೊಂಡಳು. ಆಟೋ ಮೂಲಕವೇ ತನ್ನ ಇಡೀ ಕುಟುಂಬಕ್ಕೆ ಆಸರೆಯಾಗಿ ನಿಂತಳು.

ಶಾಲಾ ಬಸ್ ಚಾಲಕಿಯಾಗಿ ಹೊಸ ಹೆಜ್ಜೆ

ಸಮಯ ಉರುಳಿದಂತೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು, ಕೊರೊನಾ ಕೇಸ್‌ಗಳೆಲ್ಲ ಕಮ್ಮಿಯಾಗಿ ಶಾಲೆಗಳು ಮರುಪ್ರಾರಂಭವಾದವು. ಆದರೆ ಆಕೆ ಅಲ್ಲಿಗೇ ಸುಮ್ಮನಾಗಲಿಲ್ಲ. ತನ್ನ ತಂದೆ ಓಡಿಸುತ್ತಿದ್ದ ಶಾಲಾ ಬಸ್‌ನ ಸ್ಟೀರಿಂಗ್ ಆಕೆ ಹಿಡಿದಳು. ಆಕೆ ಕೇವಲ ಶಾಲಾ ಮಕ್ಕಳನ್ನ ಮತ್ತು ಪ್ರಯಾಣಿಕರನ್ನ ಮಾತ್ರ ಜೊತೆಗೆ ಹೊತ್ತೊಯ್ಯಲಿಲ್ಲ, ಜೊತೆಗೆ ಸಮಾಜದಲ್ಲಿ ಆಕೆಗೆ ಮಾಡುತ್ತಿರುವ ಕಟು ಟೀಕೆಗಳನ್ನೂ ಹೊರಬೇಕಾಯಿತು. "ವಾಹನ ಓಡಿಸುವುದು ಮಹಿಳೆಯರ ಕೆಲಸವಲ್ಲ," " ಹೀಗೆ ನೀನು ಗಾಡಿ ಓಡಿಸುತ್ತಿದ್ದರೇ ನಿನ್ನನ್ನ ಯಾರು ಮದುವೆಯಾಗುತ್ತಾರೆ?", "ನಿಮ್ಮ ಮಗಳಿಗೆ ಇಂಥ ಕೆಲಸ ಮಾಡಲು ಏಕೆ ಬಿಡುತ್ತಿದ್ದೀರಿ?" ಎಂದು ಸಮಾಜ ಆಕೆಯ ತಂದೆಯನ್ನ ನಿರಂತರವಾಗಿ ಪ್ರಶ್ನಿಸುತ್ತಲೇ ಇದ್ದರು. ಆದರೆ, ಈ ಯಾವುದೇ ಮಾತುಗಳು ಆಕೆಯ ಆತ್ಮವಿಶ್ವಾಸವನ್ನ ಸ್ವಲ್ಪನೂ ಕುಗ್ಗಿಸಲು ಸಾಧ್ಯವಾಗಲಿಲ್ಲ.

ಸಮಾಜದ ನಿಂದನೆಗೆ ತಕ್ಕ ಉತ್ತರ

ಮಹಿಳೆಯರು ಕೇವಲ ಮನೆಯ ಅಡುಗೆಮನೆಗೆ ಮಾತ್ರ ಸೀಮಿತ ಎಂಬ ಕಾಲವೊಂದಿತ್ತು. ಆದರೆ ಆ ಕಾಲ ಈಗ ಬದಲಾಗಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪೂ ಮೂಡಿಸುತ್ತಿದ್ದಾರೆ. ಆದರೂ, ಸಾರಿಗೆ ಕ್ಷೇತ್ರದಲ್ಲಿ ಮಹಿಳೆಯರು ಕೆಲಸ ಮಾಡುವುದನ್ನ ಇನ್ನೂ ಕೂಡ ನಮ್ಮ ಸಮಾಜ ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಈ ಯುವತಿ ಆಟೋ ಓಡಿಸಲು ರಸ್ತೆಗಿಳಿದಾಗ ಜನರ ಪ್ರತಿಕ್ರಿಯೆಗಳು ಹೇಗಿದ್ದೀರಬೇಕು?. ಹೆಣ್ಣುಮಕ್ಕಳು ಬೀದಿಯಲ್ಲಿ ವಾಹನ ಓಡಿಸಿಕೊಂಡು ಹೋದರೆ ಮುಂದೆ ಮದುವೆಗೆ ಕಷ್ಟ ಎಂಬ ಹಳೇ ಕಾಲದ ಮನಸ್ಥಿತಿಯ ಮಾತುಗಳು ಆಕೆಗೆ ಪದೇ ಪದೇ ಕೇಳಿಬರುತ್ತಿದ್ದವು. ಆದರೆ, ಈ ಮಾತುಗಳನ್ನೇಲ್ಲ ಲೆಕ್ಕಿಸದೆ ತನ್ನ ಗುರಿಯತ್ತ ಗಮನಹರಿಸಿದ ಆಕೆ, ತನ್ನ ಶ್ರಮದಿಂದಲೇ ಆ ಎಲ್ಲಾ ಟೀಕೆಗಳಿಗೆ ತಕ್ಕ ಉತ್ತರ ನೀಡಿದ್ದಾಳೆ.

ತಂದೆಯ ಬೆಂಬಲ

ಊರವರು ಎಷ್ಟೇ ಟೀಕಿಸಿದರೂ, ಆಕೆಯ ತಂದೆ ಮಾತ್ರ ಆಕೆಯನ್ನ ಎಂದಿಗೂ ತಡೆಯಲಿಲ್ಲ. ಇಡೀ ಜಗತ್ತೇ ಆಕೆಯ ಸಾಮರ್ಥ್ಯವನ್ನ ಅನುಮಾನಿಸಿದಾಗ, ಬೆನ್ನಿಗೆ ನಿಂತು ಆಕೆಯಲ್ಲಿ ಹುರಿದುಂಬಿಸಿದ್ದು ಆಕೆಯ ತಂದೆ. ತಂದೆಯ ಬೆಂಬಲದಿಂದಾಗಿ ಆಕೆ ಸಮಾಜದ ಕಟ್ಟುಪಾಡುಗಳನ್ನ ಮುರಿದು ಮುನ್ನುಗ್ಗಿದ್ದಾಳೆ. ಇಂದು ಆಕೆ ಬೆಳಗಿನ ಜಾವ ಶಾಲಾ ಬಸ್ ಓಡಿಸಿದರೆ, ಸಂಜೆಯಾಗುತ್ತಿದ್ದಂತೆ ಆಟೋರಿಕ್ಷಾ ಚಲಾಯಿಸುತ್ತಾಳೆ.

ತನ್ನ ಈ ಸ್ಫೂರ್ತಿದಾಯಕ ಪಯಣವನ್ನ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುವ ಆಕೆ, 'ಧೈರ್ಯಕ್ಕೆ ಯಾವುದೇ ಲಿಂಗಭೇದವಿಲ್ಲ' ಎಂಬುದನ್ನು ಇಂದಿನ ಯುವತಿಯರಿಗೆ ಸಾರಿ ಹೇಳುತ್ತಿದ್ದಾಳೆ. ಕಷ್ಟಕಾಲದಲ್ಲಿ ಕುಗ್ಗಿಹೋಗದೆ, ಎದುರಾದ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡ ಈ ದಿಟ್ಟ ಮಹಿಳಾ ಆಟೋ ಚಾಲಕಿಯ ಸಾಧನೆ ಮಹಿಳಾ ಸಬಲೀಕರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+