ಹೆಣ್ಣೆಂದು ಜರಿದಿದ್ದ ಅಪ್ಪನಿಗೆ ತನ್ನ ಸಾಧನೆಯ ಮೂಲಕ ಉತ್ತರ ನೀಡಿದ ಮೊದಲ ಪಿಂಕ್ ಕ್ಯಾಬ್ ಡ್ರೈವರ್ ಮಾನಸಿ
ಸಮಾಜದಲ್ಲಿ ಹೆಣ್ಣುಮಕ್ಕಳು ಎಷ್ಟೇ ಸಾಧನೆ ಮಾಡಿದರೂ, ಈಗಲೂ ಗಂಡು ಮಗುವೇ ಬೇಕು ಎಂದು ಆಸೆಪಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಜಗತ್ತು ಅಥವಾ ದೇಶ ಎಷ್ಟೇ ಮುಂದುವರೆಯುತ್ತಿದ್ದರೂ ಕೂಡ ಗಂಡಿನ ಮೇಲಿಯುವ ಅತಿಯಾದ ವ್ಯಾಮೋಹ ಹಾಗೂ ಹೆಣ್ಣಿನ ಬಗ್ಗೆಯಿರುವ ಕೀಳು ಭಾವನೆ ಮಾತ್ರ ಒಂದು ಚೂರು ಕಡಿಮೆಯಾಗಿಲ್ಲ.
ಹೆಣ್ಣಾಗಿ ಹುಟ್ಟಿದ್ದಕ್ಕಾಗಿಯೇ ಹೆತ್ತ ತಂದೆಯಿಂದಲೇ ತಿರಸ್ಕಾರಕ್ಕೆ ಒಳಗಾಗುವವರ ಸಂಖ್ಯೆ ನಮ್ಮ ಸಮಾಜದಲ್ಲಿ ಹೆಚ್ಚಿದೆ. ಅದರಲ್ಲಿ ಮಾನಸಿ ಮೃಧಾ ಎನ್ನುವವರು ಕೂಡ ಒಬ್ಬರು. ಆದರೆ, ಅವಮಾನ, ಬಡತನ, ಒಂಟಿತನ ಯಾವುದಕ್ಕೂ ಜಗ್ಗದ ಅವರು ಇಂದು ಕೋಲ್ಕತ್ತಾ ನಗರದ ಪಿಂಕ್ ಕ್ಯಾಬ್ ಚಾಲಕಿ ಮಾನಸಿ ಎಂದೇ ಪ್ರಸಿದ್ಧರಾಗಿದ್ದಾರೆ.

ಇದು ಕೇವಲ ಒಬ್ಬ ಮಹಿಳೆ ಕಥೆಯಲ್ಲ, ಇಡೀ ಸಮಾಜಕ್ಕೆ ಮಾದರಿಯಾಗಬಲ್ಲ ಒಂದು ಅಸಾಮಾನ್ಯ ಯಶೋಗಾಥೆ ಎನ್ನಬಹುದು.
ಮಾನಸಿ ಜನಿಸಿದಾಗ ಅವರ ತಂದೆ ಆಕೆಯನ್ನ ನೋಡಲು ಆಸ್ಪತ್ರೆಗೂ ಬರಲಿಲ್ಲವಂತೆ. ಕಾರಣ, ಅವರಿಗೆ ಗಂಡು ಮಗುವಿನ ನಿರೀಕ್ಷೆ ಇತ್ತು. ನಂತರ ಮತ್ತೊಂದು ಕೂಡ ಹೆಣ್ಣು ಮಗು (ಮಾನಸಿ ತಂಗಿ) ಜನಿಸಿದಾಗ, ಆಕೆಯ ತಂದೆ ಇಡೀ ಕುಟುಂಬವನ್ನೇ ಅನಾಥವಾಗಿ ಬಿಟ್ಟು ಹೋದರು. ತಾಯಿ ಬೇರೆಯವರ ಮನೆಗಳಲ್ಲಿ ಅಡುಗೆ ಕೆಲಸ ಮಾಡಿ ಮಕ್ಕಳನ್ನ ಸಾಕಿದರು.
ಬಡತನದ ಕಾರಣದಿಂದ ಒಂಬತ್ತನೇ ತರಗತಿಗೆ ಶಾಲೆಯನ್ನ ಬಿಟ್ಟ ಮಾನಸಿ, ಚಿಕ್ಕ ವಯಸ್ಸಿನಲ್ಲೇ ವಿವಾಹವಾದರು. ಆದರೆ, ವಿಧಿಯಾಟ ಬೇರೆಯೇ ಇತ್ತು ನೋಡಿ. ಮದುವೆಯಾದ ಕೆಲವೇ ವರ್ಷಗಳಲ್ಲಿ ಗಂಡನನ್ನ ಸಹ ಕಳೆದುಕೊಂಡು ವಿಧವೆಯಾದರು.
ಕೈಗೊಂದು ಪುಟ್ಟ ಮಗು, ಅತ್ತೆ-ಮಾವನ ಕಿರುಕುಳ ಮತ್ತು ತವರು ಮನೆಯ ಆರ್ಥಿಕ ಸಮಸ್ಯೆ ಅವರನ್ನ ಬೀದಿಗೆ ತಂದು ನಿಲ್ಲಿಸಿತು. ಆದರೂ ಅವರು ಹೆದರಲಿಲ್ಲ. ಮಗುವಿನ ಭವಿಷ್ಯಕ್ಕಾಗಿ ಮನೆಗೆಲಸ, ಬೀದಿಯಲ್ಲಿ ಬಟ್ಟೆ ಮಾರುವುದು, ಹಾಗೂ ಬ್ಯಾಂಕ್ವೊಂದರಲ್ಲಿ ಸಣ್ಣಪುಟ್ಟ ಕೆಲಸಗಳನ್ನ ಮಾಡುತ್ತಾ ಬದುಕು ಕಟ್ಟಿಕೊಳ್ಳಲು ಆರಂಭಿಸಿದರು.
ಬದುಕಿಗೆ ತಿರುವು ನೀಡಿದ 'ವುಮೆನ್ ಆನ್ ವೀಲ್ಸ್'
ಸದಾ ಹೊಸ ದಾರಿಯ ಹುಡುಕಾಟದಲ್ಲಿದ್ದ ಮಾನಸಿಗೆ ಆಜಾದ್ ಫೌಂಡೇಶನ್ನ ವುಮೆನ್ ಆನ್ ವೀಲ್ಸ್ ಕಾರ್ಯಕ್ರಮದ ಬಗ್ಗೆ ತಿಳಿಯಿತು. ಇದು ಆಕೆಯ ಬದುಕಿಗೆ ಹೊಸ ಭರವಸೆ ನೀಡಿತು. ಅಲ್ಲಿ ಅವರು ಕೇವಲ ವಾಹನ ಚಾಲನೆಯನ್ನಷ್ಟೇ ಕಲಿಯಲಿಲ್ಲ. ಬದಲಿಗೆ ಮ್ಯಾಪ್ ರೀಡಿಂಗ್, ಪ್ರಥಮ ಚಿಕಿತ್ಸೆ, ಸಂವಹನ ಕಲೆ ಹಾಗೂ ತನ್ನನ್ನ ತಾನು ರಕ್ಷಣೆ ಮಾಡಿಕೊಳ್ಳಲು ಸೆಲ್ಪ್ ಡಿಪೆನ್ಸ್ ತರಬೇತಿಯನ್ನೂ ಪಡೆದರು.
ತರಬೇತಿ ಪೂರ್ಣಗೊಂಡ ಬಳಿಕ ಸಖಾ ಎಂಬ ಮಹಿಳಾ ಸುರಕ್ಷಿತ ಸಾರಿಗೆ ಸಂಸ್ಥೆಯೊಂದಿಗೆ ಸೇರಿ ವೃತ್ತಿಪರ ಚಾಲಕಿಯಾಗಿ ಕೆಲಸ ಆರಂಭಿಸಿದರು. ಜೊತೆಗೆ ಇತರ ಮಹಿಳೆಯರಿಗೂ ಡ್ರೈವಿಂಗ್ ಹೇಳಿಕೊಡುವ ತರಬೇತುದಾರರಾಗಿಯೂ ಬೆಳೆದರು.
ಕೋಲ್ಕತ್ತಾದ ಮೊದಲ ಪಿಂಕ್ ಕ್ಯಾಬ್ ಚಾಲಕಿಯಾಗಿ ಆಯ್ಕೆ
2019ರಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಗತಿಧಾರ ಯೋಜನೆಯಡಿ ಮಹಿಳೆಯರಿಗಾಗಿಯೇ ಪಿಂಕ್ ಕ್ಯಾಬ್ ಸೇವೆಯನ್ನ ಪರಿಚಯಿಸಿತು. ಈ ಯೋಜನೆಗೆ ಸುಮಾರು 150 ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಆಯ್ಕೆಯಾದ ಮೊದಲ ಹೆಸರು ಮಾನಸಿ ಮೃಧಾ ಅವರದ್ದು.
ಹೌದು, ಅಂದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಕ್ಯಾಬ್ ಸೇವೆಗೆ ಹಸಿರು ನಿಶಾನೆ ತೋರಿದರು. ಈ ಮೂಲಕ ಸ್ವಂತ ಕಾರು ಹೊಂದಬೇಕು ಮತ್ತು ಆರ್ಥಿಕವಾಗಿ ಸ್ವತಂತ್ರಳಾಗಬೇಕು ಎಂಬ ಮಾನಸಿಯ ಬಹುದಿನದ ಕನಸು ನನಸಾಯಿತು. ಆಕೆ ಕೋಲ್ಕತ್ತಾದ ಮೊದಲ ಮಹಿಳಾ ಪಿಂಕ್ ಕ್ಯಾಬ್ ಚಾಲಕಿಯಾಗಿ ಇತಿಹಾಸ ಬರೆದರು.
ಪುರುಷ ಪ್ರಾಬಲ್ಯದ ವಲಯದಲ್ಲಿನ ವಿರೋಧ
ಕ್ಯಾಬ್ ಚಾಲನೆ ಎಂಬುದು ಬಹುಪಾಲು ಪುರುಷರೇ ತುಂಬಿರುವ ಕ್ಷೇತ್ರ ಅಲ್ಲವೇ?. ಇಲ್ಲಿ ಮಹಿಳೆಯರು ಈ ಕ್ಷೇತ್ರಕ್ಕೆ ಬರುವುದನ್ನ ಅನೇಕ ಪುರುಷ ಚಾಲಕರು ಸಹಿಸಲಿಲ್ಲ. ಮಾನಸಿ ತಮ್ಮ ಕಾರು ಪಾರ್ಕಿಂಗ್ ಮಾಡುವಾಗ ಪುರುಷ ಚಾಲಕರಿಂದ ತೀವ್ರ ವಿರೋಧ, ಕಿರುಕುಳ ಎದುರಿಸಬೇಕಾಯಿತು.
"ಮಹಿಳೆಯರು ಈ ಕ್ಷೇತ್ರದಲ್ಲಿ ಬೆಳೆಯಬಾರದು ಎಂಬ ಕಾರಣಕ್ಕೆ ಅವರು ಹೀಗೆ ಮಾಡುತ್ತಿದ್ದಾರೆ ಎಂಬುದು ಅರ್ಥವಾದಾಗ, ನಾನು ಹಿಂದೆ ಸರಿಯದಿರಲು ನಿರ್ಧರಿಸಿದೆ. ನನ್ನ ಹೋರಾಟ ಕೇವಲ ನನಗಾಗಿ ಮಾತ್ರವಲ್ಲ, ನನ್ನಂತೆಯೇ ಶೋಷಣೆಗೊಳಗಾಗುವ ಎಲ್ಲಾ ಮಹಿಳಾ ಚಾಲಕರಿಗಾಗಿ," ಎಂದು ಅವರು ದಿಟ್ಟತನದಿಂದ ಹೇಳಿದ್ದರು.
ಒಟ್ಟಾರೆಯಾಗಿ, ಹೆಣ್ಣೆಂಬ ಕಾರಣಕ್ಕೆ ತಿರಸ್ಕರಿಸಿದ ತಂದೆಗೆ ತನ್ನ ಬದುಕಿನ ಆಯ್ಕೆಗಳನ್ನ ನಿರ್ಧರಿಸಲು ಸಾಧ್ಯವಿಲ್ಲ ಎಂಬುದನ್ನು ಮಾನಸಿ ಸಾಬೀತುಪಡಿಸಿದ್ದಾರೆ. ಇಂದು ಡ್ರೈವಿಂಗ್ ಸೀಟ್ನಲ್ಲಿ ಕುಳಿತು ವಾಹನವನ್ನ ಮಾತ್ರವಲ್ಲ, ತನ್ನ ಬದುಕಿನ ದಿಕ್ಕನ್ನೂ ಅವರೇ ಯಶಸ್ವಿಯಾಗಿ ನಿಯಂತ್ರಿಸುತ್ತಿದ್ದಾರೆ.


Click it and Unblock the Notifications
